ಆಗಸ್ಟ್ 19, 2015

ಹನಿ ಹನಿ ಇಬ್ಬನಿ..!


. ಆ ಬೆಳಂದಿಗಳ ರಾತ್ರಿಗೆ
ಅವಳ ಕಂಗಳಲ್ಲಿ
ಬೀಡು ಬಿಟ್ಟಿದ್ದ ಇವನ ಕಂಗಳು
ಚಂದಿರನ ಬೆಳಕು ಮಬ್ಬು ಎಂದವು!

.ಬೂದಿ ಮುಚ್ಚಿತ್ತು
ಕೈಯಿಟ್ಟೆ
ಸುಟ್ಟುಹೋಯಿತು!

.ಬಡ ತಾಯಿಯ ಮಡಿಲಲ್ಲಿ
ಹಸುಗೂಸು
ಮತ್ತವರ ನಗು!

.ಪೂರ್ಣವಿರಾಮವಿಟ್ಟಳು
ಸನಿಹ ಬಂದವ ಹಣೆಗೊಂದು
ಮುತ್ತನಿಟ್ಟ-ಬೊಟ್ಟನಿಟ್ಟ
ಬದುಕು ಮುಂದುವರಿಯಿತು!

. ಅವ ಗೆದ್ದ ಹೆಣ್ಣು
ಪ್ರೀತಿಯ ಪ್ರತಿಷ್ಠೆ
ಬುಸುಗುಟ್ಟಿತು
ಅಂಬೆ ಧಿಗ್ಗನೆದ್ದಳು!

.ಅವಳ ಮೌನ
ಅರ್ಥವಾಗುವುದಿಲ್ಲವಂತೆ
ಇವನಿಗೆ
ಗದ್ದಲ ಶುರುವಿಟ್ಟಿದ್ದಾಳೆ!

.ಆಷಾಡಕ್ಕೆ ತವರಿಗೆ ಬಂದವಳಿಗೆ
ಮಳೆ ಯಾಕಿಷ್ಟು ಸುಡುತ್ತದೆ
ಎಂಬ ಸೋಜಿಗವಾಗಿದೆ!

.ಕೋಗಿಲೆಯೊಂದು
ಬೋಳು ಮರದ ಟೊಂಗೆಯಲ್ಲಿ
ಎದೆಬಿರಿಯೇ
ಹಾಡುತ್ತಿತ್ತು.

.ಬೇಲಿ ಬದಿ
ಬಿರಿದು ನಿಂತ ಹೂವೆಂದರೆ
ಎಲ್ಲರಿಗೂ ಆಸೆ
ಮೋಜು..!

೧೦.ಕಥೆಗಾರನ ಕಥೆಯಲ್ಲಿ
ನಾಯಕಿ ಸತ್ತಿದ್ದಳು
ಎದುರು ಮನೆಯ ಮುಂದೆ
ರಂಗೋಲಿ ಬಿಡಿಸುತ್ತಿದ್ದವಳು
ಸುಖವಾಗಿದ್ದಳು!


(ಜುಲಾಯಿ ೨೦೧೫ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಿತ)


ಜುಲೈ 6, 2015

ಹನಿ ಹನಿ ಇಬ್ಬನಿ..!

1.ನಿನ್ನ ನೆನಪಿಗೆ
ಇವನೆದೆಯಲ್ಲಿ ಅಡಗಿ
ಬಿಕ್ಕಿಬಿಕ್ಕಿ ಅತ್ತುಕೊಂಡೆ
ಮೊದಲರಾತ್ರಿ ಭಯವಿರಬೇಕು
-ಅಂದುಕೊಂಡ ಇವ!

2.ಈ ಧೋ ಮಳೆಗೆ
ಕಾಗದದ ದೋಣಿ ಉಳಿಯುವುದಿಲ್ಲ
ಕನಸು ಕಟ್ಟುವುದಾದರೇ 
ಹಡಗೇ ಕಟ್ಟಬೇಕು!

3.ಕವಿತೆಯೆಂದರೆ
ಕವಿಯ ಒಳಹರಿವು
ಹೊರಹರಿಯುವುದು!

4.ರಾತ್ರಿ ಕನಸಿಗೆ ಬರುತ್ತೇನೆಂದು
ಹೇಳಿದ್ದ ಹುಡುಗಾ..!
ನಿದ್ದೆಗೆ ಜಾರುವ ಮುನ್ನ
ಅವನನ್ನು ದಿಂಬಿನಡಿಗೆ ತಂದುಕೊಂಡು
ಕನಸ ಖಾತ್ರಿಪಡಿಸಿಕೊಂಡೆ!

5.ತಿಳಿಯಲಿಲ್ಲವಂತೆ ಅವನಿಗೆ
ಎದೆಯಲ್ಲಿ ಜೀಕಿದ ಹಾಡು
ಹೌದು!
ಮೌನಕ್ಕೆ ಬಾಯಿಲ್ಲ!

6.ಅವಳು ಸ್ನಾನದಿಂದ ಬಂದು
ಜಿನುಗುತ್ತಿದ್ದಾಳೆ..!
ಇದೀಗ
ಇವನೊಳಗೆ ಭರಪೂರ ಮಳೆ.

7.ಎದೆಕೊಳದ ಶಾಂತ ನೀರಿಗೆ
ಕಲ್ಲು ಬಿದ್ದಿದೆ
ಕಂಗಳು ತುಳುಕಿದೆ!

8.ಸ್ನಾನದ ಮನೆಯಿಂದ
ಗೆಜ್ಜೆ ಸದ್ದು ಮಾಡುತ್ತಾ
ಹೊರಗೆ ಬರುವ ಜಿಂಕೆಯ ಕಂಗಳಲಿ
ಹುಲಿಯ ನಶೆ.
ಛೇ!! ಆಷಾಡದಲ್ಲಿ ಅಧಿಕಮಾಸ!

9.ಮಳೆಗೆ ಬೊಗಸೆಯೊಡ್ಡುವುದೆಂದರೆ
ಅವನೊಲುಮೆಯಲ್ಲಿ
ಒಂದೀಡಿ ನೆನೆಯಬೇಕೆಂದಿದ್ದವಳು
ಇಷ್ಟಾದರೂ ಸಿಗಲೀ ಎಂಬಂತೆ
ಕೈಚಾಚುವುದು..!!

10.ಮಾಗಿಯಂತೆ
ನೆನಪೆಲ್ಲಾ ಕಳಚಿ
ಬೋಳಾಗಿ ನಿಂತಿದೆ ಮರ
ನಾನೂ ನಿನ್ನನ್ನು ಕಳಚಿದ್ದೇನೆ
ಮಾಗಿದ್ದೇನೆ..!


ಜೂನ್ 20, 2015

ಆಷಾಡದ ಮಳೆ


ಕಾಲೇಜು ಮುಗಿವ ಹೊತ್ತಿಗೆ
ಕಾದಿದ್ದು ಬರುವ ಮಳೆಯೆಂದರೆ
ಒಂದೇ ಕೊಡೆಯಡಿಯಲ್ಲಿ
ಮನೆ ತಿರುವಿನವರೆಗೆ ನಿನ್ನೊಡನೆ ನಡೆದ ಸುಖ!
ಕಿಟಕಿಯಾಚೆ ಕಣ್ಣು ನೆಟ್ಟು
ಮಳೆಯನ್ನು ಒಳದೆಳೆದುಕೊಳ್ಳುವಾಗ
ನೀ ಕೊಟ್ಟ ಗೊಂಬೆಗೆ
ಮಡಿಲಲ್ಲಿ ಘೋರ ನಿದ್ದೆ!
ಗುಡುಗಿನ ಆರ್ಭಟಕ್ಕೂ ಅಂಜದೇ
ಅಮ್ಮನ ಮಗ್ಗುಲನ್ನು ಅಗಲಿ
ರೂಮು ಸೇರಿಕೊಳ್ಳುವುದೆಂದರೆ
ನನಗೆ ನಿನ್ನದೇ ಶಾಪ!

ಆಷಾಡಕ್ಕೆ ಮನೆಗೆ ಬಂದ ಅಕ್ಕ
ಫೋನಿಗೆ ಕಚ್ಚಿಕೊಂಡು
ಕಿಲಕಿಲ ನಗುವಾಗ
ತಟ್ಟುತ್ತದೆ ನನಗೂ ಆಷಾಡದ ಬಿಸಿ!

ಫೋನಿನ ತರಂಗಳಲ್ಲಿ
ಬಿಸಿಯುಸಿರುಗಳ ತಲ್ಲಣ
ನಿನ್ನ ಮರುಭೂಮಿಯ ನಗರಿಗೂ
ಆಷಾಡದುರಿಯ ಅರಿವು!

ಅಪ್ಪಯ್ಯನೆನ್ನುತ್ತಿದ್ದರು
ಚಿಕ್ಕವಳ ಮದುವೆಯೂ
ಈ ಸರ್ತಿಯೇ ಮುಗಿಸುವುದಂತೆ
ನಿನಗಿಷ್ಟರಲ್ಲೇ ಬುಲಾವ್ ಬರುತ್ತದೆ

ಬಂದು ಬಿಡಪ್ಪಾ ದೊರೆ
ಅಕ್ಕನೆನ್ನುತ್ತಿದ್ದಳು
ಈ ಮಳೆಗಾಲ ಮುಗಿಯುತ್ತಿದ್ದಂತೆ
ಘೋರ ಚಳಿಯಂತೆ ಇಲ್ಲಿ..!!ಏಪ್ರಿಲ್ 3, 2015

ಹನಿ ಹನಿ ಇಬ್ಬನಿ!

1. ಅವನು ಅವಳ
ತುಟಿಗಳನ್ನೇ ದಿಟ್ಟಿಸುತ್ತಿದ್ದ
-ಬಾಯರಿದವನಂತೆ
ಇವಳು ಅವನ
ಭರ್ತಿ ಜೇಬನ್ನೇ ನೋಡುತ್ತಿದ್ದಳು
-ಹಸಿದವಳಂತೆ!

2. ನೆತ್ತಿಯ ಮೇಲೆ
ಹಸಿದ ಕತ್ತಿಯು ತೂಗು
ಬಿರುಕು ಬಿಟ್ಟ
ಹೃದಯದಲ್ಲಿ
ನೆತ್ತರ ಒಸರು!

3.ನೋವುಗಳಿಗೆ
ನನ್ನ ಭರವಸೆಯ ಜ್ಯೋತಿಯನ್ನು
ನಂದಿಸುವ ಶಕ್ತಿಯಿಲ್ಲಾ
ನನ್ನ ಕಣ್ಣ ಕಾಡಿಗೆ
ಕಣ್ಣೀರಿಗೆ ಅಳಿಯುವುದಿಲ್ಲಾ!

4.ಅವನೆಂದರೆ
ಬೆಳಂದಿಗಳ ರಾತ್ರಿ
ಭರಪೂರ ಪ್ರೀತಿ ಸುರಿವ
ಚಂದಿರ!

5. ಒಂದೆರಡು ಹನಿ
ಬೆಳಕಾದರೂ ನನ್ನೊಳಗೆ
ಉಳಿಸಿಹೋಗು
ಬರಿದು ಮಾಡದಿರೆನ್ನ
ಆತ್ಮನದೊಂದು ಕಿಡಿಯೂ ಇಲ್ಲದಂತೆ!

6.ನನ್ನ ಸೋಲಿನಲ್ಲಿ
ನಿನ್ನ ಗೆಲುವುದಿರುವುದೇ ಆದರೆ
ಗೆದ್ದು ಬಿಡು ನನ್ನ
ನಿನಗೆ ನಾ ಸೋತಿದ್ದೇನೆ!

7.ಅವಳು ನಗೆ ಚೆಲ್ಲಿ
ಮುಂದೆ ಹೋಗುತ್ತಿದ್ದಳು
ಹಿಂದಿಂದೆ ಹೋಗುತ್ತಿದ್ದ ಇವ
ನಗೆಯ ಹೆಕ್ಕಿ ಜೋಳಿಗೆ ತುಂಬಿಸುತ್ತಿದ್ದ!

8.ಬಗ್ಗಿಸಿದ ತಲೆ
ನೆಲ ಕಂಡಾಗಿದೆ
ಇನ್ನೇನಿದ್ದರೂ
ಮುಗಿಲ ಕಡೆ!

9.ಸಿಹಿಯೆಂದರೆ ಅಷ್ಟಕಷ್ಟೇ ಇವನಿಗೆ
ಅಂದ ಅತ್ತೆಯ ಮಾತಿಗೆ
ಹಿಂದಿನ ರಾತ್ರಿಯಷ್ಟೇ
ಮಧುಪಾನ ಮಾಡಿದ್ದ ಗಂಡನ ನೆನಪಿಗೆ
ಇವಳ ತುಟಿಯಲ್ಲೊಂದು ಮಿಂಚು!

10.ಚಂದ್ರನ ಬೆಳಕ
ಮೀಯ ಹೊರಟವಳಿಗೆ
ಆ ಕ್ಷಣ
ತನ್ನ ಹಗಲಿಗೊದಗುವ ಸೂರ್ಯನ
ನೆನಪಾಗುವುದಿಲ್ಲಾ!ಮಾರ್ಚ್ 26, 2015

ಹನಿ ಹನಿ ಇಬ್ಬನಿ..!

1.ಅವನ ಚಿಗುರು ಮೀಸೆಯಡಿಯ
ತುಂಟ ನಗೆಯು
ಅಮಲು ಆಗಿರುವುದೇ ಆದರೆ
ನಾನು ಅದರ ವ್ಯಸನಿ!

2. ಪ್ರೇಮ ಪ್ರವಾಹವೊಂದು
ನುಗ್ಗಿ ಬರುತ್ತಲಿತ್ತು
ಅದ್ಯಾರೋ ಅಲ್ಲಿ
ಸಾಗರನೂರಿನ ದಾರಿ ತೋರಿಸಿದರು
ಇದೀಗ ಬಳುಕುತ್ತಾ ಹೆಜ್ಜೆಯಿಡುತ್ತಿದೆ!


3.ಇನ್ನೇನು ಮೋಡಗಳೆರಡು
ಸಂಧಿಸಿ ಒಲವ ಧಾರೆಯಾಗಬೇಕಿತ್ತು
ಅವಳಿಗೆ ಅದ್ಯಾರ ನೆನಪಾಯಿತೋ
ಒಂದು ಹೆಜ್ಜೆ ಹಿಂದೆ ಸರಿದಳು!


4. ಈ ರಾತ್ರಿ ಮಳೆಗೆ
ಬಾವಿಕಟ್ಟೆಯೊಡೆದು ಹರಿಯುತ್ತಿತ್ತು.
ಇವಳು ಒಳಮನೆ ಸೇರಿದಳು.
ಅವನಲ್ಲಿ ಮರದ ಕೆಳಗೆ ಒಬ್ಬಂಟಿ
ನೆನೆಯುತ್ತಿದ್ದ!


5. ಅವರಿಬ್ಬರಲ್ಲಿ
ಕಣ್ಣಲ್ಲಿ ಕಣ್ಣು ನೆಡುವ ಪಂದ್ಯ

ಶುರುವಾಯಿತು
ಅವನ ಕಣ್ಣ ಬೆಂಕಿ,ಇವಳ ತಲುಪಿತು
ಪಂದ್ಯ ಮುಗಿಯಿತು!
ಡಿಸೆಂಬರ್ 24, 2014

ಹನಿ ಹನಿ ಇಬ್ಬನಿ...!

1.ಬೆಳಂದಿಗಳ ತಂಪು ರಾತ್ರಿ
ಹುಡುಗಿ ಬೆಚ್ಚಗಿನ ಕನಸು ಹೆಣೆಯುತ್ತಿದ್ದಳು
ಒಳಗಿನ ಕೋಣೆಯ ಹುಡುಗಾ
ಧಗಧಗ ಉರಿಯುತ್ತಿದ್ದ..!

2.ನಿನ್ನಿಂದ ನಿರಾಕರಿಸಲ್ಪಟ್ಟ ಪ್ರೇಮ
ಮತ್ತು
ನನ್ನಿಂದ ನಿರಾಕರಿಸಲ್ಪಡುವ ನೋವುಗಳದ್ದು
ಒಂದೇ ತೂಕ..!

3. ಅವ
ಬೆಟ್ಟದ ತುದಿಯಲ್ಲಿ
ನನ್ನ ನೆನೆದನಂತೆ
ನನಗಿಲ್ಲಿ ಥಂಡಿ -ಜ್ವರ -ನೆಗಡಿ -ಕೆಮ್ಮು !

4. ಬಾಂಬ್ರರ ಮನೆಹುಡುಗನಿಗೆ
ಸಸ್ಯಹಾರದ ಪಾಠ ನಡೆಯುತ್ತಿತ್ತು
ಬೇಲಿಯಾಚೆ ಕಣ್ಣು ನೆಟ್ಟಿದ್ದ ಅವ
ಹೊಲತಿಯ ಬೆತ್ತಲಾಗಿಸುತ್ತಿದ್ದ!

5. ಒಂಟಿ ಮರದ ಗೆದ್ದಲ ಕೊಂಬೆಗೆ
ಹಕ್ಕಿ ಗೂಡು ಕಟ್ಟಲಿ
ನಾ ಚಿಲಿಪಿಲಿ ಕೇಳುತ್ತೇನೆಂಬ
ಹುಚ್ಚುಚ್ಚು ಹಂಬಲ!ಡಿಸೆಂಬರ್ 6, 2014

ಹನಿ ಹನಿ ಇಬ್ಬನಿ..!

1. ಬೆಳದಿಂಗಳಿಗೆ
ಮೈಚೆಲ್ಲಿ ಮಲಗಿದ್ದ ಅವಳನ್ನು
ಅನಾಮತ್ತು ಎತ್ತಿಕೊಂಡು
ಒಳಗೆ ಹೋದ ಅವನಿಗಿದ್ದಿದ್ದು
ಚಂದ್ರನ ಮೇಲೆ ಮತ್ಸರವಾ..?

2. ಹುಡುಗಾ...!
ಭೌತಶಾಸ್ತ್ರದಲ್ಲಷ್ಟೇ
ವಿದ್ಯುತ್ ಪ್ರವಹಿಸುವುದು ಎಂದುಕೊಂಡಿದ್ದೆ.
ನೀನೊಮ್ಮೆ ಸ್ಪರ್ಶಿಸಿದ ಮೇಲಷ್ಟೇ
ಜೀವವಿಜ್ಞಾನದಲ್ಲೂ ವಿದ್ಯುತ್ ಪ್ರವಹನವಿರುವ
ಸಂಗತಿ ತಿಳಿದದ್ದು.

3. ಅನೈತಿಕ ಸಂಬಂಧವೆಂದರೆ

ಬರಗೆಟ್ಟ ಬರಗಾಲದ ದಿನಗಳಲಿ
ಮಳೆಗೆ ಹೊಂಚು ಹಾಕಿ
ಕೂತ ಇಳೆಯೊಡಲ ಬೆಂಕಿ
ಷವರಿನಡಿಯಲ್ಲಿ ನಿಂತು
ಧಗೆ ತೀರಿಸಿಕೊಳ್ಳುವುದು ಅಷ್ಟೇ!

4. ನೀ ಕೊಟ್ಟ
ಯಾವುದನ್ನೂ ನಾ ಹಿಂದಿರುಗಿಸಿಲ್ಲ
ಪ್ರೀತಿಯನ್ನೂ ..!?
ಅದಕ್ಕೆ ನನ್ನೊಡಲಿಗೆ
ನೋವು ಸುರಿದು ಹೋಗಿ ಬಿಟ್ಟೆಯಾ?

5.ಪ್ರೇಮದೊಡಲ ಸೇರೋ ತವಕಕ್ಕೆ
ಒಂದೇ ಉಸಿರಿನಲ್ಲಿ

ಧಾವಿಸಿ ಬಂದು

ಶರಧಿಯೊಳಗೆ ಲೀನವಾದ

ನದಿಗೀಗ ಅಸ್ವಿತ್ವದ ಹಂಗಿಲ್ಲ