ನವೆಂಬರ್ 26, 2011

ಅವನಿರುವುದೂ ನಮ್ಮೊಳಗೇ..!


ಲಾರಿಯೊಂದು ರೊಯ್ಯನೆ
ಕ್ಷಣಮಾತ್ರವೂ ನಿಲ್ಲದಂತೆ
ಹಾದು ಹೋಗಿದ್ದು - ಸುಮ್ಮನ್ನಲ್ಲ..!
ಹರಿದ್ದಿದ್ದು ವ್ಯಕ್ತಿಯೊಬ್ಬನ ಮೇಲೆ.
ರಕ್ತ ಬಳಬಳನೆ ಸುರಿಯತೊಡಗಿತ್ತು
ಮಾಂಸಖಂಡಗಳು ಕಿತ್ತು ಬಂದಿತ್ತು.

ಜನರೆಲ್ಲಾ ಅಯ್ಯೋ! ಪಾಪ!
ಎನ್ನುತ್ತಲೇ ಧಾವಿಸಿ ಬಂದರು
ಲಾರಿಯವನನ್ನು ದೂರಿದರು
ಬಾರದ ಪೋಲೀಸರ ಬಗ್ಗೆ ಜರಿದರು 
ಟ್ರಾಫಿಕ್ಕಿನ ಕುರಿತು ಕೊರೆದರು
ಯಾವ ತಾಯ ಮಗನೋ ಶಿವನೆ!
ಕನಿಕರಿಸುತ್ತಾ ಮುಂದೆ ಸಾಗಿದರು.

ಜೀವದ ಜೊತೆ ಸೆಣಸಾಡುವ 
ಅವನದು, ತನ್ನತ್ತ ಬರುವವರಿಗಾಗಿ 
ದೀನನೋಟ..!
ಕ್ಷಮಿಸಿ...!
ನಾವಂತೂ ಕೇಸುಗಳ ಮದ್ಯೆ
ಸಿಲುಕಲಾರೆವು...
ಇನ್ನು ಲಾರಿಯವನು ಬರುವುದೆಲ್ಲಿಂದ?
ಅವನಿರುವುದೂ ನಮ್ಮೊಳಗೇ!

ನವೆಂಬರ್ 3, 2011

ಕಾದಿದ್ದೇನೆ...!ಪ್ರೀತಿ ಜ್ಯೋತಿಯ ಹಚ್ಚಿ
ಒಂದಾಗುತ್ತಿದ್ದ ಕಾಲವದು 
ನಿನ್ನೊಳಗಿನ ದುಃಖ-ದುಮ್ಮಾನಗಳು 
ನನ್ನೊಡಲಲ್ಲಿ  ಕರಗಿಬಿಡುತ್ತಿದ್ದವು
ತೊಯ್ದ ತುಂಬಿಕ್ಕೊಂಡ ಸೆರಗ 
ಶುಭ್ರ ಮಾಡಿ
ಮತ್ತೆ ಹಾಗೆಯೇ ಕುಳಿತಿರುತ್ತಿದ್ದೆ
ನೀ ಬರುತ್ತಿದ್ದೆ
ನನ್ನೊಡಲು ತುಂಬುತ್ತಿದ್ದೆ 

ಆರಿದ ಪ್ರೀತಿ ಜ್ಯೋತಿಯ ಮುಂದೆ 
ನಾನಿಂದು ಒಬ್ಬಂಟಿ
ಅನುರಾಗ ಸುಳ್ಳಾಯಿತೇ?
ಕಂಬನಿ ಉಕ್ಕುಕ್ಕಿ ಹನಿಯುತಿರೆ
ಎದೆಯುಕ್ಕಿ ಬಿಕ್ಕುತಿರೆ
ದೀಪವಿಲ್ಲದ ದಾರಿಯಲ್ಲಿ - ನಟ್ಟಿರುಳು !
ಕುರುಡಾಗಿದ್ದೇನೆ..
ಅಂದು ನಿನಗೆ ನಾ ಬೇಕಿದ್ದಂತೆ
ಇವೊತ್ತು ನನಗೆ ನೀನು!
ಇರುಳ ಅಂಧಕಾರವ ಸೀಳಿ ಬಾರೆಯಾ?
ಸೆರಗೊಡ್ಡಿ ಕಾದಿದ್ದೇನೆ...!