ಏಪ್ರಿಲ್ 16, 2013

ಹನಿ ಹನಿ ಇಬ್ಬನಿ..

1.ಯಾಕೆ ಹೀಗೆ..?
ಮೊದಮೊದಲು
ಮನಸುಗಳು
ಮಾತಾಡುತ್ತಿದ್ದವು
ಈಗೀಗ ರೋದಿಸುತ್ತಿವೆ..!

 
2.ನನಗೆ ಗೊತ್ತು
ನೀನು ನಾನಿಲ್ಲದೆಯೂ ಬದುಕಬಲ್ಲೆ
ಆದರೆ
ನಾನಿರುವಾಗ ನನ್ನೊಂದಿಗೇ
ಬದುಕುತ್ತಿಯಲ್ಲಾ
ಅಷ್ಟೇ ನನ್ನ ಬದುಕು ..!

 
3.ನೋವುಗಳಲ್ಲಿ
ನಗುವುದನ್ನು
ರೂಡಿಸಿಕೊಂಡರೆ
ನಾನೂ ನಿತ್ಯಸುಖಿ
-ನಿನ್ನಂತೆ.. !


4.ಭ್ರಮೆಗಳಲ್ಲಿ
ಸುಖವಾಗಿದ್ದವಳಿಗೆ
ವಾಸ್ತವವ
ಪರಿಚಯಿಸುವ
ಜರೂರತ್ತು ನಿನಗೆನಿತ್ತು..?


5.ಒಂಟಿಯಾಗಿರಬೇಕು
ಏಕೆಂದರೆ
ಜಂಟಿಯೊಳಗಿನ ಗಾಢ ಮೌನಕ್ಕಿಂತ
ಒಂಟಿತನದಲ್ಲಿನ ತನ್ಮಯತೆಯ
ಪ್ರೇಮಿ ನಾನು.. !


6.ನಲಿವುಗಳೆಲ್ಲಾ
ನೋವಿನ ಮಡಿಲಿಗೇ
ಜಾರುವಾಗ
ಹೇಗೆ ಬರೆಯಲಿ
ಖುಷಿಯ ನಾಲ್ಕು ಸಾಲು..?


7.ನೀ ಬಿಟ್ಟು ಹೋಗಿದ್ದಕ್ಕೆ
ನಾ ನೊಂದುಕೊಳ್ಳುವುದಿಲ್ಲ
ಕೆಸರಲ್ಲಿ ಕಾಲು ಹೂತು
ಕಳೆದ ಚಪ್ಪಲಿಗಿಂತ
ಉಳಿಸಿಕೊಂಡ ಕಾಲನ್ನು
ಹೆಚ್ಚು ಪ್ರೀತಿಸುವವಳು ನಾನು.


8.ಮರುಳುಗಾಡ ರಣಬಿಸಿಲು
ಝಳಪಿಸಿ ಸುಡುತಿರೆ
ಎದೆಗೆ ಹನಿನೀರು ಬಿಟ್ಟು
ಬದುಕಿಸುವ ಓಯಸಿಸ್
ನಿನಗೆ ನಾ
ಮರುಳಾದೆನಲ್ಲೇ..?

9.
ಒಂದಿಡಿ ದಿನದ ಧಗೆಗೆ
ಕಂಗಾಲಾಗಿದ್ದ ನನಗೆ
ಈ ಸಂಜೆ ತಣ್ಣಗೆ ನೀ ಬಂದು
ವಿರಹದ ಧಗೆಯ
ತಣಿಸುವ ಅರಿವಿರಲಿಲ್ಲ
ಓ ಮಳೆಯೇ..!!


10.ನಿರೀಕ್ಷೆಗಳಿಲ್ಲದೆ
ನಾ ಬದುಕಿಬಿಡಬೇಕೆಂದು
ಹೇಳುವ ನೀನು
ನಾ ಅಂತೆಯೇ ಇರಬೇಕೆಂದು
ನಿರೀಕ್ಷಿಸಬೇಡ.  


ಏಪ್ರಿಲ್ 1, 2013

ಕೆಲವು ಅನುಮಾನಗಳು..

ನೆನ್ನೆ ಇದ್ದಕ್ಕಿದ್ದಂತೆ
ಕಣ್ಣೀರಿನಂತಹ ಧಾರಾಕಾರ ಮಳೆ
ಆಕಾಶದ ಕಣ್ಣಿಗೆ ಯಾರಾದರೂ
ಚುಚ್ಚಿದರೆ ಮೊಳೆ?
-ಅನುಮಾನ ನನಗೆ.

ಜೀವನವೆಂಬ ಕ್ರೀಡೆಯಲ್ಲಿ
ನಿಲ್ಲದಂತೆ ಓಡುತ್ತಿರಬೇಕೆಂದು ಹೇಳಿದವ
ಇಂದು ಭಾರದ ಹೆಜ್ಜೆಗಳನ್ನಿಡುತ್ತಿದ್ದಾನೆ 
ಬದುಕು ಸೋತು ಹೋಯಿತೇ ಓಟದಲ್ಲಿ?
-ಅನುಮಾನ ನನಗೆ.

ಪ್ರತಿದಿನ ಕ್ಷಣಗಳು ಹುಡುಕಾಟದಲ್ಲೇ
ಕಳೆಯುತ್ತಿದ್ದವಳನ್ನು ಹುಚ್ಚಿಯೆನ್ನುತ್ತಿದ್ದರು
ಇಂದೇಕೆ ಆ ತಾಯಿ ನಿಶ್ಚಲವಾಗಿ ಕೂತಿದ್ದಾಳೆ?
ಮರಳಿ ಬಾರದ ಊರಿಗೆ ತೆರಳಿದ
ಮಗನ ಸುದ್ದಿ ತಿಳಿಯಿತೇ ಅವಳಿಗೆ?
-ಅನುಮಾನ ನನಗೆ.

ಮುನಿಸ ಮುದ್ದು ಮಾಡಿ
ಮನಸಲ್ಲಿ ಕನಸು ತುಂಬುತ್ತಿದ್ದವ
ಇಂದೇಕೆ ಹ್ಯಾಪುಮೋರೆ ಧರಿಸಿದ್ದಾನೆ?
ತಿರುಗಿ ಬಂದಳೇ ಅವನ ಹಳೆಯ ಗೆಳತಿ?
-ಅನುಮಾನ ನನಗೆ.

ಅವರಂತವರಲ್ಲ ಎಂದುಕೊಂಡೇ
ಗಂಡನ ಲೀಲೆಗಳ ಮುಚ್ಚಿಹಾಕುತ್ತಿದ್ದ
ಅಮ್ಮನಿಗೆ ಇಂದೇಕೆ ಇಷ್ಟು ರೋಷ?
ಮನೆ ಒಳಗೇ ಬಂದಳೆ ಸವತಿ?
-ಅನುಮಾನ ನನಗೆ.

ಅವಳೆಂದರೆ ಖುಷಿಯ ಬುಗ್ಗೆಯಾಗುವನಲ್ಲ
ಮನೆಯ ಹಳೆಯ ಫೋನ್
ಕದ್ದು ತಂದು ಕೊಟ್ಟ
ಅವಳ ಮೇಲೆ ಇಷ್ಟವಾಗಿದೆಯೇ
ನನ್ನ ಹದಿನಾರರ ತಮ್ಮನಿಗೆ?
-ಅನುಮಾನ ನನಗೆ.

ಪ್ರೀತಿಯೆಂದರೆ ಅಲರ್ಜಿ ಅನ್ನುತ್ತಿದ್ದ ಗೆಳತಿ
ಮೊನ್ನೆ ಅವನೊಂದಿಗೆ ಕಾಫಿಗೆ ಹೋದಾಗಿನಿಂದ
ಬದಲಾಗಿದ್ದಾಳೆ ಪ್ರೀತಿಯ ಗುಂಗಿಗೆ
ಅವನೇನಾದರೂ ಕಾಫಿಯಲ್ಲಿ ಪ್ರೀತಿ ಗುಳಿಗೆ ಹಾಕಿದ್ದನೆ?
-ಅನುಮಾನ ನನಗೆ.