ಜನವರಿ 31, 2012

ಹನಿಗಳು...

೧. ಮಾಗಿಯ ಮುಂಜಾವಲಿ
    ದೃಡವಾಗಿ ನಿಂತಿರುವ ನಿನ್ನನ್ನು
    ನೇಸರ ಮುತ್ತಿಕ್ಕುವ ಮುನ್ನ
    ಬಳ್ಳಿಯಾಗಿ ನಾ ತಬ್ಬಬೇಕಿದೆ

೨. ಮನಸ ದುಮ್ಮಾನವನ್ನೆಲ್ಲಾ
    ನಿನ್ನೆದುರು ಹರವಿ
    ಹಗುರಾಗಿಸಿಕ್ಕೊಳ್ಳೊಣವೆಂದರೆ
    ಆಮೇಲೆ ತಿಳಿದಿದ್ದು
    ನೀ ಮನದ- ಕುರುಡನೆಂದು

೩. ನೀ ಬೆನ್ನು ಮಾಡಿ ಹೋದಾಗ
    ನಾ ಕಾದಿದ್ದೆ, ಪ್ರಬುದ್ಧತೆಯೊಂದಿಗೆ
    ಮರಳುವಿಯೆಂದು
    ನನಗಾಗ ತಿಳಿದಿರಲಿಲ್ಲ
    ನೀ ಬಂಧನವ ಕಳಚಿಟ್ಟು
    ಹೊರ ನಡೆದಿದ್ದೆಂದು

 
೪. ನಿನ್ನ ಕಲ್ಲೆದೆ ಕರಗಲೆಂದು
      ಮತ್ತೆ ಮತ್ತೆ ಬಡಿದೆ
      ನೀ ಕರಗಲಿಲ್ಲ
      ಒಡೆದು ಹೋದೆ...!


೫. ನಿನ್ನ ಮೌನಕ್ಕೊಂದಿಷ್ಟು
     .....ನೀಡಿ ಸಾಯಿಸು
    ನಾ ನಿನ್ನ ಸಂಗಕ್ಕೆ
    ನೇಣು ಬಿಗಿಯುವ ಮುನ್ನ...!!

 ಜನವರಿ 18, 2012

ಹೆಂಗಸು..


ಹರಿದಿದ್ದು ಬೆವರೋ ರಕ್ತವೋ ಅಸ್ಪಷ್ಟ 
ಕದಡಿದಷ್ಟು  ಕೆಸರು ಹೂಳಿಸಿಕ್ಕೋಳ್ಳುತ್ತಿತ್ತು
ದಣಿವರಿಯದ ಮೈಗೆ ರಾತ್ರಿ-ಹಗಲೆರಡರಲ್ಲಿ ಕೆಲಸ
ಚಿಂದಿಯಾದ ಬದುಕಿನ ಶ್ರಮಕ್ಕೆ 
ಸಿಕ್ಕಷ್ಟೇ ಕಾಸು

ಎದೆಯೊಳಗಿನ ಬವಣೆಗಳ ಬಿಸಿ-ಬಿಸುಪಲ್ಲಿ
ಕಾವಾರಿಸಿಕೊಂಡವರೇ ಎಲ್ಲಾ
ಯೌವನಕ್ಕೆ  ದಯೆಯಿಲ್ಲ ಮಗನೇ,ಗಡುಸಾಗುತ್ತದೆ
ಮೈ ಬಗ್ಗಿಸಿದಷ್ಟು ಹೊಳಪೇರುತ್ತದೆ

ಎಲ್ಲರೊಳು ಮೀಗಿ, ಜತನವಾಗಿ
ಸೆರಗ ತುದಿಯಲ್ಲಿ ಕಾಸು ಮಡಚಿ ಕೂಡಿಟ್ಟಿದ್ದೆನೆ 
ಬಯಲ ಹೆಂಗಸೆಂಬುದೊಂದು  ಬಲೆ
ಬಲೆಯೊಳಗೆ  ಬಿದ್ದಮೇಲೆ ನೆಲೆಯಿಲ್ಲ, ಬೆಲೆಯಿಲ್ಲ 

ಯಾರಿಗೆ ಅದೇನೇನೋ ನಾನಾಗಿದ್ದರೂ 
ಕಂದಾ..ನಾ ನಿನ್ನ ಅಮ್ಮನೇ...