ಜನವರಿ 27, 2014

ಹಸಿವೆಯೆಂದರೇ ಹೀಗೆಯಾ?!

ಹಸಿವೆಯೆಂದರೇ ಹೀಗೆಯಾ?
ಬೀದಿಯ ಜನರ ಓಡಾಟದ ಪರಿವೆ ಇಲ್ಲದೇ
ಕೊಳಕು ಸೀರೆಯಲ್ಲಿ ಸುತ್ತಿಕೊಂಡ
ಎಂಜಲನ್ನು ಗಬಗಬನೇ ನುಂಗುವುದು?

ಹಸಿವೆಯೆಂದರೇ ಹೀಗೆಯಾ?
ದುಡಿಯಲು, ಬೇಡಲು ಶಕ್ತಿಯಿಲ್ಲದ ಮುದುಕ
ಕೊಳಕು ಸೀರೆಯ ಹೆಂಗಸಿನ ಸೀರೆಯೋಳಗಣ
ಎಂಜಲ ಕಿತ್ತುಕೊಂಡು ತಾ ತಿನ್ನುವುದು?

ಹಸಿವೆಯೆಂದರೇ ಹೀಗೆಯಾ?
ತನ್ನೆಡೆಗೆ ಕೈಯಿಟ್ಟ
ನಿಶ್ಶಕ್ತ ಮುದುಕನ ಜಾಡಿಸುವುದು
ತಲೆಯೊಡೆದು ರಕ್ತ ಸುರಿಯುವಂತೆ
ಕಲ್ಲು ಹೊಡೆಯುವುದು?

ಹಸಿವೆಯೆಂದರೇ ಹೀಗೆಯಾ?
ತನ್ನ ತೆವಲಿನ ಹೆಂಗಸಿನ
ಸೆರಗು ಮುಟ್ಟಿದ ಮುದುಕನಿಗೆ
ಹರಿದ ಎಕ್ಕಡ ಕೈಗೆತ್ತಿಕೊಳ್ಳುವುದು?

ಹಸಿವೆಯೆಂದರೇ ಹೀಗೆಯಾ?
ಕತ್ತಲಿಗೆ ಕಾಯದೇ ಅರೆ ಸುತ್ತಿಕೊಂಡ ಸೀರೆಯ
ಬೀದಿಯಲ್ಲೇ ಬಿಚ್ಚಿ ಹಸಿದ ಗಂಡಸಿಗೆ
ಕೊಟ್ಟುಕೊಂಡು ಹಸಿವು ನೀಗಿಸಿಕೊಳ್ಳುವುದು?

ಹಸಿವೆಯೆಂದರೇ ಹೀಗೆಯಾ?
ತಲೆಯೊಡೆದು ಸೊರುತ್ತಿರುವ ರಕ್ತದ ಪರಿವಿಲ್ಲದೆ
ಬೀಳುತಿರುವ ಏಟಿನ ಕದಲಿಕೆಯಿಲ್ಲದೇ
ನಿರ್ಲಿಪ್ತವಾಗಿ ಎಂಜಲ ನೆಕ್ಕುತ್ತಿರುವುದು?

ಹಸಿವೆಯೆಂದರೇ ಇದೆಯಾ?!
ಒಂಟಿ ಬದುಕಿನ ಹೋರಾಟ..!
ಜಂಟಿ ಬದುಕಿಗಾಗಿ ಹೋರಾಟ..!

ಪ್ರೇರಣೆ:ಮೆಜೆಸ್ಟಿಕ್ ನ ಸ್ವಪ್ನ ಬುಕ್ ಹೌಸ್ ರೋಡಿನಲ್ಲಿ ಕಂಡ ಘಟನೆ.

16 ಕಾಮೆಂಟ್‌ಗಳು:


 1. ಹಸಿವು ಯಾವ ಮುಚ್ಚು ಮರೆಯಿಲ್ಲದೆಯೇ ನೀಗಿಸಿಕೊಳ್ಳಲು ಹೊರಟುಬಿಡುತ್ತದೆ. ನಾಚಿಕೆ ಅಯ್ಯೋ ಜನ ನೋಡಿದರೆ ಏನು ತಿಳಿದಾರು ಎಂಬುದೇ ಇಲ್ಲ ಹಸಿವು ನೀಗಿಸುವುದೊಂದೇ ಅವರ ಗುರಿ. ಮನ ಕಲಕಿತು ಸುಷ್ಮ.. ಗೊತ್ತಿಲ್ಲ ನಮ್ಮ ಸುತ್ತಲೂ ಎಂಥೆಂತಾ ಜನರು ಇದ್ದಾರೆ ಏನೆಲ್ಲಾ ಕಷ್ಟಪಡುತ್ತಿದ್ದಾರೆ ಎಂದು

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಬೆಂಗಳೂರು ಅದೆಷ್ಟು ಕಹಿ ಸತ್ಯಗಳನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿದೆಯೋ ನಾ ಕಾಣೆ..
   ಇಂತಹ ಪರಿಸ್ಥಿತಿಗಳ ಅರಿವೂ ಇಲ್ಲದ ಮನ ಆ ಕ್ಷಣಕ್ಕೆ ತಲ್ಲಣಿಸಿ ಬಿಡುವುದಂತೂ ಸುಳ್ಳಲ್ಲ..

   Thank you ಸುಗುಣಕ್ಕಾ :)

   ಅಳಿಸಿ
 2. ನೀವು ಕ೦ಡಿದ್ದನ್ನು ನಮ್ಮೆಲ್ಲರ ಕಣ್ಣಿಗೆ ಕಟ್ಟುವ೦ತೆ ಬರೆದಿದ್ದೀರಿ.. ಹಸಿವೆ೦ಬ ಕಟು ಸತ್ಯದ ನಡುವೆ ಸು೦ದರ ನಿರೂಪಣೆ...

  ಪ್ರತ್ಯುತ್ತರಅಳಿಸಿ
 3. ಹಸಿವ ಬೇಗೆಯೆ ಹಾಗೆ – ನಿರ್ಲಜ್ಜತೆಯ ಮೂಲ ಅದು... ಎಲ್ಲ ತರದ ಹಸಿವೂ ಒಂದು ಮಟ್ಟದ ನಿರ್ಲಜ್ಜತೆಯ ಹುಟ್ಟುಹಾಕಿಬಿಡುತ್ತೆ ಎಂಥವರಲ್ಲೂ – ಬದುಕಿನ ವಿವಿಧ ಮಜಲುಗಳಲ್ಲಿ...
  ಚಂದದ ಬರಹ ಕಣೇ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಶ್ರೀವತ್ಸ.
   ಹಸಿವಿನ ಮಜಲು ತಿಳಿದ ಘಳಿಗೆ ಅದು..

   ಅಳಿಸಿ
 4. ಹಸಿವೆಯ ಹಲವು ಮುಖಗಳನ್ನ ನೈಜವಾಗಿ ಚಿತ್ರಿಸಿದಿಯ...:)
  ಅದ್ಭುತ :)

  ಪ್ರತ್ಯುತ್ತರಅಳಿಸಿ
 5. ಹಸಿವು ಎಂದೂ ಒಣಗುವುದಿಲ್ಲ ಯಾಕೆಂದರೆ ಅದು "ಹಸಿ"ವು.. ಹಸಿದವರು ಒಣಗುವುದಿಲ್ಲ ಯಾಕೆಂದರೆ ಅವರ ಹೊಟ್ಟೆಯೊಳಗೆ ಇರುವುದು ಬರಿ "ಹಸಿ"ವು... ಉದರ ನಿಮಿತ್ತ ಅಂದಾಗಾ ಮಿಕ್ಕಿದ್ದೆಲ್ಲವೂ ಗೌಣವಾಗಿಬಿಡುತ್ತದೆ. ಹೊಟ್ಟೆಯ ಮುಂದೆ ಮಿಕ್ಕಿದ್ದೆಲ್ಲವೂ ಹಿಂದೆ ಎನ್ನುವಂತೆ.. ಅವರವರ ಉದರಕ್ಕೆ.. ಭಾವ ಒಂದೊಂದು ದರವನ್ನು ಮೀಸಲಿಡುತ್ತದೆ...

  ಒಳಗೊಳಗೇ ಮನಸ್ಸಿಗೆ ತಾಕಿ ಮನಸ್ಸು ಮುದುಡಿಕೊಂಡರು ನಿನ್ನ ಪ್ರತಿಭೆ ಕಂಡ ಚಿಕ್ಕ ಘಟನೆಯನ್ನು ಹತ್ತಿಯ ಹಾಗೆ ಹೀಜಿ ಅದಕ್ಕೊಂದು ಸುಂದರ ಸ್ವರೂಪ ಕೊಡುವ ನಿನ್ನ ಕಲೆಗೆ ಒಂದು ನಮಸ್ಕಾರ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸ್ಪೂರ್ತಿದಾಯಕ ಪ್ರತಿಕ್ರಿಯೆ ಅಣ್ಣಯ್ಯ..
   ಧನ್ಯವಾದಗಳು ..

   ಅಳಿಸಿ
 6. ಬದುಕಿನ ಕರಾಳ ಮುಖದ ನಿಜಾವರ್ಣ ಇಲ್ಲಿ ತೋರಿದ್ದೀರಾ.
  ಭಗವಂತ ನಿಜವಾಗಲೂ ಸರ್ವ ಜನ ಏಕ ಪರಿಪಾಲಕನಾ? ಎನ್ನುವ ಅನುಮಾನ ಕಾಡುವುದೇ ಇಂತಹ ಸನ್ನಿವೇಶಗಳಲ್ಲಿ.
  ಮನ ಮಿಡಿಯುವ ಕವನ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹೌದು ಸರ್ ಈ ಘಟನೆಯ ಸಂದರ್ಭದಲ್ಲಿ ನನ್ನನ್ನೇ ನಾನು ಈ ಪ್ರಶ್ನೆ ಕೇಳಿಕೊಂಡಿದ್ದೇನೆ. ಉತ್ತರ ಇವತ್ತಿನವರೆಗೂ ದಕ್ಕಿಲ್ಲ.. ಆದರೆ ಆ ಘಟನೆಯ ಮೇಲಿಂದ ಆದಷ್ಟು ಸಂತೃಪ್ತಳಾಗಿ ಇರುವುದನಂತೂ ಕಲಿತಿದ್ದೇನೆ.. ದೇವರು ಒಂದಿಷ್ಟು ಬೆಟರ್ ಅನ್ನುವ ಮಟ್ಟದಲ್ಲಿ ನಮ್ಮನ್ನು ಇಟ್ಟಿದ್ದಾನೆ ಎಂಬ ತೃಪ್ತಿ ಅದು. ಧನ್ಯವಾದಗಳು ಸರ್...

   ಅಳಿಸಿ