ಜುಲೈ 24, 2013

ಹನಿ ಹನಿ ಇಬ್ಬನಿ..

1.ಅವಮಾನ ನಿಂದನೆಗಳಿಗೆ 
ನನ್ನ ಒಡಲಿದು ಜಗ್ಗುವುದಿಲ್ಲ 
ಬಂಡೆಯಿದು
ತನ್ನೊಳಗೆ ಎಲ್ಲಾ ಮುಚ್ಚಿಟ್ಟು 
ಕಠಿಣವಾಗಿದೆ.. !

2.ಬದುಕ ಕತ್ತಲೆಯಲ್ಲಿ 
ನೆರಳೂ ಜೊತೆಯಿರೋಲ್ಲ 
ಎನ್ನುತ್ತಿದ್ದರು 
ನಾ ಇರುತ್ತದೆನ್ನುತ್ತಿದ್ದೆ  
ಈಗ ಅಂವ ನನ್ನ ಜೊತೆಯಿಲ್ಲ . 
ಹಳೆ ಮಾತಿಗೆ
ನಾನೂ ಜೋತುಬಿದ್ದಿದ್ದೇನೆ. 

3.ಹನಿ ಕಡಿಯದಂತೆ 
ಹನಿಯುತ್ತಿದ್ದ ಮಳೆಯಡಿಯಲ್ಲಿ 
ಬಿಕ್ಕುತ್ತಾ ಕೂತಿದ್ದವಳ 
ಕಂಗಳಲ್ಲೂ ಹನಿಗಳಿದ್ದವು. 

4.ಗಂಡ ಚುಚ್ಚಿ ಚುಚ್ಚಿ ಕೊಂದ 
ಅವಳ ಹೃದಯದ 
ಸಾವಿರ ತುಣುಕುಗಳಲ್ಲಿ 
ಅವನ ಗೆಳೆಯನಿದ್ದ!

5.ಪ್ರೀತಿಯಿಲ್ಲದೆ ಬಾಳಿಲ್ಲ 
ಅಂದವಳ 
ಉಸಿರು ಬಿಗಿದ್ದಿದ್ದು 
ಹಸಿವು..!

6.ಬೆಚ್ಚಿ ಬೀಳಿಸುವ 
ಇರುಳ ಕನಸಿನ 
ತೆಕ್ಕೆಯಲ್ಲಿ ನಾನಿದ್ದಾಗ 
ಅಮ್ಮನೆಂಬ ಅವಳು 
ಗಮ್ಯದ ಕನಸ ಬುತ್ತಿ 
ಕಟ್ಟುವುದ ಹೇಳಿ ಕೊಟ್ಟಳು.

7. ವ್ಯರ್ಥ ಪ್ರಯತ್ನವೆಂದರೆ 
ನನ್ನತನವ ಸುಲಿದು 
ನಿನ್ನತನವ ಹೊಲಿದು 
ನಾನು ನೀನೇ ಆಗಿ ಬಿಡಲು 
ಹವಣಿಸುವುದು. 

8.ನನ್ನವ ನನ್ನ ನೆನಪಲ್ಲ 
ಆದರೂ 
ಅಡಿಗಡಿಗೆ 
ನೆನಪಾಗುತ್ತಿದ್ದನಲ್ಲ..?!


9. ನಿನ್ನೆಲ್ಲಾ ಅಕ್ಷರಗಳಲ್ಲಿ 
ನನ್ನನ್ನು ನಾನು ಹುಡುಕಿ ಸೋಲುತ್ತೇನೆ 
ಸೋತು,
ನಿನ್ನ ಕಂಗಳ ದಿಟ್ಟಿಸಿ ಗೆಲ್ಲುತ್ತೇನೆ 
ಯಾಕೆಂದರೆ ಅಲ್ಲಿ ನಾನಿರುತ್ತೇನೆ..!


10. ಬಿಂದಿಯಿಲ್ಲದ
ಬೋಳು ಹಣೆಯೆಂದರೆ
ನನ್ನವನಿಗೆ ಕೆಂಡದಂಥ ಕೋಪ
ನನ್ನಲ್ಲಿ ತಾನು ಸದಾ
ಮಿನುಗಬೇಕಂತೆ ಅವನಿಗೆ. ಜೂನ್ 13, 2013

ತಲ್ಲೀನೆ..

ನಾನು ತಲ್ಲೀನೆ
ಬದುಕ ಮಣಿಹಾರ ಪೋಣಿಸುವ ದಾರಿಯಲ್ಲಿ
ಅವರಿವರ ಭಾವಗಳ ಬಣ್ಣ ಬಣ್ಣದ ಮಣಿಗಳ ಜೋಡಿಸುವಲ್ಲಿ
ಸಾವುನೋವುಗಳ ಸಾಲು ಸಾಲೇ ಇಂಚಿಂಚು ಸರಿಸುವಲ್ಲಿ
ಅವಮಾನದೆದೆಗೆ ರತ್ನದ ದೊಡ್ಡ ಪದಕ ಅಂಟಿಸಿ ಮುಚ್ಚಿಸುವಲ್ಲಿ
ಪರಿಪೂರ್ಣ ಮಣಿಹಾರದ ಕನಸಲ್ಲಿ -ನಾನು ತಲ್ಲೀನೆ..!!

ನಾನು ತಲ್ಲೀನೆ
ಅಂಟಿಕೊಂಡ ಗಂಟುಗಳ ಕೊಡವಿಕೊಳ್ಳುವಲ್ಲಿ
ಕಳಚಿಬಿದ್ದ ವಿಶ್ವಾಸದುಡುಪ ತೊಟ್ಟುಕೊಳ್ಳುವಲ್ಲಿ
ಹಸಿದ ತೋಳದ ತೋಳಿಂದ ಬಿಡಿಸಿಕೊಳ್ಳುವಲ್ಲಿ
ಪಸೆ ಆರಿದ ಗಂಟಲಿಗೆ ಹನಿ ನೀರ ಹುಡುಕುವಲ್ಲಿ

ನಾನು ತಲ್ಲೀನೆ
ಬಾಲ್ಯದ ಮಣ್ಣಾಟದ ಕೊಳೆ ತಿಕ್ಕುವಲ್ಲಿ
ಇರುಳು ಸುರಿದ ಭಯಾನಕ ಕನಸುಗಳ ನೆನೆಕೆಯಲ್ಲಿ
ಬಿಡದಂತೆ ಕಾಡುವ ಬದುಕ ಕಾನನದ ಘೋರತೆಯಲ್ಲಿ
ಒಡೆದ ಮಡಕೆಯಲ್ಲಿ ಕಳೆದ ನೆಮ್ಮದಿಯ ಹಪಾಹಪಿಯಲ್ಲಿ
ಮರೆಯಬೇಕಾದ ನೆನಪುಗಳಲ್ಲಿ -ನಾನು ತಲ್ಲೀನೆ ..!!

ನಾನು ತಲ್ಲೀನೆ
ಅವಳ ಸೆರಗ ತುದಿಯಲ್ಲಿ ಅಡಗಿಕೊಳ್ಳುವಲ್ಲಿ
ನಾನುಗಳ ಇಲ್ಲವಾಗಿಸಿ ಅವನಾಗುವಲ್ಲಿ
ಕಿರುಬೆರಳ ತುದಿಯಲ್ಲಿ ಹೆಸರ ಗೀಚುವಲ್ಲಿ
ನೀನುಗಳಲ್ಲಿ ನನ್ನನಿರಿಸುವಲ್ಲಿ
ನನ್ನೊಳು ನಾನು ಬದುಕುವಲ್ಲಿ -ನಾನು ತಲ್ಲೀನೆ ((ಪಂಜುವಿನಲ್ಲಿ ಪ್ರಕಟಿತ ಕವನ... ಪಂಜು ಬಳಗಕ್ಕೆ ವಿಶೇಷವಾಗಿ ನಟರಾಜ್ ಅರ್ಥಾತ್ ಪ್ರೀತಿಯ ನಟಣ್ಣನಿಗೆ ಧನ್ಯವಾದಗಳು
ಪಂಜುವಿನ ಲಿಂಕ್ : http://www.panjumagazine.com/?p=2577  )

ಜೂನ್ 9, 2013

ಹನಿ ಹನಿ ಇಬ್ಬನಿ..

1. ನೀ ಕಾಲ್ಗೆಜ್ಜೆಗೆ ಪೋಣಿಸಿದ
ನಿನ್ನ ಕನಸುಗಳ
ತೊಡಲಾರೆ ಗೆಳೆಯಾ
ಕರಿಮಣಿಗಳಿಗೆ ಜೋಡಿಸಿ
ಕೊರಳಿಗೆ ಕಟ್ಟು
ನಿನ್ನ ಕನಸುಗಳ ಧರಿಸುತ್ತೇನೆ
-ನನ್ನವೆಂಬಂತೆ.


2. 
ನಾ ನಿನ್ನವಳಾಗಿ ಉಳಿದಿಲ್ಲ 

ಏಕೆಂದರೆ.. 
ನೀನಿಟ್ಟ ಚುಕ್ಕಿಗೆ ಅದಿನ್ಯಾರೋ 
ಗೀಟು ಎಳೆದು ಬಣ್ಣ ತುಂಬಿದ್ದಾರೆ 
ನಾನೀಗ ಅವರ ಮನದಂಗಳದ ರಂಗೋಲಿ..!!

3 .ನಾ ಬಂಧಿಯಾಗಿರಲೇ 
ಇಷ್ಟಪಡುತ್ತೇನೆ 
ತೋಳ ಬಂಧಿಯಲ್ಲಿ 
ಇಷ್ಟೊಂದು ಸುಖವಿರುವುದಾದರೆ. 

4. ಬದುಕು ನರಳಿಸುವ 
ಪೆಟ್ಟುಗಳಿಗೆ ಕಣ್ಣೀರಾಗದಿರು 
ಕಣ್ಣಹನಿಗಳಲ್ಲಿ ನಾನಿದ್ದೇನೆ..  
ಜಾರಿಬಿಟ್ಟೇನು ನಿನ್ನ ಒಂಟಿಯಾಗಿಸಿ. 
ಕಣ್ಣೀರ ಕರಗಿಸಿ ಸೆಡ್ಡು ಹೊಡೆದು ನಿಲ್ಲು 
ಉರುಳುತ್ತೇನೆ ಆನಂದಭಾಷ್ಪವಾಗಿ. 

5. ನಿನ್ನೊಳಗಿಂದ ನೀ ನನ್ನ 
ಹೊರ ದಬ್ಬುವವರೆಗೂ
ನಾ ನಿನ್ನ
ಕನಸಿನ ಬಾಗಿಲ
ತಟ್ಟುವುದು ತಪ್ಪುವುದಿಲ್ಲ ಗೆಳೆಯಾ
ಆಚೆ ನೂಕು ಒಮ್ಮೆ
-ನಾ ಮತ್ತೆಳದಂತೆ 

6. ನಮ್ಮಲ್ಲಿ ಬೇಧವಿಲ್ಲ
ನೀ ಮುಂದಡಿಯಿಡುತ್ತಿದ್ದರೆ 
ನಿನ್ನ ಹೆಜ್ಜೆಯ ಅಚ್ಚಿನ ಹಿಂದೆಯೇ 
ಗೆಜ್ಜೆಯ ಸದ್ದು ಸೇರಿಸುವುದು 
ಅಸಮಾನತೆಯಲ್ಲ..!

7. ದುಃಸ್ವಪ್ನಗಳು 
ಇರುಳ ನಿದ್ದೆಯ ಮೇಲೆ 
ಹಾವಳಿಯಿಡುತ್ತಿರೆ.. 
ನಾ ಅಮ್ಮನ  ಮಡಿಲ ಸೇರುತ್ತೇನೆ 
ಅಲ್ಲಿ ಭಯದ ಭೀತಿಯಿಲ್ಲ.  

8. ನೆನಪುಗಳ ಮುರಿದು 
ಕನಸುಗಳ 
ಜೋಡಿಸಬಲ್ಲೆನಾದರೆ 
ನನಗೆ ನೆನಪುಗಳ ಹಂಗಿಲ್ಲ..!

9.ಮನ ಒಣಗಿ ಬಾಯಾರಿದೆ 
ಬಿರುಕೊಡೆದ ನೆಲದಂತೆ 
ದಾಹ ತೀರಿ ಹಸಿಯಾಗಲು 
ಸುರಿಸುವೆಯಾ 
ನಿನ್ನೊಲವ ಸೋನೆಮಳೆ..?

10.ಕನಸುಗಳು ಬೆಂಗವಲಾಗಬೇಕಿತ್ತು 
ದುಃಸ್ವಪ್ನಗಳಾಗಿ 
ಕಣ್ಣ ರೆಪ್ಪೆಗೆ ಜೋತುಬಿದ್ದಿದೆ 
ಮಲಗಗೊಡುವುದಿಲ್ಲ 
ಬಾಳಗೊಡುವುದಿಲ್ಲ...!
 
 
 

ಏಪ್ರಿಲ್ 16, 2013

ಹನಿ ಹನಿ ಇಬ್ಬನಿ..

1.ಯಾಕೆ ಹೀಗೆ..?
ಮೊದಮೊದಲು
ಮನಸುಗಳು
ಮಾತಾಡುತ್ತಿದ್ದವು
ಈಗೀಗ ರೋದಿಸುತ್ತಿವೆ..!

 
2.ನನಗೆ ಗೊತ್ತು
ನೀನು ನಾನಿಲ್ಲದೆಯೂ ಬದುಕಬಲ್ಲೆ
ಆದರೆ
ನಾನಿರುವಾಗ ನನ್ನೊಂದಿಗೇ
ಬದುಕುತ್ತಿಯಲ್ಲಾ
ಅಷ್ಟೇ ನನ್ನ ಬದುಕು ..!

 
3.ನೋವುಗಳಲ್ಲಿ
ನಗುವುದನ್ನು
ರೂಡಿಸಿಕೊಂಡರೆ
ನಾನೂ ನಿತ್ಯಸುಖಿ
-ನಿನ್ನಂತೆ.. !


4.ಭ್ರಮೆಗಳಲ್ಲಿ
ಸುಖವಾಗಿದ್ದವಳಿಗೆ
ವಾಸ್ತವವ
ಪರಿಚಯಿಸುವ
ಜರೂರತ್ತು ನಿನಗೆನಿತ್ತು..?


5.ಒಂಟಿಯಾಗಿರಬೇಕು
ಏಕೆಂದರೆ
ಜಂಟಿಯೊಳಗಿನ ಗಾಢ ಮೌನಕ್ಕಿಂತ
ಒಂಟಿತನದಲ್ಲಿನ ತನ್ಮಯತೆಯ
ಪ್ರೇಮಿ ನಾನು.. !


6.ನಲಿವುಗಳೆಲ್ಲಾ
ನೋವಿನ ಮಡಿಲಿಗೇ
ಜಾರುವಾಗ
ಹೇಗೆ ಬರೆಯಲಿ
ಖುಷಿಯ ನಾಲ್ಕು ಸಾಲು..?


7.ನೀ ಬಿಟ್ಟು ಹೋಗಿದ್ದಕ್ಕೆ
ನಾ ನೊಂದುಕೊಳ್ಳುವುದಿಲ್ಲ
ಕೆಸರಲ್ಲಿ ಕಾಲು ಹೂತು
ಕಳೆದ ಚಪ್ಪಲಿಗಿಂತ
ಉಳಿಸಿಕೊಂಡ ಕಾಲನ್ನು
ಹೆಚ್ಚು ಪ್ರೀತಿಸುವವಳು ನಾನು.


8.ಮರುಳುಗಾಡ ರಣಬಿಸಿಲು
ಝಳಪಿಸಿ ಸುಡುತಿರೆ
ಎದೆಗೆ ಹನಿನೀರು ಬಿಟ್ಟು
ಬದುಕಿಸುವ ಓಯಸಿಸ್
ನಿನಗೆ ನಾ
ಮರುಳಾದೆನಲ್ಲೇ..?

9.
ಒಂದಿಡಿ ದಿನದ ಧಗೆಗೆ
ಕಂಗಾಲಾಗಿದ್ದ ನನಗೆ
ಈ ಸಂಜೆ ತಣ್ಣಗೆ ನೀ ಬಂದು
ವಿರಹದ ಧಗೆಯ
ತಣಿಸುವ ಅರಿವಿರಲಿಲ್ಲ
ಓ ಮಳೆಯೇ..!!


10.ನಿರೀಕ್ಷೆಗಳಿಲ್ಲದೆ
ನಾ ಬದುಕಿಬಿಡಬೇಕೆಂದು
ಹೇಳುವ ನೀನು
ನಾ ಅಂತೆಯೇ ಇರಬೇಕೆಂದು
ನಿರೀಕ್ಷಿಸಬೇಡ.  


ಏಪ್ರಿಲ್ 1, 2013

ಕೆಲವು ಅನುಮಾನಗಳು..

ನೆನ್ನೆ ಇದ್ದಕ್ಕಿದ್ದಂತೆ
ಕಣ್ಣೀರಿನಂತಹ ಧಾರಾಕಾರ ಮಳೆ
ಆಕಾಶದ ಕಣ್ಣಿಗೆ ಯಾರಾದರೂ
ಚುಚ್ಚಿದರೆ ಮೊಳೆ?
-ಅನುಮಾನ ನನಗೆ.

ಜೀವನವೆಂಬ ಕ್ರೀಡೆಯಲ್ಲಿ
ನಿಲ್ಲದಂತೆ ಓಡುತ್ತಿರಬೇಕೆಂದು ಹೇಳಿದವ
ಇಂದು ಭಾರದ ಹೆಜ್ಜೆಗಳನ್ನಿಡುತ್ತಿದ್ದಾನೆ 
ಬದುಕು ಸೋತು ಹೋಯಿತೇ ಓಟದಲ್ಲಿ?
-ಅನುಮಾನ ನನಗೆ.

ಪ್ರತಿದಿನ ಕ್ಷಣಗಳು ಹುಡುಕಾಟದಲ್ಲೇ
ಕಳೆಯುತ್ತಿದ್ದವಳನ್ನು ಹುಚ್ಚಿಯೆನ್ನುತ್ತಿದ್ದರು
ಇಂದೇಕೆ ಆ ತಾಯಿ ನಿಶ್ಚಲವಾಗಿ ಕೂತಿದ್ದಾಳೆ?
ಮರಳಿ ಬಾರದ ಊರಿಗೆ ತೆರಳಿದ
ಮಗನ ಸುದ್ದಿ ತಿಳಿಯಿತೇ ಅವಳಿಗೆ?
-ಅನುಮಾನ ನನಗೆ.

ಮುನಿಸ ಮುದ್ದು ಮಾಡಿ
ಮನಸಲ್ಲಿ ಕನಸು ತುಂಬುತ್ತಿದ್ದವ
ಇಂದೇಕೆ ಹ್ಯಾಪುಮೋರೆ ಧರಿಸಿದ್ದಾನೆ?
ತಿರುಗಿ ಬಂದಳೇ ಅವನ ಹಳೆಯ ಗೆಳತಿ?
-ಅನುಮಾನ ನನಗೆ.

ಅವರಂತವರಲ್ಲ ಎಂದುಕೊಂಡೇ
ಗಂಡನ ಲೀಲೆಗಳ ಮುಚ್ಚಿಹಾಕುತ್ತಿದ್ದ
ಅಮ್ಮನಿಗೆ ಇಂದೇಕೆ ಇಷ್ಟು ರೋಷ?
ಮನೆ ಒಳಗೇ ಬಂದಳೆ ಸವತಿ?
-ಅನುಮಾನ ನನಗೆ.

ಅವಳೆಂದರೆ ಖುಷಿಯ ಬುಗ್ಗೆಯಾಗುವನಲ್ಲ
ಮನೆಯ ಹಳೆಯ ಫೋನ್
ಕದ್ದು ತಂದು ಕೊಟ್ಟ
ಅವಳ ಮೇಲೆ ಇಷ್ಟವಾಗಿದೆಯೇ
ನನ್ನ ಹದಿನಾರರ ತಮ್ಮನಿಗೆ?
-ಅನುಮಾನ ನನಗೆ.

ಪ್ರೀತಿಯೆಂದರೆ ಅಲರ್ಜಿ ಅನ್ನುತ್ತಿದ್ದ ಗೆಳತಿ
ಮೊನ್ನೆ ಅವನೊಂದಿಗೆ ಕಾಫಿಗೆ ಹೋದಾಗಿನಿಂದ
ಬದಲಾಗಿದ್ದಾಳೆ ಪ್ರೀತಿಯ ಗುಂಗಿಗೆ
ಅವನೇನಾದರೂ ಕಾಫಿಯಲ್ಲಿ ಪ್ರೀತಿ ಗುಳಿಗೆ ಹಾಕಿದ್ದನೆ?
-ಅನುಮಾನ ನನಗೆ. 


ಮಾರ್ಚ್ 29, 2013

ಹನಿ ಹನಿ ಇಬ್ಬನಿ..

1.ನಿನ್ನೆಲ್ಲವನ್ನೂ
ಕಿವಿ ಬಾಯಿ ಇಲ್ಲದಂತೆ
ಸಹಿಸಿದ್ದೆನೆಂದರೆ
ನೀನು, ನನ್ನ ಅಹಂಗಿಂತ
ಹೆಚ್ಚು ಅಂತಲೇ ಅರ್ಥ. 


2.ಅಮ್ಮನ ಹುಡುಕುವ ಭರದಲ್ಲಿ
ರಾತ್ರಿಗಳೆಲ್ಲಾ ಅಮ್ಮನೇ ಹೇಳಿದ
ಅವನೊಂದಿಗೆ ಕಳೆದಿದ್ದೇನೆ
ಈಗ ಅವನೂ ಮೋಡಗಳೊಂದಿಗಿನ
ಸರಸದಲ್ಲಿ ನನ್ನ ಮರೆದಿದ್ದಾನೆ
ಬಿಟ್ಟು ಹೋದ ಅಮ್ಮನಂತೆಯೇ..!

 
3.ಮತ್ತೆ ನಾನು ನನ್ನೊಳಗನ್ನು 
ಹರವಿಟ್ಟು ಬೆತ್ತಲಾಗುವುದಿಲ್ಲ
ನಿನ್ನ ಬಾಯಲ್ಲಿ ಎಂಜಲಾಗುವುದಕ್ಕಿಂತ
ನನ್ನೊಳಗೆ ಸುಡುವ ಬೆಂಕಿಯಾಗುತ್ತೇನೆ. 


4.ಮಲಗಿದ್ದ ಕನಸುಗಳು
ಇರುಳ ಕತ್ತಲೆಯ ಭಯಕ್ಕೆ
ದಡಕ್ಕನೆ ಎದ್ದು ಬಿಕ್ಕಳಿಸುವಾಗ
ನಾನಿದ್ದೆನೆಂಬಂತೆ
ಮುದ್ದಿಸುವುದು ಮತ್ತದೇ ಇರುಳು.

 

5.ಬದುಕಿನ ಅರ್ಥವನ್ನು
ನಿನ್ನೊಳಗೆ ಹುಡುಕಲು
ಹೊರಟವಳ
ಮನದೊಳಗೆ ಬಿಟ್ಟುಕೊಂಡು
ಬೆಳಕಾಗಬಾರದೇ..?


6.ಒಳಗಿನ ಒಲವ ನಂಟುಗಳು
ಕಳಚಿ ದೂರವಾಗುವಾಗ
ದೂರದ ಸಂಬಂಧಗಳನ್ನು
ಒಪ್ಪಿಕೊಳ್ಳುವ ಧೈರ್ಯ
ನಾ ಮಾಡುವುದಿಲ್ಲ.

 

7.ಹೆಜ್ಜೆಯ ಹಿಂದಿದ್ದ
ನಿನ್ನ ಛಾಯೆಯ ನೆರಳಲ್ಲೇ
ಬದುಕು
ಮಗ್ಗಲು ಬದಲಿಸಿದ್ದು.


8.ತಬ್ಬಲಿಯೊಂದು
ದಾರಿಹೋಕರತ್ತ
ದೀನದೃಷ್ಟಿ ನೆಟ್ಟು ಕುಂತಿತ್ತು
-ಯಾರೊಬ್ಬರಾದ್ದದಾರೂ
ಪ್ರೀತಿ ತನ್ನ ತಬ್ಬಲಿ ಎಂದು.


9.ಹಸಿ ಹಸಿ ಕಿತ್ತು
ತಿನ್ನುವುದಕ್ಕಿಂತ
ಸುಟ್ಟು ತಿನ್ನು
ಆಗ ಅರೆಬರೆ ಜೀವವೂ
ಇರುವುದಿಲ್ಲ.


10.ನರಳಿಸಿ ಮುಖವರಳಿಸಿಕೊಂಡು
ತೃಪ್ತಿ ಪಡುವವರು
ಇದ್ದರಾದರೆ
ನಾನು ನರಳುವಿಕೆಯಲ್ಲೇ
ಅರಳುತ್ತೇನೆ. ಫೆಬ್ರವರಿ 28, 2013

ಹನಿ ಹನಿ ಇಬ್ಬನಿ...

1.ಪರಿಪೂರ್ಣತೆಯ
ತಾಕಲಾಟದೊಳಗೆ
ಅಪೂರ್ಣತೆಯ ಚಿಪ್ಪೊಂದು
ಮುತ್ತಿನ
ಬೆಲೆ ಪಡೆಯಲಾದೀತೇ..?

2.ಪ್ರತಿದಿನ ಕಾಡುವ
ಚಿತ್ರ ವಿಚಿತ್ರ ಕನಸುಗಳ
ಮೇಲೆ ಒಲವಿಲ್ಲ ನನಗೆ
ಒಲವಿರುವುದು
ಕನಸಿನ ನಾವಿಕನ ಮೇಲೆ...!!

3.ಹುಸಿ ನಿರೀಕ್ಷೆಗಳ
ಜೀವಂತಿಕೆ
ಜೀವಂತ ಕನಸುಗಳಿಗೇಕೆ
ಇರುವುದಿಲ್ಲ.. ?

4.
ಅವಳಿಗೆ ಬೆನ್ನು ಮಾಡಿ
ಈತನೊಂದಿಗೆ ಹೊರಡಲು
ಅಣಿಯಾದಾಗ
ಅಮ್ಮನೆಂಬ ಅವಳ
ಕಣ್ಣಿಂದ ಉದುರಿದ್ದು
ನನ್ನೆಡೆಗಿದ್ದ ಅವಳ ಕನಸುಗಳಾ..?!


5.ಹೆಗಲ ಮೇಲೆ ಮಗಳನ್ನು
ಅಂಬಾರಿ ಕೂರಿಸುವ
ಇವನನ್ನು ನೋಡುವಾಗ
ಮನೆಯ ಮೂಲೆಯ
ಒಂಟಿ ಚಾಪೆಯ ಮುದುಕ,
ಅಪ್ಪನ ನೆನಪಾಗುತ್ತದೆ..!

6.ನಾಳೆಯ ಕನಸುಗಳಿಗಾಗಿ
ಇಂದು ನಗುವಾಗ
ಇವತ್ತಿನ ದುಃಖ ಮರೆಯಾಗಿತ್ತು
ನಾಳೆಯ ದುರಂತ ಅಪ್ಪಿತ್ತು..!

 

7.ನೀನು ನನ್ನೊಳಗಿನ
ಮಾತು ಮತ್ತು ಮೌನ
ಎದೆ ಭಾರವ ನಿನ್ನೆಡೆಗೆ
ದಾಟಿಸುವಾಗ ಮಾತು
ಖಾಲಿಯಾಗಿ ನಿನ್ನ ಮಡಿಲಿಗೆ
ಜಾರುವಾಗ ಮೌನ...!

8.ಕಣ್ಣಲ್ಲೇ ನೀರು ಇಂಗಿಸಿ
ನಗೆಯ ಮುಖವಾಡ ಹೊರುವಾಗ
ಅವಳ ಮುಂದಿದ್ದಿದ್ದು
ಮಕ್ಕಳ ಮುದ್ದು ಮುಖ
ಮತ್ತು ಸಾಯದಂತೆ ತಡೆದ
ನೋವುಗಳ ಸರ್ಪಗಾವಲು..!

9.ನನ್ನಿಷ್ಟ
ನಿನಗಿಷ್ಟವಾಗುವುದಿಲ್ಲವೆಂದು
ತಿಳಿದ ಮೇಲೆಯೇ
ನಿನ್ನಿಷ್ಟವನ್ನೇ
ನನ್ನಿಷ್ಟವಾಗಿಸಿದ್ದು...!!

10.
ಅಡೆತಡೆಯಿಲ್ಲದ ಮಾರ್ಗದಲಿ
ಸರಾಗವಾಗಿ ನಡೆಸಿಕೊಂಡು ಹೋಗಿ
ಗಮ್ಯದ ದಾರಿ ನಿಚ್ಚಳವಾಗಿದ್ದಾಗಲೇ
ಸಿಗುವ ಪ್ರಪಾತದಂತಹ ತಿವಿತಗಳಿಗಿಂತ
ಬಾಲ್ಯದ ಬೆಟ್ಟ ಗುಡ್ಡ ಕಲ್ಲು ಮುಳ್ಳಿನ
ಕಾಲುದಾರಿಲಿ ಸಿಗುವ ರಕ್ಕಸ ತಿರುವುಗಳೇ ಹಿತ. 
ಫೆಬ್ರವರಿ 20, 2013

ಹನಿ ಹನಿ ಇಬ್ಬನಿ..

ನೋವುಗಳೇ
ಅಭ್ಯಾಸವಾಗಿರುವಾಗ
ಸಂತೋಷಗಳು
ನೆಮ್ಮದಿ ಕೊಡಲಾರದು..!


ಮನದ ಬಾಂದಳದಲ್ಲಿ
ಚುಕ್ಕಿ ಚಂದ್ರಮ ನೀನು
ಅಗಣಿತ ತಾರೆಗಳ ಸರಿಸಿ
ಈ ಭುವಿಯನ್ನೇ
ಸುತ್ತುವೆಯೇನು?
 


ಆಸೆ ಪಟ್ಟಾಗ ದಕ್ಕಲ್ಲ
ದಕ್ಕಿದಾಗ
ಆಸೆ ಅದರಲ್ಲಿ ಇರೋಲ್ಲಾ..


ನಿರಾಕರಿಸಲ್ಪಟ್ಟ
ನಿರೀಕ್ಷೆಗಳಿಗೆ
ನಿಲುವುಗಳನ್ನು
ನಲುಗಿಸುವ
ಸಾಮರ್ಥ್ಯವಿದೆ..!!


ಸಂತೋಷಗಳಿಗೆ ಬಾಳಿಕೆ ಕಡಿಮೆ
ಮುರಿದಷ್ಟು ಜೋಡಿಸುವ ಪ್ರಕ್ರಿಯೆ
ಚಾಲ್ತಿಯಲ್ಲಿರುತ್ತದೆ.
ದುಃಖಗಳಿಗೆ ಆಯಸ್ಸು ಗಟ್ಟಿ
ಜೀವನ ಪೂರ್ತಿ ಜೊತೆಯಾಗುತ್ತೆ.


 

ಜನವರಿ 4, 2013

ಹನಿ ಹನಿ ಇಬ್ಬನಿ..

1. ಆತ್ಮ ಸಂತೋಷಕ್ಕೆ
ಕೊನೆಯ ಪ್ರಯತ್ನ
ಇಲ್ಲದೆ ಇರುವುದನ್ನು
ಇದೆ ಅಂದುಕೊಳ್ಳುವುದು..!!


2. ಬದುಕಿನ ಹಾದಿಲಿ
ಕನಸು ತುಂಬಿದವ ನೀನು
ನೀನೆ ಇಲ್ಲವಾದರೆ
ಖಾಲಿ ಕನಸುಗಳೊಂದಿಗೆ
ಹೇಗೆ ಬದುಕಲಿ ನಾನು?


3. ಮಿಜಿಮಿಜಿಗುಟ್ಟುವ
ಮನಸ್ಸಿಗೆ
ಅಂದುಕೊಂಡಿದ್ದೆಲ್ಲ
ನಿನಗೆ
ದಾಟಿಸಲಾಗದ
ಗಲಿಬಿಲಿ 


4. ನಿನ್ನೆದೆಯ ಬೆಂಕಿ
ಕಾಣಿಸುವವರೆಗೂ
ವಿರಹದುರಿಯಲ್ಲಿ
ಬೆಂದಿದ್ದು ನಾನು ಮಾತ್ರ
ಎಂದುಕೊಂಡಿದ್ದೆ.

5. ಭೋರ್ಗರೆದು ಧುಮ್ಮಿಕ್ಕಿ
ಹರಿಯುವ ತನ್ನೊಡಲ
ಜ್ವಾಲಾ ಪ್ರವಾಹದಲ್ಲಿ
ತಾನೇ ಕೊಚ್ಚಿ ಹೋದವಳು..!


6. ನೋವುಗಳ ದಾಹವಿನ್ನೂ
ತೀರಿಲ್ಲವಂತೆ..
ನನ್ನ ಪೂರ್ತಿಯಾಗಿ
ಮೊಗೆಮೊಗೆದು
ತಿನ್ನದೇ ಬಿಡುವುದಿಲ್ಲವಂತೆ..!


7 . ಹಣೆಯ ಬಿಂದಿಯ ಮೇಲೆ
ವ್ಯಾಮೋಹವಿರಲಿಲ್ಲ ನನಗೆ
ಆದರೂ
ನೀ ಹಣೆಗಿಟ್ಟ ಸಿಂಧೂರ
ಯಾಕೆ ಈ ಪರಿ
ಮನದೊಳಗೇ ಕೂತು
ಕಾಡುತ್ತಿದೆ ಹುಡುಗಾ..?!

  

8. ನೀನು
ಮನದ ಬಾಂದಳದಲ್ಲಿ
ಹಗಲು ಪೂರ
ಪ್ರೀತಿ ಕಿರಣ ಸೂಸುವ ರವಿ
ಇರುಳುಗಳಲ್ಲಿ
ಕನಸೆಂಬ ತಾರೆಯ
ನನ್ನೊಳಗೆ ಬಿತ್ತುವ ಶಶಿ.


9. ನಿನ್ನ ಇಂಚಿಂಚಾಗಿ ಕಡಿದು ಕೊಂದರೂ 
ತಣ್ಣಗಾಗುವುದಿಲ್ಲ ಅವಳೊಡಲ ಬೆಂಕಿ
 
ಅವಳ ಅಮಾಯಕ ಕನಸುಗಳನ್ನು
ಅಮಾನುಷವಾಗಿ ಹೊಸಕಿ
ಸಾವಿನ ಕೂಪಕ್ಕೆ ತಳ್ಳಿದ್ದಕ್ಕಿಂತ
ಘೋರವೇನಲ್ಲ ಅದು.. 


10. ನನ್ನೆದೆಯ ಮೇಲೆ ನೀ ಬರೆದ ರಂಗೋಲಿಗೆ
ನಿನ್ನ ಕನಸುಗಳದೇ ಬಣ್ಣ
ಬಿಡಿ ಬಿಡಿಯಾಗಿ ಪಟ್ಟಾಗಿ ನೀ ಕೂರಿಸಿದ ಚುಕ್ಕಿಗಳು
ಒಂದಾಗಿರುವುದೇ ಚೆನ್ನ
ಒಡಮೂಡಿದ ಕನಸುಗಳು ಅಳಿಯಲಾರವೋ..
ಒಡೆಯಾಲಾರವೋ ನನ್ನ ಚಿನ್ನ.. :)