ಫೆಬ್ರವರಿ 16, 2012

ನಿತ್ಯ ನಿರ್ಲಿಪ್ತ..!

ಅನುರಾಗದ ಭೂಮಿಕೆಯಲ್ಲಿ 
ಬಿಡದೆ ಕಾಡುವ ನಿನ್ನ ಭಾವಬಿಂಬಗಳು
ಜಡಿಮಳೆಯಂತೆ ಸುರಿವ ನೆನಪುಗಳು 
ಕನಸು ಕಣ್ಣಿನ ಪ್ರೀತಿ ಹನಿಗಳು
ನನ್ನೆದೆಯ ಹುಡುಗ ಇಣುಕುತ್ತಿದ್ದಾನೆ ಅಲ್ಲಿ
ತಾ ನಿತ್ಯ ನಿರ್ಲಿಪ್ತನೆಂಬ ಸ್ಥಿತಿಯಲ್ಲಿ..!

ಒಮ್ಮೊಮ್ಮೆ ದೀನ ಸ್ಥಿತಿ 
ಪಾದ ಮುಟ್ಟಿ ಬೇಡಿ, ಒಪ್ಪಿಸಿಕೋ ಎನ್ನುವಂತೆ
ಮಗದೊಮ್ಮೆ ಹೇರಳ ಆಸ್ಥೆ 
ಬಿಡದೆ ಭೋರ್ಗರೆದು 
ಮನದ ಬಂಡೆಗೆ ಅಪ್ಪಳಿಸುತ್ತದೆ
ಕರಗಿತೇನೋ ಎನ್ನುವಂತೆ..
ಹಂಬಲಿಕೆಯೇ ಬದುಕಾದಂತೆ..!
ಚಿಮ್ಮುವ, ಪಿಸುಗುಡುವ ಸವಿನೆನಪುಗಳು
ಭ್ರಮೆಯ ಕಣ್ಣುಗಳಂತೆ!
ಅವನು ಮಾತ್ರ ನಿತ್ಯ ನಿರ್ಲಿಪ್ತ..

ಇಂದಲ್ಲ ನಾಳೆ ಜೊತೆಯಾಗಿ ಬಂದಾನು
ಸಾವಿರ ಕನಸಿಗೆ ರಂಗು ತಂದಾನು
ಕಾರ್ಮೋಡ ಕರಗಿ ಮಳೆಯಾಗಿ ಹನಿಸುವುದನ್ನು 
ಕಾಣಲು ತವಕಿಸುತ್ತಿದ್ದೇನೆ ಇನ್ನಿಲ್ಲದಂತೆಫೆಬ್ರವರಿ 8, 2012

ಕನಸ ಖಜಾನೆ..

ಅಟ್ಟದ ಮೇಲೊಂದು ಇಟ್ಟಿಗೆಯ ಬದಿಯಲ್ಲಿ
ಕನಸ ಖಜಾನೆಗೆ ಬೀಗ ಜಡಿದು ಇಟ್ಟುಬಿಟ್ಟಿದ್ದೆ 
ಸುಮ್ಮನಾದರೂ ಕೂರುತ್ತ, ಅಲೆಯುತ್ತಾ
ದಿಕ್ಕಿಲ್ಲದೆ ಎಡವುತ್ತಾ, ಪರದಾಡುತ್ತಾ..!
ಖಜಾನೆಯ ಕೀಲಿಕೈ ಕಳೆದುಹೋಗಿತ್ತು 
ಒಳಗಿನ ಕನಸುಗಳಂತೆ..
ದುಃಖವಿರಲಿಲ್ಲ..!
ಕತ್ತಲ ಬೆನ್ನಿಗೆ ಬೆಳಕು ಸುತ್ತಲೂ
ಕಳೆದುಹೋದುದು ತಡಕಾಡಿತು
ಜಡಿದ ಬೀಗ ಮುರಿದು ಹೋಯಿತು 
ಅಂಧಃಕಾರದ  ಕಾನನದಲ್ಲಿ
ಎತ್ತಲೊಂದು ಸೂರ್ಯರಶ್ಮಿ 
ಹೂ ಬಿಸಿಲು ಆವರಿಸುತ್ತದೆ ಮುತ್ತಿಡುತ್ತದೆ, 
ತೆರೆದ ಪೆಟ್ಟಿಗೆಯಲ್ಲಿ ರಾಶಿ ಕನಸುಗಳು 
ಕೈಬೀಸಿ ಕರೆದಂತಿತ್ತು 
ಕಸು ಮಾಡಲು ಕಾದಂತಿತ್ತು
ತುಟಿ ಬಿರಿಯಲು ಮೂಡಿತೊಂದು ಆತ್ಮವಿಶ್ವಾಸ 
ಕತ್ತಲ ಸರಿಸಿ ಬೆಳಕು ಹರಿಯಿತು
ಅಪ್ಪಿಕೊಂಡ ಕನಸ ಖಜಾನೆ ಭದ್ರವಾಯಿತು.