ಡಿಸೆಂಬರ್ 17, 2012

ನೀ ಬಿಟ್ಟು ಹೋಗಿದ್ದು..!

ಬಿಗಿದು ಹಿಡಿದ ಶರ್ಟಿನ ಕಾಲರು
ಬದುಕಿನ ಗುಡುಗಿಗೆ ಬೆದರಿ ನಿನ್ನೆದೆಗಿಟ್ಟ ಮುಖ
ಕಿವಿ ನಿಮಿರಿಸಿದ ನಿನ್ನೆದೆ ಬಡಿತದ ಸದ್ದು
ಅರೆಗಳಿಗೆ ತಲ್ಲಣಿಸಿದ ಬಿಸಿಯುಸಿರು

ಕಿರುಬೆರಳಿಡಿದು ಪಯಣಿಸಿದ ಆ ತೀರ
ಪಿಸುಮಾತಲ್ಲಿ ನಾಚಿದ ಕೆನ್ನೆಗೆಂಪು
ಮರಳ ಮೇಲೆ ಗೀಚಿದ ಜೋಡಿಹೆಸರು
ಕುರುಬಿ ಮುಳುಗಿದ ಆ ಸೂರ್ಯ

ನೀನೇ ಒತ್ತಿದ ಹಣೆಯ ಕುಂಕುಮ
ಸ್ಪರ್ಶಕ್ಕೆ ಬೆದರಿ ಹಿಂದಡಿಯಿಟ್ಟ ಕಾಲ್ಬೆರಳು
ಕಾಲುಂಗುರ ತೊಡಿಸಿದ ನಿನ್ನೊಲುಮೆ
ಏಳು ಹೆಜ್ಜೆಗೆ ಜೊತೆಯಾದ ಗೆಜ್ಜೆ

ನಿನ್ನೊಂದಿಗೆ ಕೊನೆಯಾದ ಕನಸುಗಳು
ಯಾರೋ ನೀನಿಲ್ಲವೆಂದು ನಿನ್ನದೆನ್ನುವ
ಎಲ್ಲವನ್ನು ನನ್ನಿಂದ ಕಿತ್ತಿದ್ದು
ಚಿತೆಯ ಉರಿಯಲ್ಲಿ ಬೆಂದಿದ್ದು

ಅರೆಬೆಂದ ಕನಸುಗಳು
ಹಗಲಿರುಳೆನ್ನದೆ ನನ್ನ ಕಾಡಿದ್ದು
ನನ್ನಪಾಲಿಗೆ ನೀ ಬಿಟ್ಟು ಹೋಗಿದ್ದು
ಮರೆತೆನೆಂದರೆ ಮರೆಯಲಾಗದ
ಈ ನೆನಪುಗಳನ್ನು..!
ಡಿಸೆಂಬರ್ 7, 2012

ಹನಿ ಹನಿ ಇಬ್ಬನಿ..

1. ಅಂದು
ಗೆಜ್ಜೆ ಸದ್ದಿನ ದಾರೀಲಿ
ಹೆಜ್ಜೆ ಇಟ್ಟು ಬಂದವನು
ಇಂದು
ಸಪ್ತಪದಿಯ ಹೆಜ್ಜೆಗೆ 
ಗೆಜ್ಜೆಯ ಸದ್ದಾದ...! 


 2. ಅಕ್ಷರಗಳನ್ನೆಲ್ಲ
ಹನಿಯಾಗಿಸುತ್ತಿದ್ದವಳು
ಇಂದೇಕೋ
ತನ್ನ ಕಣ್ಣ ಹನಿಗಳ ಮುಂದೆ
ಮೌನಿಯಾಗಿದ್ದಾಳೆ.

3. ಕೊತಕೊತ ಕುದಿವ
ಒಡಲ ನೆತ್ತರಿಗೆ
ಒಂದು ತೊಟ್ಟು
ನಿನ್ನ ಪ್ರೇಮ ಜಲ ನೀಡು
ಇಂಗಿ ಬಿಡಲಿ
ಅದರ ಪ್ರೇಮದಾಹ..!


4. ಮನಸು ಮತ್ತು ಕನಸು
ಎರಡು ಒಂದೇ ಎಂಬ
ನನ್ನ ಮೊಂಡು ವಾದಕ್ಕೆ
ಕಾರಣ

ಎರಡರಲ್ಲೂ ನೀನೇ ಇರುವುದು..


5. ಚಳಿಯೆಂದು
ಮುದುಡಬೇಡ
ನನ್ನ ಕನಸುಗಳ
ಸುಟ್ಟದರೂ ನೀ
ಬೆಚ್ಚಗಿರು...!

6. ಸಂತಸದ ಚಿಲುಮೆಗೆ
ಈ ಮಳೆಯೇ ಆಗಬೇಕೆಂದೇನಿಲ್ಲ
ನನಗೆ ನೀನೆಯಾದರೂ

ಸಾಕಾಗುತ್ತದೆ..

7. ಒಡಲ ಪ್ರೀತಿಯು
ಹೊರಬಾರದಂತೆ
ಅದುಮದುಮಿ
ಇಟ್ಟುಕೊಂಡೆ
ಅದು ಉಸಿರುಗಟ್ಟಿ
ಸತ್ತುಹೋಯಿತು...!


8. ನೀ ಸಿಕ್ಕಿದಿಯೆಂಬ ಭ್ರಮೆಯಲ್ಲಿ
ಮನಸ್ಸು ಗಾಳಿಪಟವಾಗಿತ್ತು
ಭ್ರಮೆಯೆಂದು ತಿಳಿದಾಗ
ಪಟದ ಸೂತ್ರ ಹರಿದಿತ್ತು.


9. ನನ್ನ ಭಾವಗಳವು
ಒಳದಬ್ಬಿ ಪಟ್ಟಾಗಿ
ಕೂರಿಸಿದ್ದೇನೆ
ಅಡ್ಡಿ ಮಾಡಬೇಡ
ನಿನ್ನ ಸುಟ್ಟಾವು..!

10. ಕನಸುಗಳು ಆವಿಯಾಗಿ
ಬಾನಂಗಳಲಿ ಹೆಪ್ಪುಗಟ್ಟಿತ್ತು
ಕೈಗೆಟುಕದಂತೆ
ನೀ ಬಂದೆ
ನನ್ನೊಳಗೆ ಈಗ
ಕರಗಿದ ಮೋಡಗಳ ಸೋನೆಮಳೆ.