ಅಕ್ಟೋಬರ್ 30, 2012

ಹನಿ ಹನಿ ಇಬ್ಬನಿ ..

1. ಪ್ರತಿಯೊಂದಕ್ಕೂ
ಅಂತ್ಯವಿದೆಯಂತೆ
ನೋವುಗಳಿಗೂ
ಆ ತೆರದ್ದೊಂದು
ಇದ್ದೀತಾ?


2. ಮೌನ ಮಾತಾಗದ ಹೊರತು
ಕಂಬನಿಗಳ ತಡೆಯುವರಿಲ್ಲ
ಮಾತು ನೀನಾಗದ ಹೊರತು
ದುಮ್ಮಾನಕ್ಕೆ ಅಂತ್ಯವಿಲ್ಲ..


3.
ಮನದಲ್ಲಿ
ಕನಸ ಕಾಮನಬಿಲ್ಲು
ಹೃದಯದಲ್ಲಿ
ಪ್ರೀತಿಯ ಸೊಲ್ಲು..

4.
ಅಂಧಕಾರದ ನಡುವೆ
ಬಿಕ್ಕಳಿಸಿ ಕೂತಾಗ
ನೀ ಪೂರೈಸಿದ
ಈ ಬೆಳದಿಂಗಳೆಷ್ಟು ಹಿತ...!


5.
ಮಳೆಬಿಲ್ಲಿನಂತಹ ಭಾಂದವ್ಯಕ್ಕೆ
ಈ ಆರ್ಭಟದ
ಗುಡುಗು ಮಿಂಚುಗಳಿಗಿಂತ
ಮುಂಜಾವಿನ ತುಂತುರು ಹನಿಗಳೇ
ಸಾಕಿತ್ತು..

6.
ಬರಪೀಡಿತ ಪ್ರದೇಶಗಳಿಗೆ
ಸವಲತ್ತುಗಳು ಉಚಿತ
ಬರಪೀಡಿತ ಮನಸ್ಸುಗಳಿಗೆ...?


7. ಒಳಗೊಳಗೇ
 ಅದುಮಿಟ್ಟ ನೋವುಗಳು
 ಜ್ವಾಲಾಮುಖಿಯಂತೆ
ಸಿಡಿದು ಹೋಗಲು ತವಕಿಸುತ್ತಿರುತ್ತವೆ...


8. ಮೋಸಗಾತಿ ಎನಬೇಡ
ನಿನಗೆ ನಾ
ಮೋಸ ಮಾಡಲು ಸಾದ್ಯವಿಲ್ಲ
ಮಾಡಿದ್ದರೆ
ಅದು ನನಗೆ ನಾನೇ..!


9. ನಿನ್ನೊಳಗೆ ಬಂದು
ಈ ಪರಿ ಕಾಡಿದೆನೆಂದು
ಬೇಸರಿಸದಿರು ಗೆಳೆಯಾ
ಕಳೆದುಹೋಗಿರೋ ನನ್ನತನವ
ನಾ ಹುಡುಕುವುದು ನಿನ್ನಲ್ಲೇ..!

10. ನನ್ನಯ ಹೆಜ್ಜೆಗೆ
ಮುನ್ನುಡಿಯಾಗುವೆಯೆಂದು
ಬಂದವಳು
ಬರಿಯ ಬೆನ್ನುಡಿ ಬರೆದು
ಹೋಗಿಬಿಟ್ಟಳು..

ಅಕ್ಟೋಬರ್ 26, 2012

ನಾನ್ಯಾಕೆ ಹೀಗೆ?


ಗುಂಪು ಜನರ ಮದ್ಯೆ ಒಂಟಿಯಾಗಿರುತ್ತೇನೆ
ಮಾತು ಹರಟೆಗಳಲ್ಲಿ ಮೂಕಿಯಾಗುತ್ತೇನೆ
ನಿಂದನೆಗಳಿಗೆ ಕಿವುಡಿಯಂತಿರುತ್ತೇನೆ
ಒಡಲ ದುಃಖಕ್ಕೆ ಬಸಿರಾಗಿರುತ್ತೇನೆ

ನಾನ್ಯಾಕೆ ಹೀಗೆ?

ಎಲ್ಲವಿದ್ದೂ ಇಲ್ಲದಂತಿರುತ್ತೇನೆ
ಸುಖಗಳಲ್ಲೂ ಕಷ್ಟಗಳನ್ನೇ ಕಾಣುತ್ತಿರುತ್ತೇನೆ
ನಗು ಮರೆತಂತಿರುತ್ತೇನೆ 

ಹುಲ್ಲು ಕಡ್ಡಿಯ ಬೆಟ್ಟವೆಂದುಕೊಂಡಿರುತ್ತೇನೆ
ನಾನ್ಯಾಕೆ ಹೀಗೆ?

ತಹಬಂದಿಗೆ ಬರದ ಉಸಿರೊಳಗಿರುತ್ತೇನೆ
ನೆಮ್ಮದಿ ಸಿಗದ ಕಡಲಂತಿರುತ್ತೇನೆ
ಕಪ್ಪಿಟ್ಟಿರುವ ಆಗಸದಂತಿರುತ್ತೇನೆ
ಚಂದ್ರನಿರದ ರಾತ್ರಿಯಂತಿರುತ್ತೇನೆ

ಆದರೂ ಕೆಲವೊಮ್ಮೆ ,

ಹುಣ್ಣಿಮೆಯ ಕಡಲಂತೆ ಉಕ್ಕುತ್ತಿರುತ್ತೇನೆ
ವರುಣನ ನಿರೀಕ್ಷೆಯ ನವಿಲಂತೆ ಕುಣಿಯುತ್ತಿರುತ್ತೇನೆ
ಪಾದರಸದಂತೆ ಪುಟಿಯುತ್ತಿರುತ್ತೇನೆ
ಸ್ವರ್ಗದ ತುದಿಯಲ್ಲಿದ್ದಂತೆ ಬೀಗುತ್ತಿರುತ್ತೇನೆ..

ಒಮ್ಮೊಮ್ಮೆ ಹಾಗೆ...ಇನ್ನೊಮ್ಮೊಮ್ಮೆ  ಹೀಗೆ

ಕೊನೆಗೂ ತಿಳಿಯಲಿಲ್ಲ..
ನಾನ್ಯಾಕೆ ಹೀಗೆ?

ಅಕ್ಟೋಬರ್ 23, 2012

ಕುಂತಿಯರು..!

ವರ ಸಿಕ್ಕಿದ ಭ್ರಮೆಯಲ್ಲಿ 
ಜಗವ ಮರೆತವಳು 
ನಶೆಯ ಮತ್ತಲ್ಲಿ
ಹರೆಯದ ಕೊಳ ಈಜಿದವಳು 

ಅವನೋ ಕೊಡವಿಕೊಂಡು ಎದ್ದನು 
ಇವಳು ಎಡವಿ ಬಿದ್ದಳು 
ನಿಲ್ಲೆಂದರೆ ಅಂವ ಕೇಳ 
ಬಾರದಿರೆಂದರೆ ಬಸಿರು ಕೇಳ 

ಅವರವರಿಗೆ ಅವರವರ ಬದುಕು 
ಗಂಡಸೋ ಬದುಕಿ ಬಿಡುತ್ತಾನೆ 
ಹೆಂಗಸೂ ಬದುಕಿ ಬಿಡುತ್ತಾಳೆ 
ಬಲಿಯಾಗಿದ್ದು ಬಡಕೂಸು 
 
ಅನಾಥಾಶ್ರಮದ ಬಾಗಿಲಲ್ಲಿ 
ಕಸದ ತೊಟ್ಟಿಯಲ್ಲಿ 
ನಾಯಿ ನೊಣಗಳ ದಬ್ಬಾಳಿಕೆಯಲ್ಲಿ 
ಉಸಿರುಗಟ್ಟಿಸುವ ಯಾತನೆಯಲ್ಲಿ 
ಸಾವು ಬದುಕಿನ ಅನಿಶ್ಚಿತತೆಯಲ್ಲಿ 
ಅದರ ಜನನ 

ಜೀವ ಕೊಟ್ಟು 
ಜೀವನ ಕಸಿದುಕೊಂಡವರು..!
ಈ ಅಧುನಿಕ ಕುಂತಿಯರು..!ಅಕ್ಟೋಬರ್ 19, 2012

ಹನಿ ಹನಿ ಇಬ್ಬನಿ...

1. ನೀ ಮಾಡಿದ
ಗಾಯಕ್ಕೆ ಔಷಧಿ
ಯಾರೂ ನೀಡುತ್ತಿಲ್ಲ
ನೀನೇಯಾದರೂ ಬರುತ್ತಿಯಾ?
ಉರಿ ತಾಳಲಾಗುತ್ತಿಲ್ಲ..

2. ಉಕ್ಕಿ
ಬಿಕ್ಕುತಿಹ
ಎದೆಯ ದುಃಖಕ್ಕೆ
ನಿನ್ನ ಹೆಗಲಿತ್ತು..
 
3. ನಿನ್ನ ಮಾತಿನ
ಹುಚ್ಚು ಹೊಳೆಯಲ್ಲಿ
ನನ್ನ ಮೌನ
ಕೊಚ್ಚಿಹೋಯಿತು...!

4. ನಿನಗಿಂತಲೂ
ಹೆಚ್ಚು ಚಂದವಾಗಿ
ಕಾಣುವುದು-ಕಾಡುವುದು
ನೆನಪುಗಳೇ..!

5. ತಪ್ಪುಗಳೆಂದು
ಗೊತ್ತಿದ್ದೇ ಮಾಡುವ
ತಪ್ಪುಗಳು
ಮುಂದೊಂದು ದಿನ
ಒಪ್ಪುಗಳಾಗಿ ಬಿಡುತ್ತದೆ..!


6. ವ್ಯತ್ಯಾಸ ಇಷ್ಟೇ...!
ದುತ್ತನೆ ಎದುರಾಗಿ
ಸಿಗಿದ ನಿನ್ನ ನೆನಪುಗಳು
ಸಾಯಿಸಿತ್ತು
ಊರಿಂದ ಬರುವಾಗ
ಅಮ್ಮ ಕಟ್ಟಿ ಕೊಟ್ಟ ಕನಸುಗಳು
ಬದುಕಿಸಿತ್ತು..


7. ಚಿತ್ರ ವಿಚಿತ್ರವಾಗಿ
ದಿನ ರಾತ್ರಿ
ಬಿಡದೆ ಕಾಡೋ
ಕನಸುಗಳು - ಪ್ರೇತಾತ್ಮದಂತೆ !
ಅವುಗಳಿಗೆ ಮುಕ್ತಿ ಬೇಕು!


8. ಯಾರೋ ಹೇಳಿದರು
ನಾ ಗಟ್ಟಿಗಿತ್ತಿಯೆಂದು
ಅದಕ್ಕೆ
ನನ್ನೊಳಗಿನ ಪುಕ್ಕಲಿಯನ್ನು
ಆಗಾಗ ಒಳದಬ್ಬುತ್ತಲೇ
ಇರುತ್ತೇನೆ...!9. ನೀ ಬಂದು
ಬದುಕು ಪ್ರಕಾಶಮಾನವಾಗಿ
ಉರಿದಾಗಲೇ
ನನಗರಿವಾಗಬೇಕಿತ್ತು
ಇದು ಆರುವ ಹಣತೆ ಎಂದು..!10. ನೋವುಗಳು ಅರೆಬೆಂದು
ಯಾತನೆ ನೀಡುವುದಕ್ಕಿಂತ
ಸುಟ್ಟು ಕರಕಲಾಗಿ ಬಿಡಲಿ
ಅವಶೇಷವೂ ಉಳಿಯದಂತೆ.   
 

ಅಕ್ಟೋಬರ್ 17, 2012

ನಮ್ಮವರು..!

ನೋವುಗಳ ಬೆಂಕಿಯಲ್ಲಿ
ಒಡಲು ಉರಿಯುತ್ತಿರುವಾಗ
ತುಪ್ಪ ಸುರಿದವರು..


ಬಯಕೆಗಳ ಗೋರಿಯಲ್ಲಿ
ಬದುಕು ನರಳುವಾಗ
ಹನಿ ನೀರು ಬಿಡದವರು..


ಬೆಳಕ ದಾರಿಯ ಸರಿಸಿ
ಕಗ್ಗತ್ತಲ ಕೂಪಕ್ಕೆ

ತಳ್ಳಿಹೋದವರು..


ಮುಗ್ಗರಿಸಿ ಬಿದ್ದಾಗ
ಚೆಲ್ಲಿದ ಕನಸುಗಳ
ತುಳಿಯುತ್ತಾ ಸಾಗಿದವರು..


ಸೋಲಿನ ರಭಸದ ಛಡಿಯೆಟಿಗೆ
ಮೂಲೆ ಸೇರಿದಾಗ
ಮತ್ತೊಂದು ಪೆಟ್ಟು ನೀಡಿದವರು..


ದುಃಖದ ಬೇನೆಗೆ ಕುದಿಯುತ್ತಿದ್ದ
ನನ್ನೊಡಲ ರಕುತದಲ್ಲೇ
ತಮ್ಮ ದಾಹ ತೀರಿಸಿಕ್ಕೊಂಡವರು


ಇಂತಿಪ್ಪ ಇವರು - ನಮ್ಮವರು..!

ಸೋಲುಗಳ ಮೆಟ್ಟಿಲಲ್ಲಿ
ಗೆಲುವಿನ ಸೌಧ ಕಟ್ಟಿದಾಗ
ನಗೆಯ ಹೊತ್ತು ಬಂದವರು..!


-ಇವರು ನಮ್ಮವರು..!


ಅಕ್ಟೋಬರ್ 9, 2012

ಹನಿ ಹನಿ ಇಬ್ಬನಿ..

1. ಚಿಂತೆಯ ಕರಿಮೋಡ
ನನ್ನಯ ಚಂದ್ರಮನನ್ನು
ಮುತ್ತಿದಾಗ
ನನ್ನೀ ಬಾಳ ತುಂಬಾ
ಕಗ್ಗತ್ತಲೇ...


2. ದುಃಖದಲ್ಲೇ
ಬದುಕು ಸುಖವಾಗಿದೆ
ಎಂದುಕೊಂಡು
ಕಣ್ಣು ತುಂಬಿಕೊಳ್ಳುತ್ತೇನೆ..!


3. ಯಾರೋ ಅದೇನೋ
ಹೇಳಿದರೆಂದು
ಸಾಯುವುದಿದ್ದರೆ
ನಾ ಅದೆಷ್ಟು ಬಾರಿ
ಸಾಯಬೇಕಿತ್ತು....?!


4. ತಾರಕಕ್ಕೆರಿದ್ದ
ಹುಚ್ಚು ಮುನಿಸು
ನಿನ್ನ ಮುದ್ದಿನ ಮದ್ದಲ್ಲಿ
ಕಾಣೆಯಾಯಿತು...

  
5. ಜಾಣೆ-
ತಿರುವಿನ
ದಾರೀಲಿ
ಎಡವಿ
ಬೀಳುತ್ತಾಳೆ..!


6. ಬದುಕಿನ ಕೊನೆವರೆಗೂ
ಜೋತೆಯಾಗಿರುತ್ತೆನೆಂದವನು
ಮನೆಯ ಪಕ್ಕದ ತಿರುವಿನವರೆಗೆ
ಬರಲಾಗದೆ ಹೋದ..!


7. ಬವಣೆಗೆ ಬದುಕು ಸತ್ತಿದೆ
ಸತ್ತ ಬದುಕಿಗೂ
ಬದುಕುವ ಬಯಕೆಯಾಗಿದೆ
ಬಯಕೆಗೆ ಬದುಕಿಲ್ಲ
ಬದುಕು ಮತ್ತೆ ಸತ್ತಿದೆ...!!!!

  
8. ಎದೆಯ ಬಿರುಗಾಳಿ
ರಪ್ಪೆಂದು ನಿನ್ನೆದೆಗೆ
ರಾಚಿದಾಗ
ಎದೆಯೊಡ್ಡಿ
ನಿಂತಿದ್ದೆಯಲ್ಲಾ....!


9. ನಿನ್ನ
ಜಾಣ ಕಿವುಡುತನದ
ಮುಂದೆ, ನಾ
ಮೂಕಿಯಾಗಿರಬೇಕಿತ್ತು.

  
10. ಬಿತ್ತಿ ಬುಲೆ
ಕೈ ಪತ್ತುದುಂಡು
ನೀನ್ನೋ ಉಡಲ್ ದಿಂಜಿ

ಮೊಕೆದ ಲೆಕ್ಕೊನೆ
(ತುಳು ಭಾಷೆ)