ಡಿಸೆಂಬರ್ 26, 2011

ಕಿಚ್ಚು..


ಅವನಲ್ಲಿದ್ದ ಪಣವು ಇಷ್ಟೇ ಇಷ್ಟು..
ಹೊಟ್ಟೆಯ ಕಿಚ್ಚಿಗೆ ಸಾಕಾಗುವಷ್ಟು
ಪುಟ್ಟ ಸೂರ ಕಟ್ಟಿಕ್ಕೊಳ್ಳುವಷ್ಟು
ಬಟ್ಟೆ ಬರೆಗೆ ತಕ್ಕಷ್ಟು.
ಇದ್ದಿದ್ದು ಇಷ್ಟೇ ಇಷ್ಟು.
ಬೇಕಿತ್ತು ಅಷ್ಟು..
ಆಸೆ ಸಿಕ್ಕಷ್ಟು ಬಾಚಿಕ್ಕೊಳ್ಳುವಷ್ಟು
ದಾಹಕ್ಕೆ ಮಿತಿಯಿರದಷ್ಟು
ಇಲ್ಲಿ ಸಿಗಲಾರದು ಅಲ್ಲಿರುವಷ್ಟು
ಹೊರವುದಷ್ಟೇ ಸರಿ!

ಇಷ್ಟಪಟ್ಟಿದ್ದು ಕಷ್ಟವಾಗಿದೆ
ಸೊರಗಿ ದೇಹ ನಿತ್ರಾಣವಾಗಿದೆ 
ಜಠರದ ಹಸಿವಿಗೆ
ದೇಹ ದಣಿಯ ತಾಯಾರಿಲ್ಲ
ತಣ್ಣೀರ ಬಟ್ಟೆಯೂ ಆರಿದೆ
ಇಂತಹ ಹೊತ್ತಲ್ಲೇ ಬಿಟ್ಟುಬಂದ
ಅಂವ ನೆನಪಾಗುತ್ತಾನೆ
ಕಿಚ್ಚ ದಹಿಸಲು ಅಸಮರ್ಥನಾದವ  
ಈ ಮೂರು ಗಂಟು ಬಿಗಿದವ.
 

ಡಿಸೆಂಬರ್ 15, 2011

ಕಾದಿಹೆನು.. !

ಮುನಿಯ ಕೆಂಗಣ್ಣಿಗೆ, ಶಾಪಗ್ರಸ್ಥೆಯಾಗಿ
ವ್ಯಾಮೋಹದ ಸಂಚಿಗೆ  ಬಲಿಯಾಗಿ 
ಅಗಣಿತ ಶಿಲೆಗಳಲ್ಲಿ ತಾನೊಂದು ಶಿಲೆಯಾಗಿ
ಮೋಕ್ಷದ ನಿರಂತರ ನೀರಿಕ್ಷೆಯಲ್ಲಿ 
ಕಾದಿಹೆನು..

ಹೃದಯ ಸೋತಿತು ಪ್ರೇಮದಲ್ಲಿ
ಮುಗ್ದ ಬುದುಕು ಹತವಾದ ನೋವಿನಲ್ಲಿ 
ಪತಿ ಸೇವೆಯ ಭಾಗ್ಯವಿಲ್ಲದ ನಿರಾಶೆಯಲ್ಲಿ 
ಕರಗಲೋಲ್ಲದ ಕೊರಗಿನಲ್ಲಿ
ಕಾದಿಹೆನು..

ಯಾರರಿಯರು ತನ್ನಂತರಂಗದ ತಳಮಳವನ್ನಿಲ್ಲಿ 
ತಟ್ಟಿ ಕುಟ್ಟಿದರೂ ಭಾವವರಿಯದು ಶಿಲೆಯಲ್ಲಿ 
ಬಿಸಿಲ ಧಗೆ ಸುಟ್ಟರೂ ಕಾಯುತ್ತಿದ್ದೇನೆ 
ಮೃದು-ಮಧುರವಾಗೆ
ಬಂದು ಬಿಡು ಶ್ರೀರಾಮ..
ಕಾದಿಹೆನು ನಾ  ಅಹಲ್ಯೆ..