ಅಕ್ಟೋಬರ್ 26, 2012

ನಾನ್ಯಾಕೆ ಹೀಗೆ?


ಗುಂಪು ಜನರ ಮದ್ಯೆ ಒಂಟಿಯಾಗಿರುತ್ತೇನೆ
ಮಾತು ಹರಟೆಗಳಲ್ಲಿ ಮೂಕಿಯಾಗುತ್ತೇನೆ
ನಿಂದನೆಗಳಿಗೆ ಕಿವುಡಿಯಂತಿರುತ್ತೇನೆ
ಒಡಲ ದುಃಖಕ್ಕೆ ಬಸಿರಾಗಿರುತ್ತೇನೆ

ನಾನ್ಯಾಕೆ ಹೀಗೆ?

ಎಲ್ಲವಿದ್ದೂ ಇಲ್ಲದಂತಿರುತ್ತೇನೆ
ಸುಖಗಳಲ್ಲೂ ಕಷ್ಟಗಳನ್ನೇ ಕಾಣುತ್ತಿರುತ್ತೇನೆ
ನಗು ಮರೆತಂತಿರುತ್ತೇನೆ 

ಹುಲ್ಲು ಕಡ್ಡಿಯ ಬೆಟ್ಟವೆಂದುಕೊಂಡಿರುತ್ತೇನೆ
ನಾನ್ಯಾಕೆ ಹೀಗೆ?

ತಹಬಂದಿಗೆ ಬರದ ಉಸಿರೊಳಗಿರುತ್ತೇನೆ
ನೆಮ್ಮದಿ ಸಿಗದ ಕಡಲಂತಿರುತ್ತೇನೆ
ಕಪ್ಪಿಟ್ಟಿರುವ ಆಗಸದಂತಿರುತ್ತೇನೆ
ಚಂದ್ರನಿರದ ರಾತ್ರಿಯಂತಿರುತ್ತೇನೆ

ಆದರೂ ಕೆಲವೊಮ್ಮೆ ,

ಹುಣ್ಣಿಮೆಯ ಕಡಲಂತೆ ಉಕ್ಕುತ್ತಿರುತ್ತೇನೆ
ವರುಣನ ನಿರೀಕ್ಷೆಯ ನವಿಲಂತೆ ಕುಣಿಯುತ್ತಿರುತ್ತೇನೆ
ಪಾದರಸದಂತೆ ಪುಟಿಯುತ್ತಿರುತ್ತೇನೆ
ಸ್ವರ್ಗದ ತುದಿಯಲ್ಲಿದ್ದಂತೆ ಬೀಗುತ್ತಿರುತ್ತೇನೆ..

ಒಮ್ಮೊಮ್ಮೆ ಹಾಗೆ...ಇನ್ನೊಮ್ಮೊಮ್ಮೆ  ಹೀಗೆ

ಕೊನೆಗೂ ತಿಳಿಯಲಿಲ್ಲ..
ನಾನ್ಯಾಕೆ ಹೀಗೆ?

16 ಕಾಮೆಂಟ್‌ಗಳು:

 1. ಆದಷ್ಟು ಬೇಗ ಈ ಭಾವದಿಂದ ಹೊರ ಬರಬೇಕು ಗೆಳತಿ. ಇಲ್ಲದಿದ್ದರೆ ಮನಸ್ಸಿನ ಗೂಡು ಕಾರ್ಗತ್ತಲಿನ ಗುಹೆಯಾದೀತು!!!!

  ಪ್ರತ್ಯುತ್ತರಅಳಿಸಿ
 2. ಸುಷ್ಮಾ,

  ಹರೆಯದ ತಲ್ಲಣ,ಭಾವೋದ್ವೇಗಗಳನ್ನು ಒಪ್ಪವಾಗಿ ಹಿಡಿದಿಟ್ಟಿದ್ದೀರಿ..ನಿರೂಪಿಸಿದ ಬಗೆ ಇಷ್ಟವಾಯ್ತು...

  ಬಹುಷಃ ಭಾವನೆಗಳಿಗೆ ತೀರಾ ಮಹತ್ವ ಕೊಡದೇ,ಅದೆಲ್ಲಾ ಸಹಜ ಎಂದು ನಡೆದರೆ,ಮನಸು ತಿಳಿಯಾದೀತು..

  ಇಷ್ಟವಾಯ್ತು ಸಾಲುಗಳು..ಬರೆಯುತ್ತಿರಿ..
  ನಮಸ್ತೆ..

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಚಿನ್ಮಯ್..
   ಕೆಲವೊಮ್ಮೆ ಪ್ರಾಕ್ಟಿಕಲ್ ಆಗಿ ಬದುಕುವುದು ತೀರ ಕಷ್ಟವಾಗಿಬಿಡುತ್ತದೆ ...

   ಅಳಿಸಿ
 3. ಸಂಯುಕ್ತ ಕರ್ನಾಟಕದಲ್ಲಿ ನಿಮ್ಮ ಕವನ ಪ್ರಕಟವಾಗಿದೆ. ತುಂಬಾ ಚೆನ್ನಾಗಿದೆ.
  ನಮಗೂ ಭಾವನೆಗಳು ಇರುತ್ತವೆ ರೀ... ಆದರೆ ಬರೆ ಯೋಕೆ timeu, capacity ಎರಡೂ ಇಲ್ಲ.
  ನಮ್ಮಂಥವರದು ಒಂದು positive point ಏನಂದ್ರೆ ಚೆನ್ನಾಗಿ ಬರೆಯೋವರನ್ನ ಹುರಿದುಂಬಿಸೋದು...
  ಚೆನ್ನಾಗಿ ಬರೀತೀರಾ go ahead ಲೇಖಕರೊಂದಿಗೆ ಓದುಗರು ಎಂದಿಗೂ ಇರುತ್ತಾರೆ

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಅಭಾರಿ.....
   ಧನ್ಯವಾದಗಳು...ಪ್ರೋತ್ಸಾಹ ಹೀಗೆ ಇರಲಿ...

   ಅಳಿಸಿ
 4. ಚೆನ್ನಾಗಿದೆ... ನಿಮ್ಮನ್ನು ಅರ್ಥೈಸಿಕೊಳ್ಳಲು ನೀವೇ ಯೋಗ್ಯ ವ್ಯಕ್ತಿ :)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಜ ನಮ್ಮನ್ನು ಅರ್ಥ ಮಾಡಿಕ್ಕೊಳ್ಳಲು ನಮಗಿಂತ ಯೋಗ್ಯರಿಲ್ಲ..
   ಧನ್ಯವಾದಗಳು ಸರ್....

   ಅಳಿಸಿ
 5. ಜೈಹೋ ಸುಶೀ... ಇದೆಂದಿಗೂ ಉತ್ತರ ಸಿಗದ ಪ್ಶ್ನೆ... ನನ್ನನ್ನು ಅನೇಕ ಬಾರಿ ಕಾಡಿದ್ದಿದೆ... ಉತ್ತರ ಮಾತ್ರ ಸಿಕ್ಕಿಲ್ಲ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಕೆಲವು ಪ್ರಶ್ನೆಗಳು ಹಾಗೆಯೇ ಶಶೀ.. ಉತ್ತರ ಸಿಕ್ಕುವುದಿಲ್ಲಾ..ದಕ್ಕುವುದೂ ಇಲ್ಲಾ..
   ಧನ್ಯವಾದಗಳು ಪ್ರತಿಕ್ರಿಯೆಗೆ..

   ಅಳಿಸಿ
 6. "ಈ ಚೆಂಡಿನ ಆಟ .. ನನ್ನೆದೆಯಿಂದ ನಿನ್ನೆದೆಗೆ" ಎನ್ನುವ ಹಾಡಿನಂತೆ ನಮ್ಮ ಭಾವ ಕೂಡ ಹೋರಾಡುತಿರುತ್ತದೆ, ಸರಿ ತಪ್ಪು ಎನ್ನುವ ಅಂಗಳದ ಅಂಚಿನಲ್ಲಿ. ಸೂಪರ್ ಇದೆ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸರಿ ತಪ್ಪಿನ ಅಂಗಳದ ಅಂಚಿನಲ್ಲಿ ಗೊಂದಲಗಳೇ ಅಣ್ಣಯ್ಯ .... ಧನ್ಯವಾದಗಳು...

   ಅಳಿಸಿ