ಜನವರಿ 23, 2014

ನಿನ್ನ ಹೊರತಾಗಿ.. !!

ರಾಣಿಯಾಗುವ ಬಯಕೆಯಿಲ್ಲ
ನಿನ್ನ ಹೃದಯ ಸಿಂಹಾಸನವೇ
ನನ್ನದಾಗಿರುವಾಗ

ಸಿರಿ ಸಂಪತ್ತಿನಲ್ಲಿ
ಮೀಯುವ ಆಸೆಯಿಲ್ಲ
ಸುರಿವ ಸೋನೆಯ ಜೊತೆ
ನೀನಿರುವಾಗ

ಜಗತ್ತಿನ ಎಲ್ಲಾ ಸುಖ
ನನ್ನದಾಗಿರಬೇಕೆಂಬ ಮಂಪರಿಲ್ಲ
ಬೇಸರದ ಸಂಜೆಗಳಿಗೆ
ನಿನ್ನ ಹೆಗಲಿರುವಾಗ

ಅನುಕ್ಷಣವೂ ನಿನ್ನ ಸಾಂಗತ್ಯ ಬೇಕಿಲ್ಲ
ಸಂಜೆ ಮಬ್ಬಲ್ಲಿ ಕಿರುಬೆರಳಿಡಿದು
ನೀ ನಡೆಸುವಾಗ

ಸುಂದರನಾದ ಸಂಗಾತಿಯ
ಕನವರಿಕೆ ಕನಸುಗಳಿಲ್ಲ
ಕಡು ಮೈಯ ತಿಳಿ ಮನದ
ನಿನ್ನ ನಾ ಪಡೆದಿರುವಾಗ

ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ
ನಾಯಕನ ಪಡೆವ ಹಂಬಲವಿಲ್ಲ
ಕಣ್ಣಲ್ಲಿ ಕನಸಿಡುವ
ಕನಸುಗಾರ ಜೊತೆಯಿರುವಾಗ

ಸೂರ್ಯಪ್ರಭೆಯೆ ಹೊತ್ತಿಹೆನೆಂಬ
ಹಮ್ಮಿನ ಗಂಡಸಿನ ದಾಹವಿಲ್ಲ
ರಾತ್ರಿಯ ಮಡಿಲಿಗೆ ತಣ್ಣಗಿನ
ಬೆಳದಿಂಗಳ ಸುರಿವ ಚಂದಿರ ನನ್ನೊಳಿರುವಾಗ

ನನ್ನವ ಅಷ್ಟೆಲ್ಲಾ ಆಗಿಬಿಡಬೇಕೆಂಬ
ಸುಳ್ಳು ಕನಸುಗಳಿಲ್ಲ
ಇಷ್ಟೇ ಇಷ್ಟಾಗಿ ಇಷ್ಟವಾಗಿ
ನನ್ನೊಳಗೆ ನೀ ಇಳಿದಿರುವಾಗ..


10 ಕಾಮೆಂಟ್‌ಗಳು:

 1. ಸುಷ್ಮಾ –
  ನನ್ನವ ಇನ್ನೇನೇನೋ ಆಗಿರಬೇಕಿಲ್ಲ – ಅವ ಕೇವಲ ನನ್ನವನಾಗಿ ಆತ್ಮಗತವಾಗಿರುವ ಈ ಹೊತ್ತಲ್ಲಿ ಎಂಬ ನಿನ್ನ ಭಾವ ಇಷ್ಟವಾಯ್ತು ಕಣೇ...:)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ತನ್ನವನು ಆತ್ಮಕ್ಕಿಳಿದಿರುವ ಹೊತ್ತಲ್ಲಿ ಆತ ಬೇರೇನೂ ಆಗಬೇಕಾಗಿದ್ದಿಲ್ಲ ಅಲ್ವಾ..?
   ಧನ್ಯವಾದಗಳು ಶ್ರೀ ಮೆಚ್ಚುಗೆಗೆ..

   ಅಳಿಸಿ
 2. ನನಗೆ ನೀನು , ನಿನಗೆ ನಾನು ಇದ್ದರೆ ಸಾಕು ಬೇರೆಲ್ಲ ಏತಕೆ ಬೇಕು ಎನ್ನುವ ಸಾರ ಕವಿತೆಯಲ್ಲಿದೆ ತಂಗಿ ಸುಷ್ಮಾ , ಸುಂದರ ಕವಿತೆ ಒಳ್ಳೆಯದಾಗಲಿ,

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಬಾಲಣ್ಣ..
   ನನಗೆ ನೀನು ನಿನಗೆ ನಾನು ಎನ್ನುವುದೇ ಪ್ರೀತಿಯ ಸಾರವಲ್ಲವೇ??

   ಅಳಿಸಿ
 3. ಮೊದಲು ತುಂಬ ದಿನಗಳ ನಂತರ ಬ್ಲಾಗ್ ಲೋಕಕ್ಕೆ ಹಿಂದಿರುಗಿದ ನಿಮಗೆ ಅಭಿನಂದನೆಗಳು.
  ಕವಿತೆಯ ಅಕ್ಷರ ಅಕ್ಷರಗಳಲ್ಲೂ ಅರ್ಪಣಾ ಭಾವ ಮತ್ತು ಪರಸ್ಪರ ಅವಿನಾಭಾವ ಎದ್ದು ಕಾಣುತ್ತಿದೆ.
  ಒಳ್ಳೆಯ ಕವನ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಮತ್ತೆ ಬ್ಲಾಗ್ ಬರೆಯುವುದಕ್ಕೆ ನಿಮ್ಮ ಮಾತುಗಳೇ ಸ್ಫೂರ್ತಿ ಇರಬೇಕು ಸರ್.. ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ನೂರನೇ ಬಲ ನನಗೆ..
   ಮತ್ತೊಮ್ಮೆ ಧನ್ಯವಾದಗಳು..

   ಅಳಿಸಿ
 4. ಕಂಡದ್ದು ಕಾಣಲ್ಲ ಕೇಳಿದ್ದು ತಾಕೋಲ್ಲಾ .. ತಾಕಿದ್ದು ಸಿಕ್ಕೊಲ್ಲ.. ಸಿಕ್ಕಿದ್ದು ಕಾಣಲ್ಲ.. ಹೀಗೆ ಒಂದಕ್ಕೊಂದು ಸರಪಳಿಯನ್ನು ಕಾಲಿಗೆ ಕಟ್ಟಿಕೊಂಡು ಓಡಲಾಗದೆ.. ಹಾರಲಾರದೆ ಇದ್ದು ನರಳುವ ಬದಲು.. ಆ ಅದಿಲ್ಲ ಆದ್ರೆ ಅದರ ಬದಲಿಗೆ ಇದು ಇದೆ.. ಓಹ್ ಇದಿಲ್ಲ ಅದರ ಬದಲಿಗೆ ಆಡಿದೆ.. ಅತೃಪ್ತಿಯ ಸೆಲೆಯಿಲ್ಲ ಆದರೆ ತೃಪ್ತಿಯ ನೆರಳಿದೆ.. ಈಭಾವದಲ್ಲಿ ಸಾಗುವ ಜೀವನ ನಿಜಕ್ಕೂ ನಂದನವನ.. ಇಂತಹ ಸುಮಧುರ ಆತ್ಮೀಯ ಪದಗಳ ಜೋಡಣೆಯಿಂದ ಹೊರಹೊಮ್ಮಿರುವ ಪದ ಪುಂಜ ಸೂಪರ್ ಪಿ ಎಸ್.. ಪ್ರತಿ ಸಾಲುಗಳು ಇನ್ನೊಂದು ಸಾಲನ್ನು ಬೆನ್ನ ಮೇಲೆ ಹೇರಿಕೊಂಡು ಸಾಗುವ ಪರಿ ಸೊಗಸು

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಮನಸ್ಸಿನ ಆನಂದಕ್ಕಿಂತ ಮಿಗಿಲಾದ ತೃಪ್ತಿ ಏನಿದೆ ಅಣ್ಣಯ್ಯ ಈ ಜಗತ್ತಿನಲ್ಲಿ.. ?
   ಧನ್ಯವಾದಗಳು

   ಅಳಿಸಿ