ಸೆಪ್ಟೆಂಬರ್ 20, 2011

ಮುಗಿದ ಭಾವ..

ಕನಸುಗಳ ಬೆಂಬತ್ತಿದ ಪಯಣವಿದು
ನಿನ್ನುಸಿರು ನನ್ನೆಸರ ಪಿಸುಗುಡೋ ಸಂಭ್ರಮವಿತ್ತು
ಅಳತೆ ಮೀರಿದ ಭಾವಗಳ ಆಂದೋಲನವಿತ್ತು
ನನ್ನನ್ನುರಾಗದಲಿ ಕೋತಿ ನಕ್ಷತ್ರಗಳ ಬೆಳಕಿತ್ತು
 
ಮನತುಂಬಿ ಬರುವ ನಿನ್ನ ನೆನಪುಗಳಿತ್ತು
ಅದೆಷ್ಟೋ ಸಮಯಗಳ ಲೆಕ್ಕ ತಪ್ಪಿತ್ತು
ಮುನಿಸಿಗೂ ಅರ್ಥ ಹುಡುಕುವ ಬಗೆಯಿತ್ತು
ಸರಿಸುವೆನೆಂದರೂ ಸರಿಸಲಾಗದ ಬಂಧನವಿತ್ತು
 
ಈಗಿಂತೆ ನಿನ್ನಲ್ಲಿ ಕೊನೆಗೊಂಡ ಆ ಭಾವಗಳಿಗೆ
ನನ್ನೊಲಿಸಿದ ಮಧುರ ಕ್ಷಣಗಳ ನೆನಪುಗಳಿಗೆ
ಪ್ರತಿ ದಿನ-ಕ್ಷಣಗಳು ಬಿಡದಂತೆ ತಿಲತರ್ಪಣವನ್ನೀಯುತ್ತಿದ್ದೇನೆ
ಮುಗಿದ ನನ್ನೊಲವಿನ ಭಾವಕ್ಕೆ ಶಾಂತಿ ಸಿಗಲೆಂದು..!!

ಸೆಪ್ಟೆಂಬರ್ 13, 2011

ಮಾತು..

ಮಾತು..
ಕೆಲವೊಮ್ಮೆ ಭೋರ್ಗರೆದು ಸುರಿಯುತ್ತದೆ
ಗುಡುಗು ಮಿಂಚು ಒಟ್ಟೊಟ್ಟಿಗೆ ಮೇಳೈಸುತ್ತದೆ
ಒಳಗಿನ ನಿಟ್ಟುಸಿರು, ಆಳದ ಬೆಂಕಿ
ಹೋರಚೆಲ್ಲಲ್ಪಡುತ್ತದೆ...ಪ್ರವಾಹವಾಗುತ್ತದೆ...
ಕಡೆಗೆ ಎಲ್ಲಾ ಕಚ್ಚಿಸಿ,ಕೊಚ್ಚಿಸಿಕ್ಕೊಂಡು
ಶಾಂತನಾದೆನೆಂದು ಬೀಗುತ್ತದೆ..

ಮಗದೊಮ್ಮೆ..
ಮಾತು ಮೃದು- ಮಧುರ..
ತುಂತುರಿನ ಸೋನೆಯಂತೆ
ಮಿಂದಷ್ಟು ಮೀಯಬೇಕಂಬಂತೆ
ಹಿತವಾಗಿ ಮಿತವಾಗಿ ಅಪ್ಯಾಯಮಾನವಾಗುತ್ತದೆ
ತಂಗಾಳಿಯಂತೆ ಮೈಮನಸ ಸೋಕುತ್ತದೆ
ಹ್ರದಯ ಬೆಚ್ಚಗಿನ ಮಿಡಿತವನ್ನೆಲ್ಲ
ಬೊಗಸೆಯಲ್ಲಿ ಮೊಗೆಮೊಗೆದು ಕೊಡುತ್ತದೆ


ಆದರೂ ಕೆಲವೊಂದು ಬಾರಿ..
ಜಪ್ಪೆಂದರೂ ತುಂತುರಿನ ಹನಿ ಹನಿಸುವುದಿಲ್ಲ..
ಮಿಂಚಿಲ್ಲ..ಗುಡುಗಿಲ್ಲ..
ಇನಿತೂ ಮಳೆಯ ಪಸೆ ಇಳೆಯೋಳಗಿಲ್ಲ..
ಬರಡು...ಬರಿದು ಮತ್ತು ಬರಿದು ಮಾತ್ರವೇ...!
ಮಾತಿನ ಉಸಿರು ಮೌನದಲ್ಲಿ  ಕಟ್ಟಿಹೋಗಿದೆ
ಕಪ್ಪನೆಯ ಮೋಡ ಎದೆಯ ಮಿದುವೊಳಗೆ
ಕರಗಿ ಸುರಿಯಲೋಲ್ಲದು...
ಹೆಪ್ಪುಗಟ್ಟಿದೆ...!!