ಸೆಪ್ಟೆಂಬರ್ 25, 2012

ಹನಿ ಹನಿ ಇಬ್ಬನಿ...

1. ಒಂಟಿತನವನ್ನೇ
ಉಸಿರಾಡಿದವಳಿಗೆ
ಸಂಬಂಧಗಳ್ಯಾಕೋ
ಉಸಿರುಕಟ್ಟಿಸುತ್ತವೆ...!


2. ಒಡಲ ಬಗೆದು
ಒಡಲ ನೋವ
ಶಮನ
ಮಾಡುತ್ತೇನೆಂದವರು..!!


3. ಇವನು-
ಅಮಾವಾಸ್ಯೆಯಂತಹ
ಬದುಕಲ್ಲಿ
ಹಾಲು ಬೆಳದಿಂಗಳ
ಸುರಿಸಿದ ಚಂದ್ರಮ...


4. ಅಮ್ಮ-
ಒತ್ತಿ ಬರುವ
ದುಃಖಕ್ಕೆ
ತಡೆಗೋಡೆಯಾಗಿ
ನಿಂತವಳು...


5. ಅವಳ ಜೊತೆ
ನಿನ್ನ ಕಂಡಾಗಲೇ
ಅಸಹನೆಯ
ಹೊಗೆಯಾಡಿದ್ದು...!


6. ನೀ ಜೊತೆ ಇರೆ
ನಿನ್ನ ಕಣ್ಣ ಬೆಳಕಲ್ಲೇ
ಕತ್ತಲ ಸರಿಸಿ
ಬದುಕ ಸವೆಸಿಯೇನು..


7. ನನ್ನೊಲುಮೆ
ಆಕಾಶದಷ್ಟು ವಿಶಾಲ
ಎನ್ನುತ್ತಿದ್ದಂತೆಯೇ
ನಿನ್ನ ಪ್ರೀತಿಯ
ಕ್ಷೀರಸಾಗರದಲ್ಲಿ
ಮಿಂದಿದ್ದೆ...


8. ನಿನ್ನ ಜಾಗವನ್ನು
ಯಾರೂ ತುಂಬಲಾರರು
ಎನ್ನುತಿದ್ದೆ...
ಈಗ ನನ್ನವಳು ಆ ಮಾತನ್ನ
ಸುಳ್ಳಾಗಿಸಿದ್ದಾಳೆ.


9. ಕೆನ್ನೆ ತೋಯಿಸಿದ
ನೆನಪುಗಳೆಲ್ಲ ಮುತ್ತಾಗಿವೆ...
ನಾ ಮುತ್ತುಗಳ
ರಾಣಿಯಾಗಿದ್ದೇನೆ..!!


10. ನೆನಪಿನ
ಹೂಜಿಯಲ್ಲಿ
ಕನಸಿನ ಬೀಜ
ಮೊಳಕೆಯೊಡೆದಿದೆ...

ಸೆಪ್ಟೆಂಬರ್ 17, 2012

HAPPY BIRTHDAY TO YOU

ಇವನು-
ಖಾಲಿ ಮನಸಿಗೆ ಕನಸು ತಂದವನು
ನೀರಸ ಬದುಕಿಗೆ ಬೆಳಕ ತಂದವನು

ಬಳಲಿದ ಕಂಗಳಿಗೆ ಕಾಂತಿಯ ತಂದವನು
ಬರಿದಾದ ಹೃದಯಕ್ಕೆ ಒಡೆಯನಾಗಿ ಬಂದವನು
ನನ್ನ ದನಿಗೆ ಕಿವಿಯಾದವನು
ಸುಮ್ಮಸುಮ್ಮನೆ ಬೇಸರಿಸಿದವನು

ನನ್ನೊಳಗೆ ಸಾವಿರ ಹಣತೆಗಳ ಹಚ್ಚಿಟ್ಟವನು
ಕೈ ಹಿಡಿದು ಮುನ್ನಡೆಸಿದವನು
ನನಗಾಗೆ ನಾಲ್ಕು ಸಾಲು ಗೀಚಿ ಕವಿಯಾದವನು
ಹಣೆಯ ಮುತ್ತಲ್ಲಿ ಧೈರ್ಯ ಹೇಳಿದವನು

ದೇಹಕ್ಕೆ ಜೀವವಾಗಿ ಬಂದವನು
ಜೀವದ ಉಸಿರಾದವನು
ಹೃದಯದ ಮಿಡಿತವಾದವನು
ಬಿಗಿ ಅಪ್ಪುಗೆಯಲ್ಲಿ ನೋವ ಮರೆಸಿದವನು

ನನ್ನೊಳಗೆ ಎಲ್ಲವೂ ಆದವನು
ನನ್ನ ಪ್ರಾಣ ಪದಕ - ಇವನು.

 HAPPY BIRTHDAY TO YOU

ಹುಟ್ಟು ಹಬ್ಬದ ಸಂಭ್ರಮದಂತೆ
ಜೀವಮಾನವಿಡಿ ಸಡಗರ ತುಂಬಿರಲಿ

ಸಾಲು ದೀಪಗಳ ಬೆಳಕಂತೆ
ಜೀವನ ಬೆಳಗುತಿರಲಿ
ಸುಖ ಸಂತೋಷ ನೆಮ್ಮದಿಗಳು
ಮೊಗೆ ಮೊಗೆದು ಬರುತಿರಲಿ

ಹುಟ್ಟು ಹಬ್ಬದ ಶುಭಾಶಯಗಳು ನನ್ನ ಜೀವವೇ...


ಸೆಪ್ಟೆಂಬರ್ 15, 2012

ಮೌನರಾಗ...!

ಈ ನನ್ನ ಮೌನರಾಗಕ್ಕೆ ಎರಡು ವರ್ಷದ ಸಂಭ್ರಮ...ಬ್ಲಾಗ್ ಲೋಕದ ಪರಿಚಯವಾಗಿ ಎರಡು ವರ್ಷಗಳು ತುಂಬಿ ಬಿಟ್ಟವೇ..!? ನನ್ನಲ್ಲಿ ಅಚ್ಚರಿ...!
ನೋಟ್ ಬುಕ್ಕಿನ ಕೊನೆಯ ಹಾಳೆಯಲ್ಲಿ, ಡೈರಿಯ ಮೂಲೆ ಮೂಲೆಯಲ್ಲಿ ಅವಿತಿರುತ್ತಿದ್ದ ತಿರುಗು ಮುರುಗು ಸಾಲುಗಳೆಲ್ಲ ಈಗ ಮೌನರಾಗದಲ್ಲಿ ಬೆಚ್ಚಗಿವೆ.. ಬರೆದಿದ್ದು ತೀರಾ ಕಡಿಮೆ.. ಆದರೂ ಅಂತರಂಗದ ಒತ್ತಡಗಳನ್ನು ನಿವಾರಿಸಿದ, ಸಂತೋಷಕ್ಕೆ ಜೊತೆಯಾದ ಕೀರ್ತಿ ನನ್ನ ಬ್ಲಾಗ್ ಗೇನೇ ಸಲ್ಲುತ್ತದೆ...ಕೆಲವೊಮ್ಮೆ ಇಂತಹ ಅಂತರಂಗದ ಗೆಳತಿಯನ್ನೂ ಅಂತರಂಗದಿಂದ ದೂರವೇ ಇಟ್ಟಿದ್ದೇನೆ.. ಎರಡು ಮೂರು ತಿಂಗಳು ಸುಮ್ಮನಿದ್ದು ನಾಲ್ಕನೆ ತಿಂಗಳಿಗೆ ಮಾತಾಡಿದ್ದು ಇದೆ..ಮೌನ ಮೌನವೇ..! ಆದರೂ ಇದು ಮೌನಾಂ'ತರಂಗ'.... ಮೀಟಿದ ಭಾವ'ತರಂಗ'...!!’Sweet & Simple Girl....’ ನನ್ನ ಬಗ್ಗೆ ನಾನೇ ಹಾಕಿಕೊ೦ಡು ಬೆನ್ನು ತಟ್ಟಿಕೊ೦ಡಿದ್ದೇನೆ..
ನಿಜಕ್ಕೂ ನಾನ್ಯಾರು...!?
ನಾನು ಮೌನರಾಗ..! ಹೀಗೆಂದು ಹೇಳಿಕೊಳ್ಳುತ್ತೇನೆ..!
ನಿಜ ನಾಮಧೇಯ ಸುಷ್ಮಾ. ಊರು ಮೂಡುಬಿದಿರೆ.
ಕರಾವಳಿಯ ಹುಡುಗಿ.. ಕೆಲಸದ ನಿಮಿತ್ತ ಸಧ್ಯಕ್ಕೆ ಬೆಂಗಳೂರಿನಲ್ಲಿ ವಾಸ.. ಊರು, ಮನೆ, ಅಮ್ಮ ಎಂದರೆ ಜೀವ, ತುಡಿತ, ಮಿಡಿತ...
ಬದುಕಿನೆಡೆಗೆ ಹಾಕುತ್ತಿರುವ ಪುಟ್ಟ ಪುಟ್ಟ ಹೆಜ್ಜೆಗಳಲ್ಲಿ ನೋವು, ನಿರಾಸೆ, ಪ್ರೀತಿ ಮತ್ತು ಕನಸು...
ನನಗೆ ನಾನೇ ಹಾಕಿಕೊಂಡ ಕಟ್ಟುಪಾಡುಗಳಲ್ಲಿ ಕನಸಿನ ಬದುಕು..
ತೀರಾ ಬರೆಯಬೇಕೆಂದು ಹೊರಟವಳಲ್ಲ... ಹೃದಯದ ಮಾತುಗಳಿಗೆ ಕಿವಿಯಿರಲಿ ಎಂದೆನಿಸಿದಾಗ ಬರೆದ್ದಿದ್ದು ಇಷ್ಟು ದೂರ ಎಳೆದುಕೊ೦ಡು ಬಂದಿದೆ.. ಒಂದಷ್ಟು ಸಹೃದಯಿ ಗೆಳೆಯರನ್ನು ಕೊಟ್ಟಿದೆ..ತಪ್ಪಾದಾಗ ತಿದ್ದಿ ಹೇಳುವ, ಪ್ರೋತ್ಸಾಹಿಸುವ ಸನ್ಮಿತ್ರರನ್ನು ಒದಗಿಸಿದೆ..ಬರೆದಿದ್ದು ಇಷ್ಟೇ ಇಷ್ಟಾದರೂ ಧನ್ಯತೆಯಿದೆ.. ಅದಕ್ಕಾಗಿ ನಾನು ಋಣಿ..

ಸೆಪ್ಟೆಂಬರ್ 12, 2012

ಹನಿ ಹನಿ ಇಬ್ಬನಿ..

1. ಮರೆತ ನೆನ್ನೆಯ
ನೆನಪಾದಾಗ
ಜಾರಿದ ಕಣ್ಣ ಹನಿಯಲ್ಲೂ
ನಿನ್ನದೇ ಬಿಂಬ..!


2. ನಿನ್ನ ನೆನಪುಗಳ
ಹೂತಿಡಬೇಕು
ನನ್ನ ಹೃದಯ
ಹಿಂದಿರುಗಿಸುತ್ತಿಯಾ...?

3. ನಿನ್ನ ತೋಳಿಡಿದು
ಓಡಾಡಲಾಗದ
ಈ ಸಂಜೆಗಳೆಂದರೆ
ನನಗೆ ರೇಜಿಗೆ..!

4. ನೀ ನನ್ನ
ಹೃದಯವನ್ನು
ಕೇಳುವುದಕ್ಕಿಂತ
ಪ್ರಾಣ ಕೇಳಬೇಕಾಗಿತ್ತು!

5. ನಿನ್ನ ನೆನಪಿನಿಂದ
ಕೆನ್ನೆ ಜಾರಿದ ಹನಿಗಳೆಲ್ಲ
ಮುತ್ತಾಗಿವೆ
ಸಿಗುತ್ತಿಯಾ?
ನಿನ್ನ ನೆನಪುಗಳನ್ನು
ಹಿಂದುರಿರುಗಿಸಬೇಕು..

6. ಪ್ರೇಮ ಗೀತೆಗಳಿಗಿಂತ
ವಿರಹ ಗೀತೆಗಳೇ
ಹೆಚ್ಚು ಕಾಡುವುದು
ನಿನ್ನ ನೆನಪುಗಳಿಂದಾನೆನ?

ಸೆಪ್ಟೆಂಬರ್ 8, 2012

ಹನಿ ಹನಿ ಇಬ್ಬನಿ..

1. ನನ್ನೆದೆಯ ಬಾಗಿಲು ತೆರೆದಿದೆ
 ಹಿಂದುರುಗುತ್ತಿಯಾ?
ನನ್ನೊಡಲ ನೋವನ್ನು
ನಿನ್ನ ಮಡಿಲಿಗೆ ಹಾಕಿ
ಹಗುರಾಗಬೇಕು...!


2.
ಬಯಸಿದ್ದೆಲ್ಲ ಸಿಗುವಂತಿದ್ದರೆ
ನೀನೇ ಬೇಕೆಂದು
ನಾ ಬೇಡುವುದಕ್ಕೆ
ಅರ್ಥವೇನಿರುತ್ತಿತ್ತು?!


3.
ದಕ್ಕಿದ್ದು ಸಿಗಲಿಲ್ಲವೆಂದು
ನಾ ಎದೆಬಡಿದು ಅತ್ತಿದ್ದು
ಸುಮ್ಮನಲ್ಲ..
ಸಿಗದಾಗ ಸೋರಿ ಹೋಗಿದ್ದು
ನನ್ನ ನಿನ್ನ - ಬದುಕು..!!


4.
ನೀ ತೀರಾ ಸನಿಹ ಬಂದು
ಸೋಕಿದಾಗಲೇ
ನನಗರಿವಾಗಿದ್ದು
ನಿನ್ನ ಉಸಿರಲೂ
ನನ್ನ ಹೆಸರಿರುವುದು..!


5. ಪ್ರೀತಿಯೆಂದರೆ
ನೀನು ಮತ್ತು ನೀನು ಮಾತ್ರ
ಮತ್ತು ಬದುಕೆಂದರೆ
ನಾನು ಮತ್ತು ನಾನು ಮಾತ್ರ!!


6.
ಬದುಕಿಗಾಗಿ ನೀನೋ
ನಿನಗಾಗಿ ಬದುಕೋ
ಅರ್ಥವಾಗದೇನೆ
ನಿನ್ನೊಂದಿಗೆ ಇಷ್ಟು ದೂರ
ಕ್ರಮಿಸಿಬಿಟ್ಟೆ...!


7.
ಜೀವನದ ಮಜಲುಗಳ
ಎಳೆ ಬಿಡಿಸುವುದು ಕಷ್ಟ
ಎಂದು ಕೈಚೆಲ್ಲಿದ್ದಾಗಲೇ
ನನಗೆ ನೀನು ಕಾಣಿಸಿಬಿಟ್ಟೆ.


8.
ನೀ ಮನದಲ್ಲಿ ಮೂಡಿಸಿದ
ನಿನ್ನ ನೆನಪುಗಳ ಹೆಜ್ಜೆಗಳೇ
ಇಂದು ನನ್ನ ಬದುಕಲ್ಲಿ
ಭರವಸೆಯ ದೀಪವಿಡಿದು
ಮೆರವಣಿಗೆ ಹೊರಟಿರುವುದು..!


9.
ನೆನ್ನೆ ರಾತ್ರಿ
ಗುಡುಗು ಮಿಂಚಿನೊಂದಿಗೆ
ಸುರಿದ ಜಡಿಮಳೆ
ನಿನ್ನ ನೆನಪುಗಳದ್ದೆನಾ?


10. ನಾ ಮುಖ ಬಾಡಿಸಿ ಕೂತರೆ
ನೀ ಬರುವವನೇ ಎಂದು ಗೊತ್ತಿತ್ತು
ಅದಕ್ಕೆ ನೆನ್ನೆ ಸಂಜೆ
ಮಾವಿನ ತೊಪಲ್ಲಿ ಹಾಗೆ ಕುಳಿತಿದ್ದು..!

 

ಸೆಪ್ಟೆಂಬರ್ 5, 2012

ಹನಿ ಹನಿ ಇಬ್ಬನಿ..!!

1.ನೀ ನನಗೆ
ಸುಂದರವಾಗಿ ಕಾಣುವುದು
ನಿನ್ನ ಸೌಂದರ್ಯದಿಂದಲ್ಲ ಗೆಳೆಯಾ
ಚಿಗುರುಮೀಸೆಯಡಿಗಿನ
ಆ ನಿನ್ನ ಕಿರುನಗೆಯಿಂದ..!


2.ನಿನ್ನ ಮೇಲಿನ ಕೋಪಕ್ಕೆ
ನಿನ್ನ ಜಡತ್ವಕ್ಕಲ್ಲ ಗೆಳೆಯಾ
ನಾ ವಿಚ್ಚೇದನ ನೀಡಿದ್ದು
ಅದು- ನನ್ನ ಬದುಕಿಗೆ..!

3.ಹಿರಿಯರು ತೆಪ್ಪಗಾದರೆ
ಕಿರಿಯರು
ಕೆಪ್ಪರಾಗುವುದರಲ್ಲಿ
ಆಶ್ಚರ್ಯವಿಲ್ಲ...!


4.ಮನದ ಮೂಲೆಯಲ್ಲಿ
ಹುಟ್ಟಿಕ್ಕೊಂಡ
ಪ್ರಶ್ನೆಗಳಿಗೆ ಉತ್ತರ
ನೀನೇ....!!

5.ಜೀವಕ್ಕೆ ಜೀವ
ಕೊಡುತ್ತೆನೆಂದಿದ್ದು
ನಿನಗಲ್ಲ ಗೆಳೆಯಾ
ನನ್ನ ಪ್ರೀತಿಗೆ..!


6.ಮುಚ್ಚಿಟ್ಟ ಹೃದಯದಲ್ಲಿ
ಬಿಚ್ಚಿ ಹೋದ ಕನಸುಗಳು
ರಾಡಿಯಾಗಿದೆ
ಕೂಡಿಡುವ ನಂಟಿನ ಗಂಟು
ನನ್ನಲ್ಲಿಲ್ಲ..
ನೀನಂತೂ ಬರುವುದಿಲ್ಲ
ಹೃದಯದ ಉಸಿರು ಬಿಗಿಯಾಗಿದೆ
ನಿಂತು ಹೋಗುವ ಭಯ ನನಗಾಗಿದೆ
ದಯಮಾಡಿ ನನ್ನ ಕನಸುಗಳ
ಕಟ್ಟಿಕೊಡು
ನಾನು ಬದುಕಬೇಕು
ನೀನಿಲ್ಲದೆಯೂ...!!


7.ಬದಲಾಯಿಸಿಕ್ಕೊಳ್ಳದ
ನಿನ್ನನ್ನು
ನೋಡನೋಡುತ್ತಲೇ
ನಾ
ಬದಲಾಗಿಬಿಟ್ಟೆ.....!!!