ಡಿಸೆಂಬರ್ 26, 2011

ಕಿಚ್ಚು..


ಅವನಲ್ಲಿದ್ದ ಪಣವು ಇಷ್ಟೇ ಇಷ್ಟು..
ಹೊಟ್ಟೆಯ ಕಿಚ್ಚಿಗೆ ಸಾಕಾಗುವಷ್ಟು
ಪುಟ್ಟ ಸೂರ ಕಟ್ಟಿಕ್ಕೊಳ್ಳುವಷ್ಟು
ಬಟ್ಟೆ ಬರೆಗೆ ತಕ್ಕಷ್ಟು.
ಇದ್ದಿದ್ದು ಇಷ್ಟೇ ಇಷ್ಟು.
ಬೇಕಿತ್ತು ಅಷ್ಟು..
ಆಸೆ ಸಿಕ್ಕಷ್ಟು ಬಾಚಿಕ್ಕೊಳ್ಳುವಷ್ಟು
ದಾಹಕ್ಕೆ ಮಿತಿಯಿರದಷ್ಟು
ಇಲ್ಲಿ ಸಿಗಲಾರದು ಅಲ್ಲಿರುವಷ್ಟು
ಹೊರವುದಷ್ಟೇ ಸರಿ!

ಇಷ್ಟಪಟ್ಟಿದ್ದು ಕಷ್ಟವಾಗಿದೆ
ಸೊರಗಿ ದೇಹ ನಿತ್ರಾಣವಾಗಿದೆ 
ಜಠರದ ಹಸಿವಿಗೆ
ದೇಹ ದಣಿಯ ತಾಯಾರಿಲ್ಲ
ತಣ್ಣೀರ ಬಟ್ಟೆಯೂ ಆರಿದೆ
ಇಂತಹ ಹೊತ್ತಲ್ಲೇ ಬಿಟ್ಟುಬಂದ
ಅಂವ ನೆನಪಾಗುತ್ತಾನೆ
ಕಿಚ್ಚ ದಹಿಸಲು ಅಸಮರ್ಥನಾದವ  
ಈ ಮೂರು ಗಂಟು ಬಿಗಿದವ.
 

ಡಿಸೆಂಬರ್ 15, 2011

ಕಾದಿಹೆನು.. !

ಮುನಿಯ ಕೆಂಗಣ್ಣಿಗೆ, ಶಾಪಗ್ರಸ್ಥೆಯಾಗಿ
ವ್ಯಾಮೋಹದ ಸಂಚಿಗೆ  ಬಲಿಯಾಗಿ 
ಅಗಣಿತ ಶಿಲೆಗಳಲ್ಲಿ ತಾನೊಂದು ಶಿಲೆಯಾಗಿ
ಮೋಕ್ಷದ ನಿರಂತರ ನೀರಿಕ್ಷೆಯಲ್ಲಿ 
ಕಾದಿಹೆನು..

ಹೃದಯ ಸೋತಿತು ಪ್ರೇಮದಲ್ಲಿ
ಮುಗ್ದ ಬುದುಕು ಹತವಾದ ನೋವಿನಲ್ಲಿ 
ಪತಿ ಸೇವೆಯ ಭಾಗ್ಯವಿಲ್ಲದ ನಿರಾಶೆಯಲ್ಲಿ 
ಕರಗಲೋಲ್ಲದ ಕೊರಗಿನಲ್ಲಿ
ಕಾದಿಹೆನು..

ಯಾರರಿಯರು ತನ್ನಂತರಂಗದ ತಳಮಳವನ್ನಿಲ್ಲಿ 
ತಟ್ಟಿ ಕುಟ್ಟಿದರೂ ಭಾವವರಿಯದು ಶಿಲೆಯಲ್ಲಿ 
ಬಿಸಿಲ ಧಗೆ ಸುಟ್ಟರೂ ಕಾಯುತ್ತಿದ್ದೇನೆ 
ಮೃದು-ಮಧುರವಾಗೆ
ಬಂದು ಬಿಡು ಶ್ರೀರಾಮ..
ಕಾದಿಹೆನು ನಾ  ಅಹಲ್ಯೆ..

ನವೆಂಬರ್ 26, 2011

ಅವನಿರುವುದೂ ನಮ್ಮೊಳಗೇ..!


ಲಾರಿಯೊಂದು ರೊಯ್ಯನೆ
ಕ್ಷಣಮಾತ್ರವೂ ನಿಲ್ಲದಂತೆ
ಹಾದು ಹೋಗಿದ್ದು - ಸುಮ್ಮನ್ನಲ್ಲ..!
ಹರಿದ್ದಿದ್ದು ವ್ಯಕ್ತಿಯೊಬ್ಬನ ಮೇಲೆ.
ರಕ್ತ ಬಳಬಳನೆ ಸುರಿಯತೊಡಗಿತ್ತು
ಮಾಂಸಖಂಡಗಳು ಕಿತ್ತು ಬಂದಿತ್ತು.

ಜನರೆಲ್ಲಾ ಅಯ್ಯೋ! ಪಾಪ!
ಎನ್ನುತ್ತಲೇ ಧಾವಿಸಿ ಬಂದರು
ಲಾರಿಯವನನ್ನು ದೂರಿದರು
ಬಾರದ ಪೋಲೀಸರ ಬಗ್ಗೆ ಜರಿದರು 
ಟ್ರಾಫಿಕ್ಕಿನ ಕುರಿತು ಕೊರೆದರು
ಯಾವ ತಾಯ ಮಗನೋ ಶಿವನೆ!
ಕನಿಕರಿಸುತ್ತಾ ಮುಂದೆ ಸಾಗಿದರು.

ಜೀವದ ಜೊತೆ ಸೆಣಸಾಡುವ 
ಅವನದು, ತನ್ನತ್ತ ಬರುವವರಿಗಾಗಿ 
ದೀನನೋಟ..!
ಕ್ಷಮಿಸಿ...!
ನಾವಂತೂ ಕೇಸುಗಳ ಮದ್ಯೆ
ಸಿಲುಕಲಾರೆವು...
ಇನ್ನು ಲಾರಿಯವನು ಬರುವುದೆಲ್ಲಿಂದ?
ಅವನಿರುವುದೂ ನಮ್ಮೊಳಗೇ!

ನವೆಂಬರ್ 3, 2011

ಕಾದಿದ್ದೇನೆ...!ಪ್ರೀತಿ ಜ್ಯೋತಿಯ ಹಚ್ಚಿ
ಒಂದಾಗುತ್ತಿದ್ದ ಕಾಲವದು 
ನಿನ್ನೊಳಗಿನ ದುಃಖ-ದುಮ್ಮಾನಗಳು 
ನನ್ನೊಡಲಲ್ಲಿ  ಕರಗಿಬಿಡುತ್ತಿದ್ದವು
ತೊಯ್ದ ತುಂಬಿಕ್ಕೊಂಡ ಸೆರಗ 
ಶುಭ್ರ ಮಾಡಿ
ಮತ್ತೆ ಹಾಗೆಯೇ ಕುಳಿತಿರುತ್ತಿದ್ದೆ
ನೀ ಬರುತ್ತಿದ್ದೆ
ನನ್ನೊಡಲು ತುಂಬುತ್ತಿದ್ದೆ 

ಆರಿದ ಪ್ರೀತಿ ಜ್ಯೋತಿಯ ಮುಂದೆ 
ನಾನಿಂದು ಒಬ್ಬಂಟಿ
ಅನುರಾಗ ಸುಳ್ಳಾಯಿತೇ?
ಕಂಬನಿ ಉಕ್ಕುಕ್ಕಿ ಹನಿಯುತಿರೆ
ಎದೆಯುಕ್ಕಿ ಬಿಕ್ಕುತಿರೆ
ದೀಪವಿಲ್ಲದ ದಾರಿಯಲ್ಲಿ - ನಟ್ಟಿರುಳು !
ಕುರುಡಾಗಿದ್ದೇನೆ..
ಅಂದು ನಿನಗೆ ನಾ ಬೇಕಿದ್ದಂತೆ
ಇವೊತ್ತು ನನಗೆ ನೀನು!
ಇರುಳ ಅಂಧಕಾರವ ಸೀಳಿ ಬಾರೆಯಾ?
ಸೆರಗೊಡ್ಡಿ ಕಾದಿದ್ದೇನೆ...!


ಅಕ್ಟೋಬರ್ 10, 2011

ನಾನವಳಲ್ಲ..​!

ಮತ್ತೇ ಬಾರದಿರು ಒಲವೇ                        
ನಾನವಳಲ್ಲ..!

ಮರೆತು ಹೋದ ನೆನ್ನೆಗಳ
ನೆನಪು ಮಾಡಲು
ಸುರುಳಿ ಸುತ್ತಿಟ್ಟ ಅಂಧಕಾರದ
ಉರುಳು ಬಿಚ್ಚಲು
ತೊಟ್ಟಿಕ್ಕಿರುವ ಹನಿಯ
ಕೋಡಿ  ಹರಿಸಲು
ಕಾರಿರುಳ ಗರ್ಭದ, ಪುಟಗಳ
ತಿರುವಿ ಹಾಕಲು
ಬಾರದಿರು...ನಾನವಳಲ್ಲ..!

ಎಲ್ಲಾ ಮರೆತ್ತಿದ್ದೇನೆ ನಾನು..!
ನೆನ್ನೆಗಳು - ನಾಳೆಗಳು ನನ್ನಲ್ಲಿಲ್ಲ..
ನವ ವಸಂತಕ್ಕೆ ಹಿಂದಣ
ಬವಣೆಗಳು ಕರಗಿವೆ
ಹಳೆಯದೆಲ್ಲ ಕೊಡವಿ
ನವ ವಧುವಾಗಿದ್ದೇನೆ...ನವ ಬಾಳಿಗೆ


ಕೈ ಮುಗಿವೆ
ಮತ್ತೇ ಬಾರದಿರು
ನಾನವಳಲ್ಲ...!!
 

ಸೆಪ್ಟೆಂಬರ್ 20, 2011

ಮುಗಿದ ಭಾವ..

ಕನಸುಗಳ ಬೆಂಬತ್ತಿದ ಪಯಣವಿದು
ನಿನ್ನುಸಿರು ನನ್ನೆಸರ ಪಿಸುಗುಡೋ ಸಂಭ್ರಮವಿತ್ತು
ಅಳತೆ ಮೀರಿದ ಭಾವಗಳ ಆಂದೋಲನವಿತ್ತು
ನನ್ನನ್ನುರಾಗದಲಿ ಕೋತಿ ನಕ್ಷತ್ರಗಳ ಬೆಳಕಿತ್ತು
 
ಮನತುಂಬಿ ಬರುವ ನಿನ್ನ ನೆನಪುಗಳಿತ್ತು
ಅದೆಷ್ಟೋ ಸಮಯಗಳ ಲೆಕ್ಕ ತಪ್ಪಿತ್ತು
ಮುನಿಸಿಗೂ ಅರ್ಥ ಹುಡುಕುವ ಬಗೆಯಿತ್ತು
ಸರಿಸುವೆನೆಂದರೂ ಸರಿಸಲಾಗದ ಬಂಧನವಿತ್ತು
 
ಈಗಿಂತೆ ನಿನ್ನಲ್ಲಿ ಕೊನೆಗೊಂಡ ಆ ಭಾವಗಳಿಗೆ
ನನ್ನೊಲಿಸಿದ ಮಧುರ ಕ್ಷಣಗಳ ನೆನಪುಗಳಿಗೆ
ಪ್ರತಿ ದಿನ-ಕ್ಷಣಗಳು ಬಿಡದಂತೆ ತಿಲತರ್ಪಣವನ್ನೀಯುತ್ತಿದ್ದೇನೆ
ಮುಗಿದ ನನ್ನೊಲವಿನ ಭಾವಕ್ಕೆ ಶಾಂತಿ ಸಿಗಲೆಂದು..!!

ಸೆಪ್ಟೆಂಬರ್ 13, 2011

ಮಾತು..

ಮಾತು..
ಕೆಲವೊಮ್ಮೆ ಭೋರ್ಗರೆದು ಸುರಿಯುತ್ತದೆ
ಗುಡುಗು ಮಿಂಚು ಒಟ್ಟೊಟ್ಟಿಗೆ ಮೇಳೈಸುತ್ತದೆ
ಒಳಗಿನ ನಿಟ್ಟುಸಿರು, ಆಳದ ಬೆಂಕಿ
ಹೋರಚೆಲ್ಲಲ್ಪಡುತ್ತದೆ...ಪ್ರವಾಹವಾಗುತ್ತದೆ...
ಕಡೆಗೆ ಎಲ್ಲಾ ಕಚ್ಚಿಸಿ,ಕೊಚ್ಚಿಸಿಕ್ಕೊಂಡು
ಶಾಂತನಾದೆನೆಂದು ಬೀಗುತ್ತದೆ..

ಮಗದೊಮ್ಮೆ..
ಮಾತು ಮೃದು- ಮಧುರ..
ತುಂತುರಿನ ಸೋನೆಯಂತೆ
ಮಿಂದಷ್ಟು ಮೀಯಬೇಕಂಬಂತೆ
ಹಿತವಾಗಿ ಮಿತವಾಗಿ ಅಪ್ಯಾಯಮಾನವಾಗುತ್ತದೆ
ತಂಗಾಳಿಯಂತೆ ಮೈಮನಸ ಸೋಕುತ್ತದೆ
ಹ್ರದಯ ಬೆಚ್ಚಗಿನ ಮಿಡಿತವನ್ನೆಲ್ಲ
ಬೊಗಸೆಯಲ್ಲಿ ಮೊಗೆಮೊಗೆದು ಕೊಡುತ್ತದೆ


ಆದರೂ ಕೆಲವೊಂದು ಬಾರಿ..
ಜಪ್ಪೆಂದರೂ ತುಂತುರಿನ ಹನಿ ಹನಿಸುವುದಿಲ್ಲ..
ಮಿಂಚಿಲ್ಲ..ಗುಡುಗಿಲ್ಲ..
ಇನಿತೂ ಮಳೆಯ ಪಸೆ ಇಳೆಯೋಳಗಿಲ್ಲ..
ಬರಡು...ಬರಿದು ಮತ್ತು ಬರಿದು ಮಾತ್ರವೇ...!
ಮಾತಿನ ಉಸಿರು ಮೌನದಲ್ಲಿ  ಕಟ್ಟಿಹೋಗಿದೆ
ಕಪ್ಪನೆಯ ಮೋಡ ಎದೆಯ ಮಿದುವೊಳಗೆ
ಕರಗಿ ಸುರಿಯಲೋಲ್ಲದು...
ಹೆಪ್ಪುಗಟ್ಟಿದೆ...!!

ಮಾರ್ಚ್ 22, 2011

ಅಂದು- ಇಂದೂ..

ಅಂದು ನನ್ನವರನ್ನು ತೊರೆದು 
ಇವರೇ ನನ್ನವರೆಂದು
ಇವರಿಂದೆ ಬಂದಾಗ
ಭದ್ರ ಸೂರಿಗೆ, ಹಿಡಿ ಪ್ರೀತಿಗೆ
ಕಾಯ್ವ ಜಾತಕದಂತೆ ನನ್ನ ಕನಸಿತ್ತು
ಮನದಲ್ಲಿ ಸಾವಿರ ದೀಪಗಳ ಬೆಳಕಿತ್ತು..

ಇಲ್ಲಿ ಇವರ ಅವರಿವರ 
ಬೇಕು ಬೇಡಗಳಿಗೆ ಕಿವಿಯಾಗಿ
ಕೈಯಾಗುವಾಗ ಉರಿವ
ಒಲೆಯೊಳಗೆ ಕನಸುಗಳೂ ಉರಿಯುತ್ತಿತ್ತು
ಇಷ್ಟರೊಳಗೆ ನನ್ನೊಡಲು ತುಂಬತೊಡಗಿತ್ತು
ಮನಪಟಲದ ತುಂಬೀಗ ನನ್ನ
ಕೂಸಿನ ನಾಳೆಗಳಿತ್ತು...

ಇವೊತ್ತು ನನ್ನ ಕೂಸಿನ ನಾಳೆಗಳು..!
ತಡಕಾಡಿದರೂ ಸಿಗುತ್ತಿಲ್ಲ
ಆ ಸಾವಿರ ದೀಪಗಳ ಬೆಳಕು,
ಕಾಣುವುದು...
ಆಸ್ಪತ್ರೆ ಬಿಲ್ಲಿನಿಂದ ಕೆಂಡವಾದ
ನನ್ನ ಕೂಸಿನ ಕಂಗಳು
ಮತ್ತು ಬೂದಿಯಾದ
ನಾ ಬಯಸಿದ್ದ ಆ ಹಿಡಿ ಪ್ರೀತಿ..!!

ಫೆಬ್ರವರಿ 15, 2011

Happy valentines day....

ಬಹಳಷ್ಟು ಬಾರಿ ನನಗೇ ಗೊಂದಲವಾಗುವುದಿದೆ..ಅದ್ಹೇಗೆ ನೀ ಈ ಪಾಟಿ ಪಟ್ಟು ಬಿಡದೆ ಮನಸ್ಸೊಳಗೆ ಗಟ್ಟಿ ಕುಳಿತುಬಿಟ್ಟಿದ್ದಿ..ಎಲ್ಲೊ ಇದ್ದವ ಹೇಳದೆ ಕೇಳದೆ ಈ ಬದುಕು ಭಾವಗೊಳೊಡನೆ ಬೆರೆತು ಹೋದೆ..?ಹಿಡಿಯಷ್ಟಿರುವ ಈ ಮನಸ್ಸೊಳಗೆ ಹೇಗೆ ಜಾಗವು ನಿನ್ನದೇ ಮಾಡಿಕ್ಕೊಂಡೆ?ತುಂಬಾ ಸಲ ಮಾತೇ ಇರುವುದಿಲ್ಲ ..ಮಾತಿಗಿಂತಲೂ ಮೌನ ಅಪ್ಯಾಯಮಾನವಗಿರುತ್ತದೆ..ಏನೆಂದರೆ ಏನೂ ಇಲ್ಲಾ...ನಿನ್ನ ಹೆಸರ ಜಪಿಸೋ ನನ್ನ ಎದೆಬಡಿತದ ಸದ್ದೊಂದನ್ನು ಬಿಟ್ಟು..
ನಿನ್ನೆದೆಗೆ ಕಿವಿಯಾನಿಸಿ, ನಿನ್ನೆದೆ ಬಡಿತವೂ ನನ್ನ ಹೆಸರ ಪಿಸುಗುಡುತ್ತಾ ಎಂದು ಪರೀಕ್ಷಿಸಿಕ್ಕೊಂಡವಳಲ್ಲಿ ಮತ್ತೇ ಅಚ್ಚರಿ..! ಅ ಸದ್ದ, ಮತ್ತೇ ಮತ್ತೇ ಪುನಃ ಪುನಃ ಕೇಳಲು ಹಾತೊರೆಯುತ್ತೇನೆ..ಹಾ, ಹುಡುಗಾ ಇದೊಂಥರ ಹುಚ್ಚು..ನೀನೆ ಹೇಳುವಂತೆ ನೀನೆಂದರೆನೇ ನನಗೆ ಹುಚ್ಚು ಹುಚ್ಚು.. ಅಷ್ಟೂ ನೀ ನಂಗೆ ಇಷ್ಟ ಗೊತ್ತ ಹುಡುಗಾ..?


ನಿನಗಿಷ್ಟ ಅಂತಾನೆ ನಿನ್ನಿಷ್ಟದ ಪಾನಿಪುರಿ ತಿನ್ನುತ್ತೇನೆ..ನಿನ್ನ ಟಿಫನ್ ಲೇಟಾಯ್ತು ಅಂದ್ರೆ ಮರುದಿನ ನಾನೂ ಟಿಫನ್ ಲೇಟಾಗ್ ಮಾಡ್ತೀನಿ..ನಿನ್ನಿಷ್ಟದ ಹೀರೋ ನಂಗೂ ಇಷ್ಟ ಮತ್ತೇ..ನೀ ಇಷ್ಟ ಪಡೋ ಸಲ್ವಾರ್ ನ ತುಸು ಜಾಸ್ತಿಯೇ ಹಾಕುತ್ತೇನೆ..ನಾನೆನಾರ ಒಳ್ಳೆ ಕೆಲಸ ಮಾಡಿದ್ರೆ ಗುಡ್ ಅನ್ತಿಯಲ್ಲ.. ಆ ನಿನ್ನ ಶಭಾಶ್ ಗಿರಿಗೊಸ್ಕೊರಾನೆ ಅಂಥದ್ದೆನಾರ ಮಾಡ್ತಾ ಇರೋ ಚಟ ..ಒಂದು ವಿಷಯದಲ್ಲಿ ಕ್ಷಮಿಸ್ ಬಿಡೋ ಹುಡುಗಾ..ನಂಗೆ ಏನಾದ್ರು ಹೆಲ್ತ್ ಪ್ರಾಬ್ಲಮ್ ಆದ್ರೆ ನಿಂಗೆ ಮೊದಲಿಗೆ ಹೇಳಲ್ಲ ನಾನು...ತುಸು ಜೋರು ಎನಿಸಿದ ಮೇಲೇನೆ ಹೇಳ್ತೇನೆ...ಯಾಕೆಂದ್ರೆ ಆಗ ನಿನ್ನಿಂದ ಇನ್ನು ಸ್ವಲ್ಪ ಜಾಸ್ತಿ ಮುದ್ದು ಮಾಡಿಸ್ಕೊಬಹುದಲ್ಲ...ನಿನ್ನಿಂದ ಮುದ್ದಿಸಿಕ್ಕೊಳ್ಳುವ ಚಪಲ ಅಷ್ಟೇ ಅದು....!
ಹೌದು ಹುಡುಗಾ ಹುಚ್ಚು ಹುಡುಗಿ ನಾನು...

ಕತ್ತಲೆಂದರೆ ಭಯ ಪಡುವ, ಪಕ್ಕದ ಮನೆ ಹುಡುಗನ ನೋಟಕ್ಕೆ ಬೆದರುವ, ಅಪ್ಪನ ಕಣ್ಣೋಟಕ್ಕೆ ಅಮ್ಮನಿಂದೆ ಅವಿತುಕೂರುವ ನನಿಗೆ ಧೈರ್ಯದ ಪಾಠ ಹೇಳಿದವ ನೀನು..ಆದರೂ ನಮ್ಮಿಬ್ಬರ ಜಾತಿ,ಮದುವೆ ಅಂತೆಲ್ಲ ವಿಷಯ ಬಂದಾಗ ನೀನೂ ಹೆದರುತ್ತಿಯಲ್ಲೋ ಪುಕ್ಕಲ..!! ಆಗೆಲ್ಲ ನಾನು ಅದೆಷ್ಟು ಇಳಿದುಹೊಗುತ್ತೇನೆ ಗೊತ್ತೆನೂ ಪುಟ್ಟಾ..?ಪ್ರೀತಿಗೆ ಜಾತಿಯಿಲ್ಲ ಎಂದುಕೊಂಡೇ ಪ್ರೀತಿಸಿದ್ದಲ್ಲವಾ ನಾವು?ಹಾಗೆ ಮದುವೆಗೂ ಜಾತಿಯಿಲ್ಲ-ಬೇಡ...! ನಿನ್ನೊಳಗೆ ನೀನಾಗಿ...ಬದುಕಿನುದ್ದಕ್ಕೂ ನನ್ನ ಕರಕೊಂಡು ಬಿಡೋ...ಭಯ ಬೀಳಿಸಬೇಡ ಪ್ಲೀಸ್...
Belated happy valentines day....

ನಿನ್ನ ಹುಡುಗಿ....


ಫೆಬ್ರವರಿ 5, 2011

ಮುಸುಕಿನೊಳಗಿನ ಗುದ್ದಾಟ ಸಾಕು ಮಾಡಿ...

ಅದಾದರೂ ಎಷ್ಟೊಂದು ಕರಾಳ ನೆನಪಲ್ಲವೋ ಹುಡುಗಾ.. ಅದೇನೋ ನಿನ್ನ ಬಿರುನುಡಿಗೆ ನೋವಾಗಿ "ನೀನೂ ಬೇಡ, ನಿನ್ನ ಪ್ರೀತಿನೂ ಬೇಡ" ಅಂತ ಎದ್ದು ಬಂದಿದ್ದೆ.ಮನೆಗೆ ಬಂದವಳೇ ದಿಂಬಿನೊಳಗೆ ಮುಖ ಹುದುಗಿಸಿಟ್ಟು ತಾಸುಗಟ್ಟಲೆ ಹನಿ ಹರಿಸಿದ್ದೆ.ನಿಂಗೆ ನನ್ನ ಮೇಲೆ ಚೂರೂ ಪ್ರೀತಿನೇ ಇಲ್ಲಾ ಅಂದುಕ್ಕೊಳ್ಳುತ್ತಲೇ ಇನ್ನು ಜೋರಾಗಿ ಕಣ್ಣಿರಾಗುತ್ತಿದ್ದೆ.ಕನ್ನಡಿಲಿ ಅತ್ತು ಅತ್ತು ಕೆಂಪಗಾಗಿರುವ ಕೆನ್ನೆ, ಊದಿರುವ ಕಂಗಳನ್ನು ನೋಡಿದಾಗ..ಮತ್ತೆ ಮುಸು ಮುಸು ಅಳು..! ಅರೆರೇ..! ಕನ್ನಡಿಲಿ ನೀನು..?! ಹಾ..ಹುಡುಗಾ ನಿನ್ನ ಕಂಡಂತಾಗಿ, ಭ್ರಮಿಸಿಕ್ಕೊಂಡು.. ನಮ್ಮೊಳಗಿನ ಆ ಮಧುರ ನೆನಪುಗಳೆಲ್ಲ ನೆನಪಾಗಿ ನಾಚಿ, ಮತ್ತದೇ ದಿಂಬನ್ನು ಎದೆಗವಚಿಕ್ಕೊಂಡು ಬಿಟ್ಟಿದ್ದೆ. ಪ್ರೀತಿಲಿರೋ ಮುನಿಸಿಗೂ ಅರ್ಥ ಹುಡುಕುವ ಬಗೆ ಇದೇನಾ..ಎಂದುಕ್ಕೊಂಡವಳಲ್ಲಿ  ಮತ್ತೆ ಅಚ್ಚರಿ..ಹೂ ನಗೆ..

ಗೆಳೆಯಾ ಅವತ್ತೊಂದೆ ದಿನ ನಾ ನಿನ್ನ ಮೇಲೆ ಮುನಿಸಿಕ್ಕೊಂಡಿದ್ದು, ನಿನ್ನ ಮಾತಿಗೆ ನೋವಾಗಿ ಬೇಜಾರಾಗಿ ಎದ್ದು ಬಂದಿದ್ದು.ಆದರೆ ಮರುಕ್ಷಣವೇ ನಾ ನಿನ್ನ ಪ್ರೀತಿಯ ಹುಡುಗಿಯೇ ಕಣೋ..ಆ ಸಣ್ಣ misunderstanding ನಮ್ಮನ್ನು ಎಷ್ಟು ದಿನ ಅಗಲುವಂತೆ ಮಾಡಿತು ನೋಡಿದೆಯಾ..?ಅವತ್ತಿಂದ ಇವತ್ತಿನವರೆಗೂ ನಿನ್ನೊಂದು ಕರೆಗೆ, ಮೆಸೇಜಿಗೆ ಜಾತಕದಂತೆ ಕಾತರಿಸುತ್ತಿದ್ದೇನೆ..ಬಸ್ಸಿನ ಹಿಂದುದ್ದಕ್ಕೂ ನಿನ್ನ ಬೈಕಿಗಾಗಿ ಹುಡುಕಾಡುತ್ತೇನೆ..ಆಂಜನೇಯ ಗುಡಿಯಲ್ಲಿ ನನ್ನ ಹಿಂದೆ ಸುತ್ತುತ್ತಾ ದೇವರಲ್ಲಿ ಅದೇನೇನೋ ಕೇಳಿಕ್ಕೊಳ್ಳುತ್ತಿದ್ದ ನಿನ್ನ ನೆನೆದು ಕನವರಿಸುತ್ತೇನೆ..ಅಲ್ಲೆಲ್ಲೂ ನೀನು ಕಾಣಸಿಗದಾಗ ನಿರಾಸೆ ಮನದ ತುಂಬಾ.

ಸಾಕು ಮಾಡು ಗೆಳೆಯಾ ಈ
ಮುಸುಕಿನೊಳಗಿನ ಗುದ್ದಾಟವನ್ನು, ಈ ವಿರಹವನ್ನು ನನ್ನಿಂದಂತೂ ತಳಲಾಗುತ್ತಿಲ್ಲ.ನಾನು ಗೆಲ್ಲೋದಿಲ್ಲ, ನೀನು ಸೋಲೋದಿಲ್ಲ ಅಂದಮೇಲೆ ಮತ್ಯಾಕೆ ಹೋರಾಟ..? ನನಗಂತೂ ಈಗೋ ಕಣೋ..ತಪ್ಪು ನನ್ನದೇ ಇದ್ದರೂ, ನೀನೆ ಒಪ್ಪಿ,ಅಪ್ಪಿ ಮುದ್ದು ಮಾಡಬೇಕೆಂಬ ಬಯಕೆ..ನನಗೆ ಗೊತ್ತು ಹುಡುಗಾ..ನಿನಗೂ ನನ್ನ ಬಿಟ್ಟಿರಲಾಗದು ಎಂದು..ಆದರೂ ಸಣ್ಣದೊಂದು ಡ್ರಾಮಾ..ಮೆಚ್ಚಿಕ್ಕೊಂಡೆ ಬಿಡು..!ನನ್ನೆದೆಯ ತುಂಬಾ ಹಾಲು ಬೆಳದಿಂಗಳ ಸುರಿಸಬೇಕಾಗಿರುವ,ಬಾಳಚಂದಿರ ನೀನೇ ಮೋಡದೊಳಗೆ ಅವಿತು ಮೌನಿಯಾಗಿಬಿಟ್ಟರೆ, ನನ್ನಯ ಜಗದ ತುಂಬಾ ಕಗ್ಗತ್ತಲೇ ಅಲ್ಲವೇನೋ..

ನಾಳೆ ಬೆಳಿಗ್ಗೆ ಅದೇ ನಮ್ಮ ಆಂಜನೇಯ ಟೆಂಪಲ್ ನಲ್ಲಿ ನಿನಗಾಗಿ ಕಾಯ್ತಾ ಇರ್ತೇನೆ.ಬರ್ತಿಯಲ್ವಾ..?ನಿನ್ನಿಂದ ಪುಟ್ಟಿ,ಮುದ್ದು,ಚಿನ್ನು..ಅಂತೆಲ್ಲ ಕರೆಸಿಕ್ಕೊಂಡು ಬಹಳ ದಿನವಾಗಿ ಬಿಟ್ಟಿದೆ..ನಾಳೆ ಬಂದು ಇಷ್ಟು ದಿನದ ವಿರಹಕ್ಕೆ ಮಂಗಳ ಹಾಡ್ತಿಯಲ್ವ..ನಿನಗಾಗಿ ಕಾಯ್ತಾ ಇರ್ತೇನೆ..ಬಂದು ಬಿಡು ಪುಟ್ಟು..

ನಿನ್ನ ಪ್ರೀತಿಯ ಹುಡುಗಿ..
ಸುಶೀ..

ಜನವರಿ 17, 2011

ಬ್ಲಾಗಿಗೊಂದು ಮುನ್ನುಡಿ...

ದಿನಗಳುರುಳುತಿವೆ ಕನಸುಕಂಗಳು ತುಂಬಿದ ಭಾವನೆಗಳ ಜೊತೆಗೆ, ಅಪ್ಪನ ಕಣ್ಣೊಳಗಿನ ಭದ್ರ ಕಾಳಜಿಯ ಜೊತೆಗೆ, ಅಮ್ಮನ ಮಡಿಲೊಳಗಿನ ಬೆಚ್ಚನೆಯ ಸ್ವಾದದ ಜೊತೆಗೆ,ಪುಟ್ಟ ತಮ್ಮಂದಿರ ತುಂಟಾಟದ ಜೊತೆಗೆ, ನನ್ನ ಪ್ರೀತಿಯ ಜೊತೆಗೆ, ಸ್ನೇಹಿತರ ಹಿಂಡಿನ ಮಧುರ ಜೋಶ್ ನ ಜೊತೆಗೆ, ಲೇಖನಿ-ಹಾಳೆಯಾ ಸಾಂಗತ್ಯದ ಜೊತೆಗೆ, ಅಣ್ಣನ ಪ್ರೀತಿಯ ಹಾಪಹಪಿಯ ಜೊತೆಗೆ.....ದಿನಗಳುರುಳುತಿವೆ ಸಖ್ಯವಾಗಿ ಮನದ ಹಕ್ಕಿಗೆ ಕನಸಿನ ಗರಿಯ ಕಟ್ಟಿ ಹಾರಾಡಲು ಬಿಟ್ಟಿದ್ದೇನೆ. ಕನಸ ನನಸಾಗಿಸಲು ಪ್ರಯತ್ನವಿಲ್ಲದೆ ಸೋಮಾರಿಯಾಗಿ, ಸೋಮರಿತನದಲ್ಲೂ ಆಕಾಶವೇ ಚಿಕ್ಕದೇನೋ ಅನ್ನುವಷ್ಟು ಸಂಭ್ರಮಿಸುತ್ತಾ...

ಕನಸು ಕಲ್ಪನೆಯಾಗಿ ಹೊರಹೊಮ್ಮಬೇಕು ಎಂದು ಪ್ರತಿ ಬಾರಿಯೂ ಅನಿಸುವುದುಂಟು ನನಗೆ. ಕನಸ ಕಲ್ಪನೆ ಹಾಗೆ ಅಲ್ವಾ....ಕ್ಷಣ ಕ್ಷಣಕ್ಕೂ ಉತ್ಸಾಹ ಚಿಮ್ಮಿಸುತ್ತೆ, ಪ್ರತಿ ಉಸಿರಾಟದಲ್ಲೂ ತಾಜಾತನದ ಅಲೆ ಹರಡಿಸುತ್ತೆ, ಮೈ ಮನದ ತುಂಬೆಲ್ಲಾ ಹರ್ಷದ ಹೊನಲನ್ನು ಹರಿಸುತ್ತೆ, ಜೀವನೋತ್ಸಾಹವನ್ನು ಮತ್ತದದಕ್ಕೆ ಕೂಡಿಸುತ್ತೆ ಮತ್ತದೇ ಕಲ್ಪನೆಯೆಂಬ ಮೂರಕ್ಷರ..

ಆದರೂ ಕಲ್ಪನೆಯೇ ಜೀವನ ಅಲ್ಲವಲ್ಲ.. ಅದಬಲ್ಲೆ ನಾನೂ.. ಹಲವಾರು ಬಾರಿ ಹಲವರು ನೋಡಿರುವುದು ಕಣ್ಣ ಕನ್ನಡಿಯಲ್ಲೆ ಹೊರತು, ಕನ್ನಡಿಯೊಳಗಿನ ಕಣ್ಣ ಮಾತನಲ್ಲ. ಅರ್ಥೈಸಿಕೊಳ್ಳರಾರು ಎಂಬ ಅರಿವಾದಾಗ ಜಿನುಗಿದ ನೀರ ಬಿಂದುವನಲ್ಲ. ಸ್ನೇಹಿತೆಯಾಗಿ ಈಕೆ ಬೆನ್ನು ಹಾಕಿದಾಗ, ಆಕೆ ಹುಚ್ಚಾಟವೆಂದಾಗ, ನನ್ನ ಪ್ರೀತಿಯೇ ನನ್ನ ತಿವಿದಾಗ - ಹೃದಯ ಹಿಂಡಿದಾಗ, ಮಾತುಗಳು ಅರ್ಥ ಕಳಕೊಂಡು ದೂಷಿಸಲ್ಟಟ್ಟಾಗ, ಮರಗಿದ ಮನವನ್ನು ಸಂತೈಸಲಾಗದೆ, ಭಾವನೆಗಳನ್ನು ಹೊರಗೆಡವಲು ಆಗದೆ ಹತ್ತಿಕ್ಕಿದ್ದೆ. ಮೌನ ಭಾಷೆಯಲ್ಲೇ ಮಾತಾಡುವೆ ಎಂದರೂ ಆಗದೇ ಇರುವುದ ಕಂಡಾಗ ಕಂಡೂ ಕಾಣದಂತೆ ಜಿಗುಪ್ಸೆ ಬರುವುದಿದೆ. ಆದರೂ ನನ್ನ ಕನಸು, ನನ್ನ ಕಲ್ಪನೆ ಮೇಲೆಂದಂತೆ ಜೀವನೋತ್ಸಾಹವನ್ನು ಮತ್ತೆ ತುಂಬುತ್ತೆ ಭವಿಷ್ಯದ ಭರವಸೆಯ ಜೊತೆಗೆ..ಒಳಿತಾಗಲಿಲ್ಲವಾದರೂ...ಆಗೇ ಆಗುವುದು ಎಂಬ ಭ್ರಮೆಯ ತಳಹದಿಯ ಮೇಲೆ..

ನನ್ನ ಪ್ರೀತಿ ನನ್ನದು.. ವರ್ತಮಾನದ ಆಹ್ಲಾದತೆಯೊಂದಿಗೆ ಭವಿಷ್ಯದ ಬುತ್ತಿ ಕಟ್ಟುತ್ತಿದೆ. ಬೆಳಗಿನ ಜಾವ ಬಿದ್ದ ಕನಸಿನಂತೆ ಮತ್ತೇ ಮತ್ತೇ ಹೃದಯದೊಳಗೆ ಕಚಗುಳಿ ಇಡುತ್ತಿದೆ. ಕಾಣುವ ಕನಸುಗಳಿಗೆ ಬಣ್ಣ ತುಂಬುತ್ತಿದೆ..ಹೃದಯಕ್ಕೆ ಸೂರ್ಯರಶ್ಮಿ ತಾಕಿದರೂ ತಣ್ಣನೆಯ ಅನುಭವ ನೀಡುತ್ತಿದೆ. ಆ ಕ್ಷಣ ಜೊತೇಲಿ ಇಲ್ಲದ ಪ್ರೀತಿಯ ನೆನೆದಾಗ ಜನರ ನಡುವೆಯೂ ಒಂಟಿತನದ ಫೀಲ್ ಮೂಡುತ್ತೆ.. ಪ್ರತಿ ಬೆಳಗೂ ನನ್ನ ಪ್ರೀತಿಯೊಂದಿಗೆ ಶುರುವಾಗಲಿ ಎಂಬ ಹಂಬಲಿಕೆ ಮನದ ತುಂಬಾ.ಗೊತ್ತಿಲ್ಲದ ಪ್ರೀತಿಯ ವ್ಯಾಖ್ಯೆಯ ಹುಡುಕಾಟದಲ್ಲಿದ್ದೇನೆ ಮತ್ತದೇ ನನ್ನ ಪ್ರೀತಿಯ ಜೊತೆಗೆ! ಆದರೂ......ಪ್ರೀತಿ ಮಾಯೆ ಹುಷಾರು ಎಂದು ಕಂಡು ಅರಿತವರು ಎಚ್ಚರಿಸಿದ್ದನ್ನ ಬಲ್ಲೆ... ಮಾಯೆಯ ಬಲೆಯೊಳಗೆ ಸಿಲುಕಿರುವ ನಾನು ನೆನಪುಗಳೊಂದಿಗೆ ಬದುಕುತ್ತಿದ್ದೇನೆ..


ಅದೆಂತೆ ಇರಲಿ ಇನ್ನು ನನ್ನ-ನಿಮ್ಮ ನಡುವೆ ಅರಳಿರುವ, ಅರಳಲಿರುವ, ಅರಳಬೇಕಾದ ಸ್ನೇಹದ ಹೂವ ಬಗ್ಗೆ..
ಎಲ್ಲೊ ಓದಿದ ನೆನಪು,
"ನಾನು ನಿನ್ನ ಕಂಬನಿ ಆದರೆ
ನಿನ್ನ ನೋವಿನಲ್ಲೂ ಒಂದಷ್ಟು ಸಾಲು ಕೇಳ್ತೀನಿ
ನಿನ್ನ ಅಮಾಯಕ ಕಂಗಳಲಿ
ಮಣಿಸಲ್ಚಿಸ್ತೀನಿ
ನೀನೇ ನನ್ನ ಕಂಬನಿಯಾದರೆ
ನಮ್ಮ ಸ್ನೇಹದ ಮೇಲಾಣೆ
ಸಾಯೋ ತನಕ ಅಳದೆ ಇರ್ತೀನಿ"
ಇಷ್ಟು ಮಾತ್ರ ಹೇಳಬಲ್ಲೆ. ಮುಂದೆ ಜೊತೆಯಾಗಿ ಸ್ನೇಹದ ಉದ್ಯಾನ ಕಟ್ಟೋಣ. ಆ ಹುಮ್ಮಸ್ಸು ನನ್ನದು. ಜೋತೆಯಾಗಿರ್ತಿರಲ್ಲ...?