ಏಪ್ರಿಲ್ 1, 2013

ಕೆಲವು ಅನುಮಾನಗಳು..

ನೆನ್ನೆ ಇದ್ದಕ್ಕಿದ್ದಂತೆ
ಕಣ್ಣೀರಿನಂತಹ ಧಾರಾಕಾರ ಮಳೆ
ಆಕಾಶದ ಕಣ್ಣಿಗೆ ಯಾರಾದರೂ
ಚುಚ್ಚಿದರೆ ಮೊಳೆ?
-ಅನುಮಾನ ನನಗೆ.

ಜೀವನವೆಂಬ ಕ್ರೀಡೆಯಲ್ಲಿ
ನಿಲ್ಲದಂತೆ ಓಡುತ್ತಿರಬೇಕೆಂದು ಹೇಳಿದವ
ಇಂದು ಭಾರದ ಹೆಜ್ಜೆಗಳನ್ನಿಡುತ್ತಿದ್ದಾನೆ 
ಬದುಕು ಸೋತು ಹೋಯಿತೇ ಓಟದಲ್ಲಿ?
-ಅನುಮಾನ ನನಗೆ.

ಪ್ರತಿದಿನ ಕ್ಷಣಗಳು ಹುಡುಕಾಟದಲ್ಲೇ
ಕಳೆಯುತ್ತಿದ್ದವಳನ್ನು ಹುಚ್ಚಿಯೆನ್ನುತ್ತಿದ್ದರು
ಇಂದೇಕೆ ಆ ತಾಯಿ ನಿಶ್ಚಲವಾಗಿ ಕೂತಿದ್ದಾಳೆ?
ಮರಳಿ ಬಾರದ ಊರಿಗೆ ತೆರಳಿದ
ಮಗನ ಸುದ್ದಿ ತಿಳಿಯಿತೇ ಅವಳಿಗೆ?
-ಅನುಮಾನ ನನಗೆ.

ಮುನಿಸ ಮುದ್ದು ಮಾಡಿ
ಮನಸಲ್ಲಿ ಕನಸು ತುಂಬುತ್ತಿದ್ದವ
ಇಂದೇಕೆ ಹ್ಯಾಪುಮೋರೆ ಧರಿಸಿದ್ದಾನೆ?
ತಿರುಗಿ ಬಂದಳೇ ಅವನ ಹಳೆಯ ಗೆಳತಿ?
-ಅನುಮಾನ ನನಗೆ.

ಅವರಂತವರಲ್ಲ ಎಂದುಕೊಂಡೇ
ಗಂಡನ ಲೀಲೆಗಳ ಮುಚ್ಚಿಹಾಕುತ್ತಿದ್ದ
ಅಮ್ಮನಿಗೆ ಇಂದೇಕೆ ಇಷ್ಟು ರೋಷ?
ಮನೆ ಒಳಗೇ ಬಂದಳೆ ಸವತಿ?
-ಅನುಮಾನ ನನಗೆ.

ಅವಳೆಂದರೆ ಖುಷಿಯ ಬುಗ್ಗೆಯಾಗುವನಲ್ಲ
ಮನೆಯ ಹಳೆಯ ಫೋನ್
ಕದ್ದು ತಂದು ಕೊಟ್ಟ
ಅವಳ ಮೇಲೆ ಇಷ್ಟವಾಗಿದೆಯೇ
ನನ್ನ ಹದಿನಾರರ ತಮ್ಮನಿಗೆ?
-ಅನುಮಾನ ನನಗೆ.

ಪ್ರೀತಿಯೆಂದರೆ ಅಲರ್ಜಿ ಅನ್ನುತ್ತಿದ್ದ ಗೆಳತಿ
ಮೊನ್ನೆ ಅವನೊಂದಿಗೆ ಕಾಫಿಗೆ ಹೋದಾಗಿನಿಂದ
ಬದಲಾಗಿದ್ದಾಳೆ ಪ್ರೀತಿಯ ಗುಂಗಿಗೆ
ಅವನೇನಾದರೂ ಕಾಫಿಯಲ್ಲಿ ಪ್ರೀತಿ ಗುಳಿಗೆ ಹಾಕಿದ್ದನೆ?
-ಅನುಮಾನ ನನಗೆ. 


24 ಕಾಮೆಂಟ್‌ಗಳು:

 1. ಒಂದಷ್ಟು ಭಾರವಾದ ಮತ್ತು ಒಂದಷ್ಟು ನವಿರಾದ ಅನುಮಾನಗಳು...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನವಿರೋ, ಭಾರವೋ.. ಅನುಮಾನಗಳಿಗೆ ಕೊನೆಯಿಲ್ಲ..
   ಧನ್ಯವಾದಗಳು ಶ್ರೀ.. :)

   ಅಳಿಸಿ
 2. ಪ್ರತ್ಯುತ್ತರಗಳು
  1. ಧನ್ಯವಾದಗಳು ಅಕ್ಕಯ್ಯಾ..
   ಪರಿಹಾರ ಸಿಗದ ಪ್ರಶ್ನೆಗಳು ನಿಮ್ಮ ಮುಂದೆ ಹಿಡಿದಿದ್ದೇನೆ.. ನೀವೇ ಉತ್ತರಿಸಬೇಕು.. :)

   ಅಳಿಸಿ
 3. ಹನುಮಾನ್ ಅಂತ ದೇವರಿಗೆ ಅನುಮಾನದ ಪಟ್ಟ ಕೊಟ್ಟ ಕೀರ್ತಿ ನಮ್ಮದು...ಪ್ರತಿ ಹೆಜ್ಜೆಯಲ್ಲೂ ಕಾಡುವ ಅನುಮಾನಗಳನ್ನು ಗೊಂದಲವಿಲ್ಲದೆ ಪ್ರಸ್ತುತ ಪಡಿಸಿರುವ ಕವನಗಳಲ್ಲಿ ಭಾವ ತುಂಬಿ ಹರಿಯುತ್ತಿದೆ...ಇದಕ್ಕೆ ಅನುಮಾನವೇ ಇಲ್ಲ!!! ತಲ್ಲೀನತೆಯಿಂದ ಕೂತಿದ್ದ ಎನಗೆ ಅಲೆಗಳ ಜೊತೆಗೆ ಹೊತ್ತು ಬಂತು ಅನುಮಾನದ ಗಾಳಿ !!! ಸೂಪರ್ ಪಿ.ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ತಲ್ಲೀನತೆಯಿಂದ ಕೂರಲು ಬಿಡಲಿಲ್ಲ ಅನುಮಾನಗಳು ಈ ತಲ್ಲೀನೆಯನ್ನು.. :)
   ಧನ್ಯವಾದಗಳು ಅಣ್ಣಯ್ಯಾ.. :)

   ಅಳಿಸಿ
 4. ಅನುಮಾನಗಳು ಎನ್ನುವುದಕ್ಕಿಂತಲೂ, ಪರೀಕ್ಷೆಗಳು ಎನ್ನುವುದು ಸರಿಯಾದ ಮಾತು ಗೆಳತಿ. ಅಂದ ಹಾಗೆ ಮನಸೆಳೆದ ಸಾಲುಗಳು:
  1. ಆಕಾಶದ ಕಣ್ಣಿಗೆ ಯಾರಾದರೂ
  ಚುಚ್ಚಿದರೆ ಮೊಳೆ?
  2. ಅವಳೆಂದರೆ ಖುಷಿಯ ಬುಗ್ಗೆಯಾಗುವನಲ್ಲ
  3. ಅವನೇನಾದರೂ ಕಾಫಿಯಲ್ಲಿ ಪ್ರೀತಿ ಗುಳಿಗೆ ಹಾಕಿದ್ದನೆ?

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಪ್ರರೀಕ್ಷೆ, ಅನುಮಾನ ಎಂದು ಯಾವುದೇ ಹೆಸರಿಟ್ಟರೂ ಗೊಂದಲ ಮಾತ್ರ ಶತಸಿದ್ದ ಅನಿಸುತ್ತದೆ ಈ ಬದುಕಿನಲ್ಲಿ..
   ಧನ್ಯವಾದಗಳು ಸರ್ ಮೆಚ್ಚಿದ್ದಕ್ಕೆ.. ಚಂದವಾಗಿ ಪ್ರತಿಕ್ರಿಯಿಸಿದ್ದಕ್ಕೆ.. :)

   ಅಳಿಸಿ
 5. ಚೆನಾಗಿದೆ ಸುಷ್ಮಾ...
  ಈ ಥರಹದ ಬರಹಗಳು ನನಗಂತೂ ಹೊಸದು..
  ಬರೆಯುತ್ತಿರಿ...
  ನಮಸ್ತೆ :)

  ಪ್ರತ್ಯುತ್ತರಅಳಿಸಿ
 6. ಪ್ರತ್ಯುತ್ತರಗಳು
  1. ಧನ್ಯವಾದಗಳು ಸರ್ ಜೀ..
   ನಿಮ್ಮ ಆಶೀರ್ವಾದ ಇಂತೇ ಇರಲಿ ಸದಾ.. :)

   ಅಳಿಸಿ
 7. ಆಕಾಶದ ಕಣ್ಣಿಗೆ ಯಾರಾದರೂ ಚುಚ್ಚಿದರೇ ಮೊಳೆ ?.............ಗಮನ ಸೆಳೆಯುವ ಸಾಲುಗಳು

  ಪ್ರತ್ಯುತ್ತರಅಳಿಸಿ
 8. ವ್ವಾಹ್....ಅನುಮಾನಗಳು ತುಂಬಾ ಚೆನ್ನಾಗಿವೆ...:)

  ಪ್ರತ್ಯುತ್ತರಅಳಿಸಿ
 9. ಅನುಮಾನ ಎಂಬುದು ರೋಗವಂತೆ :(... ಆದರೆ ನಿಮ್ಮ ಅನುಮಾನಗಳು ಮನಸ್ಸಿಗೆ ಆಪ್ತವಾಗುತ್ತೆ ...
  ಹುಸೇನ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅನುಮಾನಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಹುಸ್ಸೈನ್ ಜೀ..

   ಅಳಿಸಿ
 10. ಎಲ್ಲಾ ಕವನಗಳನ್ನೂ ಇಷ್ಟೇ ಚನ್ನಾಗಿ
  ಬರೆಯುತ್ತೀಯಲ್ಲಾ.....
  ಯಾವುದೋ ದೊಡ್ಡ ಕವಿಗಳ
  ತುಂಡು ಸೇರಿಸಿಯೇ
  ಸೃಷ್ಟಿಸಿರಬೇಕು ಬ್ರಹ್ಮ ನಿನ್ನ..
  - ಅನುಮಾನ ನನಗೆ..

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಮೆಚ್ಚುಗೆ ಈ ಮಟ್ಟಿಗೆ ಪ್ರತಿಕ್ರಿಯೆಯ ರೂಪದಲ್ಲಿ ಬಂದಾಗ ಮನಸ್ಸು ಸಹಜವಾಗಿ ಖುಷಿಯಾಗುತ್ತದೆ..
   ಧನ್ಯವಾದಗಳು ರಾಘವ್ ಜೀ ..

   ಅಳಿಸಿ
 11. ತುಂಬಾ ಚೆನ್ನಾಗಿದೆ.....ಈ ಭಾವಗಳು ಮನಕ್ಕೆ ಹತ್ತಿರವಾದವು.....
  ನನ್ನದೇ ಭಾವಗಳೇ ....
  ಅನುಮಾನ ನಂಗೆ:)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನನ್ನ ಅನುಮಾನಗಳು ನಿನ್ನದೂ ಇರಬಹುದೆಂಬ ಅನುಮಾನ ನಿನಗೆ ಬಂದಿದೆ ಎನ್ನುವಲ್ಲಿ ಈ ಸಾಲುಗಳು ಸಾರ್ಥಕ್ಯ ಕಂಡವು ತಂಗ್ಯವ್ವ.. :)
   ಧನ್ಯವಾದಗಳು..

   ಅಳಿಸಿ
 12. ನಿಮ್ಮ ಅನುಮಾನಗಳ ಸಾಲುಗಳು ತುಂಬಾ ಇಷ್ಟವಾಯಿತು.

  ಪ್ರತ್ಯುತ್ತರಅಳಿಸಿ