ಡಿಸೆಂಬರ್ 17, 2012

ನೀ ಬಿಟ್ಟು ಹೋಗಿದ್ದು..!

ಬಿಗಿದು ಹಿಡಿದ ಶರ್ಟಿನ ಕಾಲರು
ಬದುಕಿನ ಗುಡುಗಿಗೆ ಬೆದರಿ ನಿನ್ನೆದೆಗಿಟ್ಟ ಮುಖ
ಕಿವಿ ನಿಮಿರಿಸಿದ ನಿನ್ನೆದೆ ಬಡಿತದ ಸದ್ದು
ಅರೆಗಳಿಗೆ ತಲ್ಲಣಿಸಿದ ಬಿಸಿಯುಸಿರು

ಕಿರುಬೆರಳಿಡಿದು ಪಯಣಿಸಿದ ಆ ತೀರ
ಪಿಸುಮಾತಲ್ಲಿ ನಾಚಿದ ಕೆನ್ನೆಗೆಂಪು
ಮರಳ ಮೇಲೆ ಗೀಚಿದ ಜೋಡಿಹೆಸರು
ಕುರುಬಿ ಮುಳುಗಿದ ಆ ಸೂರ್ಯ

ನೀನೇ ಒತ್ತಿದ ಹಣೆಯ ಕುಂಕುಮ
ಸ್ಪರ್ಶಕ್ಕೆ ಬೆದರಿ ಹಿಂದಡಿಯಿಟ್ಟ ಕಾಲ್ಬೆರಳು
ಕಾಲುಂಗುರ ತೊಡಿಸಿದ ನಿನ್ನೊಲುಮೆ
ಏಳು ಹೆಜ್ಜೆಗೆ ಜೊತೆಯಾದ ಗೆಜ್ಜೆ

ನಿನ್ನೊಂದಿಗೆ ಕೊನೆಯಾದ ಕನಸುಗಳು
ಯಾರೋ ನೀನಿಲ್ಲವೆಂದು ನಿನ್ನದೆನ್ನುವ
ಎಲ್ಲವನ್ನು ನನ್ನಿಂದ ಕಿತ್ತಿದ್ದು
ಚಿತೆಯ ಉರಿಯಲ್ಲಿ ಬೆಂದಿದ್ದು

ಅರೆಬೆಂದ ಕನಸುಗಳು
ಹಗಲಿರುಳೆನ್ನದೆ ನನ್ನ ಕಾಡಿದ್ದು
ನನ್ನಪಾಲಿಗೆ ನೀ ಬಿಟ್ಟು ಹೋಗಿದ್ದು
ಮರೆತೆನೆಂದರೆ ಮರೆಯಲಾಗದ
ಈ ನೆನಪುಗಳನ್ನು..!
18 ಕಾಮೆಂಟ್‌ಗಳು:

 1. ಜೇನುನೊಣದಂತೆ ಊರೆಲ್ಲ ಅಲೆದು ಹೂವಿನ ಪರಾಗವನ್ನು ಕುಡಿದು ಕಟ್ಟಿ ಮಾಡಿದ ಜೇನುಗೂಡಿನಂತೆ..ಬಾಳಿನ ಸಂಗತಿಗಳೆಲ್ಲ ಬದುಕಿನ ಒಲೆಗೆ ಉರುವಲಾಗಿ ಬೆಳಕು, ಹುಮ್ಮಸ್ಸು ನೀಡುತ್ತ ಒಂದು ಸುಂದರ ಬದುಕನ್ನು ಕಟ್ಟಿಕೊಂಡಾಗ ಧುತ್ ಎಂದು ಎರಗುವ ಯಾತನಮಯ ಅಗಲಿಕೆ ಜೀವವನ್ನು ಹಿಂಡಿ ಬಿಡುತ್ತದೆ..ಆ ಹಿಂಡುವಿಕೆಯಿಂದ ಸುರಿಯುವ ನೆನಪಿನ ಹನಿಗಳು ಬದುಕಿನ ಪುಟಗಳನ್ನೂ ಮತ್ತೆ ತಿರುವಿ ಹಾಕುತ್ತದೆ..ಈ ಸಾಲುಗಳು ನಿಮ್ಮ ಕವನವನ್ನು ಓದಿದಾಗ ತುಂಬಾ ಕಾಡಿತು...ಪ್ರೀತಿ, ಪ್ರೇಮ, ಪ್ರಣಯ ಎಲ್ಲವನ್ನು ಸೊಗಸಾಗಿ ಬಿಂಬಿಸಿರುವ ನಿಮ್ಮ ಕವನಕ್ಕೆ ನನ್ನ ಅಭಿನಂದನೆಗಳು..ಹಾಗು ನಮನಗಳು ಪಿ.ಎಸ್....

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಪ್ರೀತಿ ಪಾತ್ರರ ಅಗಲಿಕೆಯ ನೋವು ಯಾತನಮಯ.
   ಅದನ್ನ ತಮ್ಮ ತಂದೆಯವರ ಅಗಲಿಕೆಯ ನೋವನ್ನು ನಿಮ್ಮ ಅಕ್ಷರಗಳಲ್ಲಿ ಪ್ರತ್ಯಕ್ಷವಾಗಿ ಕಂಡಿದ್ದೇವೆ.
   ನಿಮ್ಮ ತುಂಬು ಮನದ ಮಾತುಗಳಿಗೆ ನಾನು ಅಭಾರಿ ಅಣ್ಣಯ್ಯ.. ಧನ್ಯವಾದಗಳು..

   ಅಳಿಸಿ
 2. ಅಬ್ಬಾ ಅದೆಷ್ಟು ನೆನಪುಗಳು ... ಇಂತಹ ನೆನಪುಗಳಲ್ಲಿ ಬದುಕುವ ಜೀವನವೆಷ್ಟು ಮಧುರ ...? ಪದಪದಗಳಲಿ ನೆನಪಿನ ತೋರಣ ... ಇಷ್ಟವಾಯ್ತು ಸುಷ್ಮಾ ..

  ಹುಸೇನ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಬರಿಯ ನೆನಪುಗಳೊಂದಿಗೆ ಬದುಕು ಚೆನ್ನಾಗಿರುವುದೆಂಬ ಭ್ರಮೆಯಲ್ಲಿರಬಹುದು ಅಷ್ಟೇ ಹುಸೇನ್ ಸರ್.. ಮಧುರತೆ ಇದ್ದೀತೆ?!
   ಧನ್ಯವಾದಗಳು ಸರ್...

   ಅಳಿಸಿ
 3. ಭಾವ ಮತ್ತು ನೆನಪುಗಳನ್ನು ಹಿಡಿದಿಟ್ಟ ಪರಿ ಸೊಗಸಾಗಿದೆ....ಕೆಲವು ನೆನಪುಗಳೇ ಹಾಗೆ ಮರೆಯಲು ಸಾಧ್ಯವಿಲ್ಲ.. ಅನುಭವಿಸಿ ಬರೆದಷ್ಟು ಚೆನ್ನಾಗಿದೆ ಈ ನಿಮ್ಮ ಕವಿತೆ..

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಕಾಮೆಂಟ್ ಗಳು ಸ್ಫೂರ್ತಿ.. ಧನ್ಯವಾದಗಳು ಸರ್... :)
   ತಪ್ಪುಗಳಿದ್ದರೂ ತಿಳಿಸಿ..

   ಅಳಿಸಿ
 4. ಸುಂದರವಾದ ನಿರೂಪಣೆ ಸುಷ್ಮಾ..
  ಮರೆತೂ ನೆನಪಾಗುವ ನೆನಪುಗಳು ಖಂಡಿತ ಕಾಡುತ್ತವೆ...
  ಮತ್ತೊಂದು ಭಾವಪೂರ್ಣ ಕವಿತೆ..ನನಗಂತೂ ಇಷ್ಟವಾಯ್ತು...ಬರೆಯುತ್ತಿರು...ಓದುತ್ತಿರುತ್ತೇವೆ...

  ಹಾಂ ಅರಿ ಅಂದರೆ=ಬಂಡೆ ತಾನೆ??..
  ಮತ್ತೆ "ಕುರುಬಿ" ಪದದ ಅರ್ಥ ಸಿಗಲಿಲ್ಲ...

  ನಮಸ್ತೆ ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅರಿ ಅಂದರೆ ಬಂಡೆ ಅನ್ನುವ ಅರ್ಥ ಬರುತ್ತದೆಯೇ?
   ನಂಗೆ ತಿಳಿಯದು...
   ಅರಿ ಎಂದರೆ ನನಗೆ ತಿಳಿದಿರುವಂತೆ ಶತ್ರು ಅಥವಾ ತಿಳಿಯುವುದು (ಅರಿಯುವುದು ಎನ್ನುತ್ತಾರಲ್ಲ ಹಾಗೆ) ಅನ್ನುವ ಅರ್ಥ ಬರುತ್ತದೆ..
   ಇನ್ನೊಂದು ಕುರುಬಿ ಎಂದರೆ ಮತ್ಸರಿಸುವುದು. ಕುರುಬುವುದು ಅನ್ನುವ ಪದ ಬಳಕೆ ನಿಮಗೆ ತಿಳಿದಿರಬಹುದು..

   ಧನ್ಯವಾದಗಳು ಚಿನ್ಮಯ್.. ಹೀಗೆ ಬರುತ್ತಿರು...

   ಅಳಿಸಿ
 5. ಸೊಗಸಾಗಿದೆರೀ ಕವಿತೆ..ನೆನಪು ಸಾಯಬಾರದು ನೋಡರಿ ಇಲ್ಲಾಂದ್ರೆ ಇಂಥಾ ಕವಿತಾ
  ಹೆಂಗ ಹುಟ್ಟಲಿಕ್ಕೆ ಸಾಧ್ಯ

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನೆನಪುಗಳು ಸಾಯಲ್ವಂತೆ..ಕೆಲವರಿಗೆ ಬಿಡದೆ ಕಾಡುವತ್ತವಂತೆ...(ಕೇಳ್ಪಟ್ಟಿದ್ದೇನೆ )
   ಧನ್ಯವಾದಗಳು ಸರ್... :) :)

   ಅಳಿಸಿ
 6. ವಿಷಾದ ಕಾವ್ಯದ ವಸ್ತುವಾಗಬಾರದು ಗೆಳತಿ. ನೀವು ಚಿಕ್ಕವರು ಇನ್ನೂ ಬದುಕಿನ ಪುಟಗಳ ಬಿಡಿಸಿ ಸೋಜಿಗದಿಂದ ಓದ ಬೇಕಾದವರು. ನಿಮ್ಮ ಕಾವ್ಯದಲ್ಲಿ ಸಂತಸ ಮಾತ್ರ ಚಿಲುಮೆಯಾಗಿರಬೇಕೆ. ಇದು ನನ್ನ ಆಶಯ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಇದನ್ನು ಬರೆಯಲು ಆರಂಭಿದಾಗ ಇದಕ್ಕೆ ಈ ರೀತಿಯ ಅಂತ್ಯ ಕೊಡುತ್ತೇನೆಂದು ನಾನೂ ಭಾವಿಸಿರಲಿಲ್ಲ ಸರ್..
   ಅದೇನೋ ವಿಷಾದಗಳು ಬಹುವಾಗಿ ನನ್ನ ಅರಿವಿಗೆ ಬಾರದಂತೆಯೇ(?!) ನನ್ನ ಸಾಲುಗಳಲ್ಲಿ ಕುಳಿತು ಬಿಡುತ್ತವೆ..
   ನಿಮ್ಮ ಆಶಯ, ಸಲಹೆಗಳು ನನಗೆ ದಾರಿದೀಪ ಸರ್..
   ನೀವು ಹೇಳಿದ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ... :)
   ಧನ್ಯವಾದಗಳು..

   ಅಳಿಸಿ
 7. ಕವನ ಓದಿದಾಗ ನನಗೆ ನೆನಪಾಗಿದ್ದು ನನ್ನೊಬ್ಬಳು ಅಕ್ಕ....ಅವರನ್ನೇ ಉದ್ದೇಶಿಸಿ ಬರೆದಂತೆ ಇತ್ತು....ನಿಮ್ಮೆಲ್ಲಾ ಸಾಲುಗಳು ಅವರನ್ನು ಅವರ ಮನಸ್ಸಿನ ಮಾತುಗಳಂತೆ ಇದ್ದವು.....ಕವನ ಸುಂದರವಾಗಿದೆ......ಹೌದು....

  ಬದರೀ ಸರ್ ಹೇಳಿದಂತೆ ಕಿರಿಯರಾದ ನಿಮ್ಮ ಬರಹಗಳಲ್ಲಿ ಆಶಾ ವಾದವಿರಲಿ.....

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾಗಳು ಸರ್..
   ಮುಂದೆ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ..

   ಅಳಿಸಿ