ಅಕ್ಟೋಬರ್ 19, 2012

ಹನಿ ಹನಿ ಇಬ್ಬನಿ...

1. ನೀ ಮಾಡಿದ
ಗಾಯಕ್ಕೆ ಔಷಧಿ
ಯಾರೂ ನೀಡುತ್ತಿಲ್ಲ
ನೀನೇಯಾದರೂ ಬರುತ್ತಿಯಾ?
ಉರಿ ತಾಳಲಾಗುತ್ತಿಲ್ಲ..

2. ಉಕ್ಕಿ
ಬಿಕ್ಕುತಿಹ
ಎದೆಯ ದುಃಖಕ್ಕೆ
ನಿನ್ನ ಹೆಗಲಿತ್ತು..
 
3. ನಿನ್ನ ಮಾತಿನ
ಹುಚ್ಚು ಹೊಳೆಯಲ್ಲಿ
ನನ್ನ ಮೌನ
ಕೊಚ್ಚಿಹೋಯಿತು...!

4. ನಿನಗಿಂತಲೂ
ಹೆಚ್ಚು ಚಂದವಾಗಿ
ಕಾಣುವುದು-ಕಾಡುವುದು
ನೆನಪುಗಳೇ..!

5. ತಪ್ಪುಗಳೆಂದು
ಗೊತ್ತಿದ್ದೇ ಮಾಡುವ
ತಪ್ಪುಗಳು
ಮುಂದೊಂದು ದಿನ
ಒಪ್ಪುಗಳಾಗಿ ಬಿಡುತ್ತದೆ..!


6. ವ್ಯತ್ಯಾಸ ಇಷ್ಟೇ...!
ದುತ್ತನೆ ಎದುರಾಗಿ
ಸಿಗಿದ ನಿನ್ನ ನೆನಪುಗಳು
ಸಾಯಿಸಿತ್ತು
ಊರಿಂದ ಬರುವಾಗ
ಅಮ್ಮ ಕಟ್ಟಿ ಕೊಟ್ಟ ಕನಸುಗಳು
ಬದುಕಿಸಿತ್ತು..


7. ಚಿತ್ರ ವಿಚಿತ್ರವಾಗಿ
ದಿನ ರಾತ್ರಿ
ಬಿಡದೆ ಕಾಡೋ
ಕನಸುಗಳು - ಪ್ರೇತಾತ್ಮದಂತೆ !
ಅವುಗಳಿಗೆ ಮುಕ್ತಿ ಬೇಕು!


8. ಯಾರೋ ಹೇಳಿದರು
ನಾ ಗಟ್ಟಿಗಿತ್ತಿಯೆಂದು
ಅದಕ್ಕೆ
ನನ್ನೊಳಗಿನ ಪುಕ್ಕಲಿಯನ್ನು
ಆಗಾಗ ಒಳದಬ್ಬುತ್ತಲೇ
ಇರುತ್ತೇನೆ...!9. ನೀ ಬಂದು
ಬದುಕು ಪ್ರಕಾಶಮಾನವಾಗಿ
ಉರಿದಾಗಲೇ
ನನಗರಿವಾಗಬೇಕಿತ್ತು
ಇದು ಆರುವ ಹಣತೆ ಎಂದು..!10. ನೋವುಗಳು ಅರೆಬೆಂದು
ಯಾತನೆ ನೀಡುವುದಕ್ಕಿಂತ
ಸುಟ್ಟು ಕರಕಲಾಗಿ ಬಿಡಲಿ
ಅವಶೇಷವೂ ಉಳಿಯದಂತೆ.   
 

6 ಕಾಮೆಂಟ್‌ಗಳು:

 1. ಸೀರಿಯಸ್ ಆಗಿ ಬರೆಯಬಲ್ಲ ಕವಿಯತ್ರಿ ನೀವು.

  ಎಲ್ಲ ಹನಿಗಳೂ ನೆಚ್ಚಿಗೆಯಾದವು.

  ಪ್ರತ್ಯುತ್ತರಅಳಿಸಿ
 2. ಹನಿಗಳು ಒ೦ದಕ್ಕಿ೦ತ ಒ೦ದು ಚೆನ್ನಾಗಿವೆ. ಮನದ ಆಳದಿ೦ದ ಮೂಡಿ ಬ೦ದ೦ತಿವೆ. ಅಭಿನ೦ದನೆಗಳು ಸುಷ್ಮಾ:)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಮೌನರಾಗಕ್ಕೆ ಸ್ವಾಗತ ಮೇಡಂ..
   ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು....

   ಅಳಿಸಿ
 3. ಹನಿಗಳು ಮಂಜಿನ ಹನಿಗಳಂತೆ ಕೆಲವೊಮ್ಮೆ
  ಕಚಗುಳಿಯಿಟ್ಟರೆ .. ಇನ್ನೊಮ್ಮೆ ನಡುಗಿಸುತ್ತದೆ
  ನಿಮ್ಮ ಪ್ರತಿಭೆ ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಈ ರೀತಿಯ ಪ್ರೀತಿಯ ಪ್ರತಿಕ್ರಿಯೆಯೇ ನನಗೆ ಶಕ್ತಿ.. ಧನ್ಯವಾದಗಳು..

   ಅಳಿಸಿ