ಮಾರ್ಚ್ 22, 2011

ಅಂದು- ಇಂದೂ..

ಅಂದು ನನ್ನವರನ್ನು ತೊರೆದು 
ಇವರೇ ನನ್ನವರೆಂದು
ಇವರಿಂದೆ ಬಂದಾಗ
ಭದ್ರ ಸೂರಿಗೆ, ಹಿಡಿ ಪ್ರೀತಿಗೆ
ಕಾಯ್ವ ಜಾತಕದಂತೆ ನನ್ನ ಕನಸಿತ್ತು
ಮನದಲ್ಲಿ ಸಾವಿರ ದೀಪಗಳ ಬೆಳಕಿತ್ತು..

ಇಲ್ಲಿ ಇವರ ಅವರಿವರ 
ಬೇಕು ಬೇಡಗಳಿಗೆ ಕಿವಿಯಾಗಿ
ಕೈಯಾಗುವಾಗ ಉರಿವ
ಒಲೆಯೊಳಗೆ ಕನಸುಗಳೂ ಉರಿಯುತ್ತಿತ್ತು
ಇಷ್ಟರೊಳಗೆ ನನ್ನೊಡಲು ತುಂಬತೊಡಗಿತ್ತು
ಮನಪಟಲದ ತುಂಬೀಗ ನನ್ನ
ಕೂಸಿನ ನಾಳೆಗಳಿತ್ತು...

ಇವೊತ್ತು ನನ್ನ ಕೂಸಿನ ನಾಳೆಗಳು..!
ತಡಕಾಡಿದರೂ ಸಿಗುತ್ತಿಲ್ಲ
ಆ ಸಾವಿರ ದೀಪಗಳ ಬೆಳಕು,
ಕಾಣುವುದು...
ಆಸ್ಪತ್ರೆ ಬಿಲ್ಲಿನಿಂದ ಕೆಂಡವಾದ
ನನ್ನ ಕೂಸಿನ ಕಂಗಳು
ಮತ್ತು ಬೂದಿಯಾದ
ನಾ ಬಯಸಿದ್ದ ಆ ಹಿಡಿ ಪ್ರೀತಿ..!!