ಏಪ್ರಿಲ್ 10, 2012

ನಿರೀಕ್ಷೆ...

ಕನಸಿನರಮನೆಯ ನಿನ್ನದಾಗಿಸಿ
ಮನಸಿನ ಭಾವಾನುರಾಗ ನನ್ನದಾಗಿಸಿರುವೆ
ಕನಸು-ಮನಸು ಅದಲು ಬದಲಾಗಿಸಿ
ಬೀಸಿದ ಗಾಳಿಯ ತಂಗಾಳಿಯಾಗಿಸಿ
ನಾ ನಿನ್ನೊಳಗೇ ಸೇರಿ ಬಿಟ್ಟಿರುವೆ


ನಿನ್ನ ಕಿರುನಗೆಯಲ್ಲಿ ಕರಗಿ
ಮಂದಹಾಸದಲ್ಲಿ ಮಿನುಗುತ್ತೇನೆ
ಕಣ್ಣಹನಿಯಲ್ಲಿ ಸತ್ತು
ಹೃದಯದಲ್ಲಿ ಬದುಕುತ್ತೇನೆ
ನಿನ್ನುಸಿರಲ್ಲಿ ಕನಸಿಟ್ಟು
ನನ್ನುಸಿರ ಅಡವಿಡುತ್ತೇನೆ..

ಅಪರಿಚಿತ ಭಾವವೊಂದು ಒಳಸೇರಿ
ಪರಿಚಯವಾಗಿ ಕಾಡುತಿದೆ
ಮನದ ಚುಕ್ಕಿಯ ರಂಗೋಲಿ
ರಂಗು ಅರಸುತಿದೆ 
ಬಿರಿದ ನೆನಕೆಗಳ ಗಂಧ
ಬಾಗಿಲಾಚೆಗೆ ಕಣ್ಣು ನೆಟ್ಟಿದೆ 

ಒಡಮೂಡಿದ ಭಾವಗಳ ಬಂಧ
ನಿನ್ನಲ್ಲಿ ಬೆಸೆಯಬೇಕು
ಯಾವಾಗ ಸಿಗುತ್ತಿಯಾ ಹುಡುಗಾ?