ಫೆಬ್ರವರಿ 24, 2014

ಒಡಲಾಳದ ಒಳಗುಟ್ಟು..!

ನೆನಕೆಗೂ ಹೆದರುವ
ನೆನಪುಗಳೇ ತೆಕ್ಕೆಗೆ ಬೀಳಲು ತವಕಿಸುವುದು
ದೂರ ತಳ್ಳಿದಷ್ಟೂ
ಹೆಗಲಿಗೆ ಜೋತು ಬೀಳುತ್ತವೆ
ಓಡಿ ಹೋದಷ್ಟೂ
ಅಟ್ಟಿಸಿಕೊಂಡು ಬೆನ್ನು ಹತ್ತುತ್ತವೆ. 

ಒಡಲಾಳದ ಒಳಗುಟ್ಟುಗಳೇ ಹಾಗೆ.. !
ಬೇಡವೆಂದಾಗ ಉಸಿರ ಹತ್ತಿರ ಹತ್ತಿರ
ರಾತ್ರಿಯ ಕನಸುಗಳಲ್ಲಿ ಬೆಚ್ಚಿಬೀಳುವಾಗ
ಧೈನ್ಯವಾಗಿ ಬೇಡಿಕೊಳ್ಳುತ್ತೇನೆ
ದೂರವಿರು...!
ಕುಣಿದು ಕುಪ್ಪಳಿಸಿ ಬಳಿ ಬರುತ್ತವೆ
ಒಲ್ಲದ ಗಂಡನ ಅಪ್ಪುಗೆಯ ಹಾಗೆ..!

ಒಳಗುಟ್ಟುಗಳಲ್ಲಿ ಕರುಳು ಕೊರೆವ ಯಾತನೆ
ಹುಟ್ಟಿಸಿ, ಬದುಕಿಸಲಾಗದ
ಭಗ್ನ ಕನಸುಗಳ ಅವಶೇಷಗಳಲ್ಲಿ ನಲುಗುವುದಕ್ಕಿಂತ
ಅವುಗಳು ದುಃಸ್ವಪ್ನಗಳಾಗಿ ಕಾಡುವುದಕ್ಕಿಂತ
ಬಂಜೆಯಾಗಿದ್ದರೇ ಸೈಯಿತ್ತು
ತೀವ್ರತೆಯ ತುತ್ತತುದಿ!

ಸಾಂತ್ವನದ ಕಣ್ಣ ಕೊನೆಯಲ್ಲೂ ಕೊಸರುವ ನೀರು
ತಾಯಿ ಹೆದರಬಾರದು
ತನ್ನದೇ ಕುಡಿಗಳ ನೆರಳಿಗೆ
ಒಡಲಾಳದ ಒಳಸುಳಿಗಳ
ನೆರಳನ್ನು ಬರಸೆಳೆದುಕೊಂಡರೆ
ಮಗು ಮರಳೀತು ತಾಯ ಮಡಿಲಿಗೆ
ಪ್ರೀತಿಯಿಂದ... !

ಫೆಬ್ರವರಿ 19, 2014

ಹನಿ ಹನಿ ಇಬ್ಬನಿ..

1. ಗೆಳತಿ ಹೇಳುತ್ತಾಳೆ
ನನ್ನಲ್ಲಿ ಬದಲಾವಣೆಯಾಗಿದೆಯಂತೆ
ಹೌದು!
ಸಹಿಸಿಕೊಳ್ಳುವುದನ್ನು ನಿಲ್ಲಿಸಿದ್ದೇನೆ
ಎಂದಿದ್ದೇನೆ.


2. ಸಂಯಮವೆಂದರೆ
 ದೂರ ದೂರ ಓಡಿ
ಹಸಿವಿಲ್ಲ -ಆಗುವುದಿಲ್ಲ ಎನ್ನುವುದಲ್ಲ

ಊಟದ ಮುಂದೆಯೇ ಕೂತು
ತನ್ನ ತಾ ನಿಗ್ರಹಿಸುವುದು.

3. ಒಡಲಲ್ಲಿ ಅತೃಪ್ತಿಯ ಸೆಳಹು
ಅರೆ ತುಂಬಿದ ಹೊಟ್ಟೆಗೆ
ಹೊಳೆದ ಹಸಿವಿನ ಅರ್ಥ!

ಒಡಲೀಗ ತೃಪ್ತ!
ಹಸಿವು ಗೊತ್ತಿಲ್ಲದೇ ಪಡೆದಿದ್ದಕ್ಕೂ
ಗೊತ್ತಾಗಿ ಪಡೆದಿದ್ದಕ್ಕೂ
ವ್ಯತ್ಯಾಸ ಅಜಗಜಾಂತರ!


4. ನಾನೆಂದರೆ ಕತ್ತಲೇ
ಅಂದಿಗೂ.. ಇಂದಿಗೂ ..
ಆದರೆ ..
ನಿನ್ನಯ ಬೆಳಕು
ನನ್ನ ಬದುಕ ಬೆಳಗಿದೆ
ಹೌದು ...!!
ನಾ ನಿನ್ನ ಶಶೀ
ನೀ ನನ್ನ ರವಿ .


5. ಜನ್ಮಕ್ಕಂಟಿಕೊಂಡ 

ಒಂಟಿತನವ 
ಹೃದಯದೊಳಕ್ಕೆ 
ಇಳಿದೆನೆಂದವರೂ ನೀಗಿಸಲಾರರು..!!

6. ನಸುಗತ್ತಲ ಹೆಜ್ಜೆಯ ಜೊತೆ ನೀನಿದ್ದಾಗ
ನಿನ್ನುಸಿರು ನನ್ನೋಳ ಸೇರಿದಾಗ
ವಿರಹದುರಿ ಆರಿದಾಗ
ಮೌನ ಸಂಜೆಗಳೂ ಮಾತನಾಡುತ್ತವೆ..!
7.ಅಮವಾಸ್ಯೆಯ ಕಾರ್ಗತ್ತಲಲ್ಲೂ
ಚಂದಿರ ಇಣುಕಿದ ಕನಸು ಬಿತ್ತಲ್ಲ ?
ಅಂದೇ ......
ನಾ ಹುಡುಗಿಯಾಗಿದ್ದು
ನೀ ನನ್ನ ಹುಡುಗನಾದದ್ದು ....!


8. ಅಮ್ಮನ ಸೆರಗಿಂದ
ಹಾರಿ ಹೋದ ಹಕ್ಕಿ
ರೆಕ್ಕೆ ಮುರಿದಾಗ
ದೊಪ್ಪನೆ ಬಿದ್ದದ್ದು
ಮೂಕ ಪ್ರೀತಿಯ
ಅವಳ ಮಡಿಲಿಗೇ ...!!


9. ಇರುಳ ಓಡಿಸುವೆನೆಂದು
 ಹಚ್ಚಿಟ್ಟ ಹಣತೆ
ಕುಳಿಗಾಳಿಯೊಂದಿಗೆ
ಲೀನವಾಯಿತು..!


10.
ನನಗೆ ಗೊತ್ತು
ಗೆಲ್ಲುವುದಷ್ಟೇ
ಪರಮ ಗುರಿಯಾಗಿದ್ದಾಗ
ಪೂರ್ಣ ಶರಣಾಗತಿ
ಎಂಬ ಸೋಲನ್ನು ಒಪ್ಪಿಕೊಳ್ಳುವುದೂ..!