ಜನವರಿ 17, 2011

ಬ್ಲಾಗಿಗೊಂದು ಮುನ್ನುಡಿ...

ದಿನಗಳುರುಳುತಿವೆ ಕನಸುಕಂಗಳು ತುಂಬಿದ ಭಾವನೆಗಳ ಜೊತೆಗೆ, ಅಪ್ಪನ ಕಣ್ಣೊಳಗಿನ ಭದ್ರ ಕಾಳಜಿಯ ಜೊತೆಗೆ, ಅಮ್ಮನ ಮಡಿಲೊಳಗಿನ ಬೆಚ್ಚನೆಯ ಸ್ವಾದದ ಜೊತೆಗೆ,ಪುಟ್ಟ ತಮ್ಮಂದಿರ ತುಂಟಾಟದ ಜೊತೆಗೆ, ನನ್ನ ಪ್ರೀತಿಯ ಜೊತೆಗೆ, ಸ್ನೇಹಿತರ ಹಿಂಡಿನ ಮಧುರ ಜೋಶ್ ನ ಜೊತೆಗೆ, ಲೇಖನಿ-ಹಾಳೆಯಾ ಸಾಂಗತ್ಯದ ಜೊತೆಗೆ, ಅಣ್ಣನ ಪ್ರೀತಿಯ ಹಾಪಹಪಿಯ ಜೊತೆಗೆ.....ದಿನಗಳುರುಳುತಿವೆ ಸಖ್ಯವಾಗಿ ಮನದ ಹಕ್ಕಿಗೆ ಕನಸಿನ ಗರಿಯ ಕಟ್ಟಿ ಹಾರಾಡಲು ಬಿಟ್ಟಿದ್ದೇನೆ. ಕನಸ ನನಸಾಗಿಸಲು ಪ್ರಯತ್ನವಿಲ್ಲದೆ ಸೋಮಾರಿಯಾಗಿ, ಸೋಮರಿತನದಲ್ಲೂ ಆಕಾಶವೇ ಚಿಕ್ಕದೇನೋ ಅನ್ನುವಷ್ಟು ಸಂಭ್ರಮಿಸುತ್ತಾ...

ಕನಸು ಕಲ್ಪನೆಯಾಗಿ ಹೊರಹೊಮ್ಮಬೇಕು ಎಂದು ಪ್ರತಿ ಬಾರಿಯೂ ಅನಿಸುವುದುಂಟು ನನಗೆ. ಕನಸ ಕಲ್ಪನೆ ಹಾಗೆ ಅಲ್ವಾ....ಕ್ಷಣ ಕ್ಷಣಕ್ಕೂ ಉತ್ಸಾಹ ಚಿಮ್ಮಿಸುತ್ತೆ, ಪ್ರತಿ ಉಸಿರಾಟದಲ್ಲೂ ತಾಜಾತನದ ಅಲೆ ಹರಡಿಸುತ್ತೆ, ಮೈ ಮನದ ತುಂಬೆಲ್ಲಾ ಹರ್ಷದ ಹೊನಲನ್ನು ಹರಿಸುತ್ತೆ, ಜೀವನೋತ್ಸಾಹವನ್ನು ಮತ್ತದದಕ್ಕೆ ಕೂಡಿಸುತ್ತೆ ಮತ್ತದೇ ಕಲ್ಪನೆಯೆಂಬ ಮೂರಕ್ಷರ..

ಆದರೂ ಕಲ್ಪನೆಯೇ ಜೀವನ ಅಲ್ಲವಲ್ಲ.. ಅದಬಲ್ಲೆ ನಾನೂ.. ಹಲವಾರು ಬಾರಿ ಹಲವರು ನೋಡಿರುವುದು ಕಣ್ಣ ಕನ್ನಡಿಯಲ್ಲೆ ಹೊರತು, ಕನ್ನಡಿಯೊಳಗಿನ ಕಣ್ಣ ಮಾತನಲ್ಲ. ಅರ್ಥೈಸಿಕೊಳ್ಳರಾರು ಎಂಬ ಅರಿವಾದಾಗ ಜಿನುಗಿದ ನೀರ ಬಿಂದುವನಲ್ಲ. ಸ್ನೇಹಿತೆಯಾಗಿ ಈಕೆ ಬೆನ್ನು ಹಾಕಿದಾಗ, ಆಕೆ ಹುಚ್ಚಾಟವೆಂದಾಗ, ನನ್ನ ಪ್ರೀತಿಯೇ ನನ್ನ ತಿವಿದಾಗ - ಹೃದಯ ಹಿಂಡಿದಾಗ, ಮಾತುಗಳು ಅರ್ಥ ಕಳಕೊಂಡು ದೂಷಿಸಲ್ಟಟ್ಟಾಗ, ಮರಗಿದ ಮನವನ್ನು ಸಂತೈಸಲಾಗದೆ, ಭಾವನೆಗಳನ್ನು ಹೊರಗೆಡವಲು ಆಗದೆ ಹತ್ತಿಕ್ಕಿದ್ದೆ. ಮೌನ ಭಾಷೆಯಲ್ಲೇ ಮಾತಾಡುವೆ ಎಂದರೂ ಆಗದೇ ಇರುವುದ ಕಂಡಾಗ ಕಂಡೂ ಕಾಣದಂತೆ ಜಿಗುಪ್ಸೆ ಬರುವುದಿದೆ. ಆದರೂ ನನ್ನ ಕನಸು, ನನ್ನ ಕಲ್ಪನೆ ಮೇಲೆಂದಂತೆ ಜೀವನೋತ್ಸಾಹವನ್ನು ಮತ್ತೆ ತುಂಬುತ್ತೆ ಭವಿಷ್ಯದ ಭರವಸೆಯ ಜೊತೆಗೆ..ಒಳಿತಾಗಲಿಲ್ಲವಾದರೂ...ಆಗೇ ಆಗುವುದು ಎಂಬ ಭ್ರಮೆಯ ತಳಹದಿಯ ಮೇಲೆ..

ನನ್ನ ಪ್ರೀತಿ ನನ್ನದು.. ವರ್ತಮಾನದ ಆಹ್ಲಾದತೆಯೊಂದಿಗೆ ಭವಿಷ್ಯದ ಬುತ್ತಿ ಕಟ್ಟುತ್ತಿದೆ. ಬೆಳಗಿನ ಜಾವ ಬಿದ್ದ ಕನಸಿನಂತೆ ಮತ್ತೇ ಮತ್ತೇ ಹೃದಯದೊಳಗೆ ಕಚಗುಳಿ ಇಡುತ್ತಿದೆ. ಕಾಣುವ ಕನಸುಗಳಿಗೆ ಬಣ್ಣ ತುಂಬುತ್ತಿದೆ..ಹೃದಯಕ್ಕೆ ಸೂರ್ಯರಶ್ಮಿ ತಾಕಿದರೂ ತಣ್ಣನೆಯ ಅನುಭವ ನೀಡುತ್ತಿದೆ. ಆ ಕ್ಷಣ ಜೊತೇಲಿ ಇಲ್ಲದ ಪ್ರೀತಿಯ ನೆನೆದಾಗ ಜನರ ನಡುವೆಯೂ ಒಂಟಿತನದ ಫೀಲ್ ಮೂಡುತ್ತೆ.. ಪ್ರತಿ ಬೆಳಗೂ ನನ್ನ ಪ್ರೀತಿಯೊಂದಿಗೆ ಶುರುವಾಗಲಿ ಎಂಬ ಹಂಬಲಿಕೆ ಮನದ ತುಂಬಾ.ಗೊತ್ತಿಲ್ಲದ ಪ್ರೀತಿಯ ವ್ಯಾಖ್ಯೆಯ ಹುಡುಕಾಟದಲ್ಲಿದ್ದೇನೆ ಮತ್ತದೇ ನನ್ನ ಪ್ರೀತಿಯ ಜೊತೆಗೆ! ಆದರೂ......ಪ್ರೀತಿ ಮಾಯೆ ಹುಷಾರು ಎಂದು ಕಂಡು ಅರಿತವರು ಎಚ್ಚರಿಸಿದ್ದನ್ನ ಬಲ್ಲೆ... ಮಾಯೆಯ ಬಲೆಯೊಳಗೆ ಸಿಲುಕಿರುವ ನಾನು ನೆನಪುಗಳೊಂದಿಗೆ ಬದುಕುತ್ತಿದ್ದೇನೆ..


ಅದೆಂತೆ ಇರಲಿ ಇನ್ನು ನನ್ನ-ನಿಮ್ಮ ನಡುವೆ ಅರಳಿರುವ, ಅರಳಲಿರುವ, ಅರಳಬೇಕಾದ ಸ್ನೇಹದ ಹೂವ ಬಗ್ಗೆ..
ಎಲ್ಲೊ ಓದಿದ ನೆನಪು,
"ನಾನು ನಿನ್ನ ಕಂಬನಿ ಆದರೆ
ನಿನ್ನ ನೋವಿನಲ್ಲೂ ಒಂದಷ್ಟು ಸಾಲು ಕೇಳ್ತೀನಿ
ನಿನ್ನ ಅಮಾಯಕ ಕಂಗಳಲಿ
ಮಣಿಸಲ್ಚಿಸ್ತೀನಿ
ನೀನೇ ನನ್ನ ಕಂಬನಿಯಾದರೆ
ನಮ್ಮ ಸ್ನೇಹದ ಮೇಲಾಣೆ
ಸಾಯೋ ತನಕ ಅಳದೆ ಇರ್ತೀನಿ"
ಇಷ್ಟು ಮಾತ್ರ ಹೇಳಬಲ್ಲೆ. ಮುಂದೆ ಜೊತೆಯಾಗಿ ಸ್ನೇಹದ ಉದ್ಯಾನ ಕಟ್ಟೋಣ. ಆ ಹುಮ್ಮಸ್ಸು ನನ್ನದು. ಜೋತೆಯಾಗಿರ್ತಿರಲ್ಲ...?

5 ಕಾಮೆಂಟ್‌ಗಳು:

 1. ಹಾಯ್
  ಪ್ರತಿ ಬೆಳಗೂ ಪ್ರೀತಿಯೊಂದಿಗೆ
  ಸುರುವಾಗಲಿ ಅನ್ನುವ ಸಾಲು ತುಂಬಾ ಇಷ್ಟವಾಯಿತು
  ನಿಮ್ಮ ಬರವಣಿಗೆ ಸುರುವಾಗಲಿ ಓದುವ ಬಾಗ್ಯ ನಮ್ಮದಾಗಲಿ.
  ಬ್ಲಾಗ ಲೋಕಕ್ಕೆ ಸ್ವಾಗತ.
  ಬಿಡುವಿದ್ದಾಗ ನನ್ನ 'ಸಾವಿರ ಕನಸು'ಗೂ ಬನ್ನಿ.

  ಪ್ರತ್ಯುತ್ತರಅಳಿಸಿ
 2. ಸುಂದರ ಭಾವ ಪಲ್ಲವಿಗಳನ್ನು ಕಂಡು ಸಂತೋಷವಾಯಿತು.ರಾತ್ರಿ...,ಅದಕದ್ದಿದ ಕನಸುಗಳು,ತಟ್ಟಿ ಎಚ್ಚರಿಸಿದ ಸೂರ್ಯ,ಬೆಚ್ಚಿ ಮಗ್ಗುಲು ಮಗುಚಿಕ ಹಕ್ಕಿಗಳು,ಇಷ್ಟಿಷ್ಟೇ ಕತ್ತಲೆಯ ಪರದೆ ಸರಿಸಿ ಇಣುಕಿದ ಮುಂಜಾವು... ಇವೆಲ್ಲಾ ನಿಮ್ಮ ಮನಸ್ಸಿನ ಬುಟ್ಟಿಯಲ್ಲಿ ಕಂಡೆ. ಉತ್ತಮ ತುಟಿ ಬಿರಿದ ಮಾತು, ಮಲ್ಲಿಗೆಯಂತೆ.
  ನನ್ನ ಪ್ರೀತಿ ನನ್ನದು.. ವರ್ತಮಾನದ ಆಹ್ಲಾದತೆಯೊಂದಿಗೆ ಭವಿಷ್ಯದ ಬುತ್ತಿ ಕಟ್ಟುತ್ತಿದೆ.
  ಮಾಯೆಯ ಬಲೆಯೊಳಗೆ ಸಿಲುಕಿರುವ ನಾನು ನೆನಪುಗಳೊಂದಿಗೆ ಬದುಕುತ್ತಿದ್ದೇನೆ..
  : ಇದು ಹೆಕ್ಕಿ ತೆಗೆದ ಕನಸಿನ ಹಕ್ಕಿಯ ಭಾವದ ಮೊಟ್ಟೆಗಳು.ಮರಿಯಾಗಲಿ.ಹಾರೈಸುತ್ತೇನೆ.

  ಪ್ರತ್ಯುತ್ತರಅಳಿಸಿ
 3. ಪಿ ಎಸ್ ಬ್ಲಾಗ್ ಶುರು ಮಾಡೋಕೆ ಮುನ್ನುಡಿ ಸೂಪರ್ ಇದೆ. ಈ ಬ್ಲಾಗಿಂದ ಯಾವ ರೀತಿಯ ಲೇಖನಗಳು ಸಿಗುತ್ತವೆ ಎನ್ನುವುದಕ್ಕೆ ರಹದಾರಿ ಈ ಮುನ್ನುಡಿ.

  ಪ್ರತ್ಯುತ್ತರಅಳಿಸಿ
 4. ಮೌನರಾಗದ ಮುನ್ನುಡಿಗೆ ಪ್ರೀತಿಯ ಸ್ವಾಗತ ನೀಡಿದ ಎಲ್ಲರಿಗೂ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ