ಫೆಬ್ರವರಿ 28, 2013

ಹನಿ ಹನಿ ಇಬ್ಬನಿ...

1.ಪರಿಪೂರ್ಣತೆಯ
ತಾಕಲಾಟದೊಳಗೆ
ಅಪೂರ್ಣತೆಯ ಚಿಪ್ಪೊಂದು
ಮುತ್ತಿನ
ಬೆಲೆ ಪಡೆಯಲಾದೀತೇ..?

2.ಪ್ರತಿದಿನ ಕಾಡುವ
ಚಿತ್ರ ವಿಚಿತ್ರ ಕನಸುಗಳ
ಮೇಲೆ ಒಲವಿಲ್ಲ ನನಗೆ
ಒಲವಿರುವುದು
ಕನಸಿನ ನಾವಿಕನ ಮೇಲೆ...!!

3.ಹುಸಿ ನಿರೀಕ್ಷೆಗಳ
ಜೀವಂತಿಕೆ
ಜೀವಂತ ಕನಸುಗಳಿಗೇಕೆ
ಇರುವುದಿಲ್ಲ.. ?

4.
ಅವಳಿಗೆ ಬೆನ್ನು ಮಾಡಿ
ಈತನೊಂದಿಗೆ ಹೊರಡಲು
ಅಣಿಯಾದಾಗ
ಅಮ್ಮನೆಂಬ ಅವಳ
ಕಣ್ಣಿಂದ ಉದುರಿದ್ದು
ನನ್ನೆಡೆಗಿದ್ದ ಅವಳ ಕನಸುಗಳಾ..?!


5.ಹೆಗಲ ಮೇಲೆ ಮಗಳನ್ನು
ಅಂಬಾರಿ ಕೂರಿಸುವ
ಇವನನ್ನು ನೋಡುವಾಗ
ಮನೆಯ ಮೂಲೆಯ
ಒಂಟಿ ಚಾಪೆಯ ಮುದುಕ,
ಅಪ್ಪನ ನೆನಪಾಗುತ್ತದೆ..!

6.ನಾಳೆಯ ಕನಸುಗಳಿಗಾಗಿ
ಇಂದು ನಗುವಾಗ
ಇವತ್ತಿನ ದುಃಖ ಮರೆಯಾಗಿತ್ತು
ನಾಳೆಯ ದುರಂತ ಅಪ್ಪಿತ್ತು..!

 

7.ನೀನು ನನ್ನೊಳಗಿನ
ಮಾತು ಮತ್ತು ಮೌನ
ಎದೆ ಭಾರವ ನಿನ್ನೆಡೆಗೆ
ದಾಟಿಸುವಾಗ ಮಾತು
ಖಾಲಿಯಾಗಿ ನಿನ್ನ ಮಡಿಲಿಗೆ
ಜಾರುವಾಗ ಮೌನ...!

8.ಕಣ್ಣಲ್ಲೇ ನೀರು ಇಂಗಿಸಿ
ನಗೆಯ ಮುಖವಾಡ ಹೊರುವಾಗ
ಅವಳ ಮುಂದಿದ್ದಿದ್ದು
ಮಕ್ಕಳ ಮುದ್ದು ಮುಖ
ಮತ್ತು ಸಾಯದಂತೆ ತಡೆದ
ನೋವುಗಳ ಸರ್ಪಗಾವಲು..!

9.ನನ್ನಿಷ್ಟ
ನಿನಗಿಷ್ಟವಾಗುವುದಿಲ್ಲವೆಂದು
ತಿಳಿದ ಮೇಲೆಯೇ
ನಿನ್ನಿಷ್ಟವನ್ನೇ
ನನ್ನಿಷ್ಟವಾಗಿಸಿದ್ದು...!!

10.
ಅಡೆತಡೆಯಿಲ್ಲದ ಮಾರ್ಗದಲಿ
ಸರಾಗವಾಗಿ ನಡೆಸಿಕೊಂಡು ಹೋಗಿ
ಗಮ್ಯದ ದಾರಿ ನಿಚ್ಚಳವಾಗಿದ್ದಾಗಲೇ
ಸಿಗುವ ಪ್ರಪಾತದಂತಹ ತಿವಿತಗಳಿಗಿಂತ
ಬಾಲ್ಯದ ಬೆಟ್ಟ ಗುಡ್ಡ ಕಲ್ಲು ಮುಳ್ಳಿನ
ಕಾಲುದಾರಿಲಿ ಸಿಗುವ ರಕ್ಕಸ ತಿರುವುಗಳೇ ಹಿತ. 
30 ಕಾಮೆಂಟ್‌ಗಳು:

 1. ಹನಿಗಳಾ ಇವು....ಕೈಜಾರಿದ ಎದೆಯ ಭಾವಗಳ ಮಳೆ....
  ಸುಷ್ಮಾ - ನಿಜಕ್ಕೂ ಹೊಟ್ಟೆಕಿಚ್ಚಾಗುವಷ್ಟು ಚೆನ್ನಾಗಿ ಬರೆದಿದ್ದೀರಾ...

  ಪ್ರತ್ಯುತ್ತರಅಳಿಸಿ
 2. ಚಂದದ ಗುಟುಕುಗಳು ಸುಷ್ಮಾ....
  ೬ ಇಷ್ಟವಾಯ್ತು...ಶೀರ್ಷಿಕೆ ಹಾಕ್ಬೋದಿತ್ತಾ ಇವುಗಳಲ್ಲಿ ಪ್ರತಿಯೊಂದಕ್ಕೂ???ನೋಡಿ ಒಂದ್ಸಲ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸಲಾಸಲವೂ ಏನಾದರೊಂದು ಉಪಯುಕ್ತ ಟಿಪ್ಸ್ ಕೊಡುತ್ತಿಯಾ ಚಿನ್ಮಯ್...
   ಧನ್ಯವಾದಗಳು... ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ...

   ಅಳಿಸಿ
 3. ಭಾವ ತೀವ್ರತೆಯಿಂದ ತತ್ತರಿಸಿದ್ದೇನೆ ಸುಷ್ಮಾ.. ಟನ್ ಭಾರದ ಹನಿಗಳ ಸೋನೆ ಮಳೆ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹುಸ್ಸೈನ್ ಈ ಮಟ್ಟಿಗೆ ಮನಸ್ಸಿಗೆ ಹನಿಗಳು ಮೆಚ್ಚುಗೆಯಗಿದ್ದರೆ, ನನ್ನ ಖುಷಿಗೆ ಎಣೆಯೇ ಇಲ್ಲಾ.. ಧನ್ಯವಾದಗಳು..

   ಅಳಿಸಿ
 4. ಕೈಯೊಳಗೆ ನಿಲುಕಿಯೂ ನಿಲುಕದಂತೆ ಜಾರುವ ಹನಿಗಳ ಹಾಗೇ
  ಎದೆಯ ನೆಲದೊಳಗೆ ಹನಿಹನಿಯಾಗಿ ಇಂಗುವ ಹನಿಗಳ ಹಾಗೇ
  ಕಾಡುವ ಭಾವಗಳ ಮಳೆ ಸುರಿಸಿದ ಬರಹದ ತೀವ್ರತೆಗೆ ಸೋತಿದ್ದೇನೆ.

  ಸುರಿಯುತ್ತಿರಲಿ ಸೋನೆ ಹೀಗೇ ಕಾಡುವಂತೆ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಹರಕೆ ಹಾರೈಕೆ ಸದಾ ಹೀಗೆ ಇರಲಿ ಸರ್...
   ಧನ್ಯವಾದಗಳು...

   ಅಳಿಸಿ
 5. ಚೆಂದದ ಹನಿಗಳು ಸುಷ್ಮಾ ಜಿ.. ಇಷ್ಟ ಆದವು.. :) :)

  ಪ್ರತ್ಯುತ್ತರಅಳಿಸಿ
 6. ಯಾವುದಾದರೂ ನಾಲ್ಕು ಸಾಲನ್ನು ಎತ್ತಿಕೊಂಡು ಇಲ್ಲಿ ಪುನರ್ ಟೈಪಿಸಿ ಹೋಗಳೋಣ ಎಂದರೆ ಗೆಳತಿ, ಇಲ್ಲಿರುವ ಅಷ್ಟೂ ಸಾಲುಗಳನ್ನು ಪುನರ್ ಟೈಪಿಸುವಂತಿದೆ! ಬರೆಯುತ್ತಾ ಬರೆಯುತ್ತಾ ಆಭರಣವಾಗುತಿದೆ ಒಂದೊಂದು ಬರಹ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಬದರಿ ಸರ್... ನಿಮ್ಮ ಪ್ರತಿಕ್ರಿಯೆ ನನಗೆ ಸ್ಫೂರ್ತಿ...
   ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ... ಧನ್ಯವಾದಗಳು ಸರ್..

   ಅಳಿಸಿ
 7. ಅಬ್ಬಾ ಹುಡುಗಿಯರಲ್ಲಿ ಎಂತೆಂಥ ಭಾವನೆಗಳಿರುತ್ತವೆ...!!
  ಚೆನ್ನಾಯ್ತು..

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನೂರು ನೂರು ತರಹದ ಭಾವಗಳಿಗೆ ಮೂರು ಮೂರು ಸಾಲುಗಳು ಸಾರ್..
   ಧನ್ಯವಾದಗಳು..

   ಅಳಿಸಿ
 8. ಹನಿಗಳು ,ಮಳೆಹನಿಗಳು ಎರಡೂ ಇಷ್ಟವಾಯ್ತು :-)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಭಾವಗಳ ಸೋನೆಮಳೆ ನನ್ನೊಳಗೆ ಸುರಿದಾಗ ಈ ಹನಿಗಳು ಉದ್ಬವಿಸಿದವು..
   ಧನ್ಯವಾದಗಳು ಮೇಡಂ ಜೀ...

   ಅಳಿಸಿ
 9. ಹನಿಗಳನ್ನ ಹನಿಸಿದ ಮಳೆರಾಯ ಭುವಿಯತ್ತ ನೋಡುತ್ತಾನೆ.. ಆ ಪ್ರತಿ ಹನಿಗಳಲ್ಲಿ ಒಂದೊಂದಕ್ಕೂ ಒಂದೊಂದು ಭಾವ, ಬದುಕು, ಕನಸು, ಆಶಯ ನಿರೀಕ್ಷೆ, ಅಮ್ಮನ ಕಂಗಳ ಬಿಂದು, ಅಪ್ಪನ ಮಾರ್ಗದರ್ಶನ, ಗೆಳೆಯನ ಸಾಮಿಪ್ಯ.. ಅಬ್ಬ ಒಂದೇ ಎರಡೇ..
  ಎಷ್ಟು ಚೆನ್ನಾಗಿ ಪದಗಳನ್ನು ಹೊಸೆಯುವ ನಿನ್ನ ಜಾಣ್ಮೆಗೆ ಏನು ಕೊಟ್ಟರು ಸಾಲದು. ಆದರೆ ಅಕ್ಷರಗಳ ಮಾಲೆಯನ್ನು ನನ್ನ ಪುಟ್ಟ ತಂಗಿಗೆ ಕಾಣಿಕೆಯಾಗಿ ಅರ್ಪಿಸುವ ಮನಸ್ಸು ಬರುತ್ತದೆ. ಸೂಪರ್...ಸೂಪರ್ ಸೂಪರ್ ಸೂಪರ್...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಮನುಷ್ಯ ಸಂಬಂಧಗಳಲಿ ತಳುಕು ಹಾಕಿಕೊಂಡಿರುವ ವಿವಿಧ ಭಾವಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನವಷ್ಟೇ ಇದು ಅಣ್ಣಯ್ಯ..
   ನಿಮ್ಮ ಸುಂದರ ಪ್ರತಿಕ್ರಿಯೆಗಾಗಿ ಧನ್ಯವಾದಗಳು... :)

   ಅಳಿಸಿ
 10. ಚೆಂದದ ಹನಿಗಳು ಸುಷ್ಮಾ. ಹನಿಗಳಲ್ಲೂ ಕಾವ್ಯದ ಜಾಣ್ಮೆ ತೋರುತ್ತಿದ್ದೀರಿ, ಅಭಿನಂದನೆಗಳು :-)

  - ಪ್ರಸಾದ್.ಡಿ.ವಿ.

  ಪ್ರತ್ಯುತ್ತರಅಳಿಸಿ
 11. ಸಖತ್ತಾಗಿದೆ ಸುಷ್ಮಾ ಅವರೇ..
  ೫ನೇ ದರ ಶೈಲಿ ಇಷ್ಟ ಆಯ್ತು..

  ಮಹಿಳಾ ದಿನದ ಶುಭಾಶಯಗಳು :-)

  ಪ್ರತ್ಯುತ್ತರಅಳಿಸಿ
 12. ಸುಷ್ಮಕ್ಕಾ ಒಂದು ವರ್ಷ ಆತು !!
  ಯಾವಾಗ ಈ ಕಡೆ ತಮ್ಮ ಭೇಟಿ ? ಮುಂದಿನ ಬರಹ ಯಾವಾಗ ? !!!

  ಪ್ರತ್ಯುತ್ತರಅಳಿಸಿ
 13. vaastavagala nn a kaviteyaagisi bareyodu nange ista... matte adanna istondu chennaagbardidira andmele ista padade iroke saadhyana...

  ಪ್ರತ್ಯುತ್ತರಅಳಿಸಿ