ಫೆಬ್ರವರಿ 24, 2014

ಒಡಲಾಳದ ಒಳಗುಟ್ಟು..!

ನೆನಕೆಗೂ ಹೆದರುವ
ನೆನಪುಗಳೇ ತೆಕ್ಕೆಗೆ ಬೀಳಲು ತವಕಿಸುವುದು
ದೂರ ತಳ್ಳಿದಷ್ಟೂ
ಹೆಗಲಿಗೆ ಜೋತು ಬೀಳುತ್ತವೆ
ಓಡಿ ಹೋದಷ್ಟೂ
ಅಟ್ಟಿಸಿಕೊಂಡು ಬೆನ್ನು ಹತ್ತುತ್ತವೆ. 

ಒಡಲಾಳದ ಒಳಗುಟ್ಟುಗಳೇ ಹಾಗೆ.. !
ಬೇಡವೆಂದಾಗ ಉಸಿರ ಹತ್ತಿರ ಹತ್ತಿರ
ರಾತ್ರಿಯ ಕನಸುಗಳಲ್ಲಿ ಬೆಚ್ಚಿಬೀಳುವಾಗ
ಧೈನ್ಯವಾಗಿ ಬೇಡಿಕೊಳ್ಳುತ್ತೇನೆ
ದೂರವಿರು...!
ಕುಣಿದು ಕುಪ್ಪಳಿಸಿ ಬಳಿ ಬರುತ್ತವೆ
ಒಲ್ಲದ ಗಂಡನ ಅಪ್ಪುಗೆಯ ಹಾಗೆ..!

ಒಳಗುಟ್ಟುಗಳಲ್ಲಿ ಕರುಳು ಕೊರೆವ ಯಾತನೆ
ಹುಟ್ಟಿಸಿ, ಬದುಕಿಸಲಾಗದ
ಭಗ್ನ ಕನಸುಗಳ ಅವಶೇಷಗಳಲ್ಲಿ ನಲುಗುವುದಕ್ಕಿಂತ
ಅವುಗಳು ದುಃಸ್ವಪ್ನಗಳಾಗಿ ಕಾಡುವುದಕ್ಕಿಂತ
ಬಂಜೆಯಾಗಿದ್ದರೇ ಸೈಯಿತ್ತು
ತೀವ್ರತೆಯ ತುತ್ತತುದಿ!

ಸಾಂತ್ವನದ ಕಣ್ಣ ಕೊನೆಯಲ್ಲೂ ಕೊಸರುವ ನೀರು
ತಾಯಿ ಹೆದರಬಾರದು
ತನ್ನದೇ ಕುಡಿಗಳ ನೆರಳಿಗೆ
ಒಡಲಾಳದ ಒಳಸುಳಿಗಳ
ನೆರಳನ್ನು ಬರಸೆಳೆದುಕೊಂಡರೆ
ಮಗು ಮರಳೀತು ತಾಯ ಮಡಿಲಿಗೆ
ಪ್ರೀತಿಯಿಂದ... !

8 ಕಾಮೆಂಟ್‌ಗಳು:

 1. ಒಳಗುಟ್ಟುಗಳು ಬಂಜೆಯಾಗಿಬಿಡಬೇಕಾದರೆ ಒಂದು ಗುಟ್ಟುಗಳು ಗುಟ್ಟಾಗಿರಬಾರದು....
  ಇಲ್ಲಾ.....
  ಆ ಒಳಗುಟ್ಟುಗಳೊಡನೆ ಸಂಬಂಧವೇ ಇಲ್ಲದ ಹಾಗೆ ಬದುಕಿಬಿಡುವಂಥವರಾಗಿಬಿಡಬೇಕು....

  ಸುಷ್ಮಾ ಇದರ ಒಳಗುಟ್ಟೇನು....

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ರಾಘವ್ ಜೀ...
   ಗ್ರಹಿಕೆಗೆ ಧನ್ಯವಾದಗಳು...
   ನಗುವೊಂದೇ ಪ್ರಶ್ನೆಗೆ ಉತ್ತರ...

   ಅಳಿಸಿ
 2. ಚಳಿಗಾಲದಲ್ಲಿ ಕೆಂಡದ ಬಿಸಿ ಹಿತವಾದರೂ ಮಡಿಲನ್ನು ಸುಡದೆ ಇರದು.. ಒಡಲಾಳವೂ ಹಾಗೆ ಆಳದ ಮೊರೆಹೊಕ್ಕ ಒಡಲು ಅಲ್ಲಿರುವುದನ್ನು ಓದಲು ಶುರುಮಾಡಿದರೆ,.... :-)

  ಗುಟ್ಟನ್ನು ಬಯಲಲ್ಲಿ ಬಿಡಬಾರದು.;...ಒಳಗೆ ಅದುಮಿಡಬಾರದು.. ಎರಡು ಕಷ್ಟ.. ಬಯಲಿಗೆ ಬಂದು ಆಪ್ತರಬಳಿಯಲ್ಲಿ ಅದನ್ನು ಹರಡಿದಾಗ ಅದನ್ನು ಹರಡಿ, ಅದರ ತೇವಾಂಶವನ್ನು ತೆಗೆದು ಗರಿ ಗರಿ ಮಾಡಿ ಅರಳಿಸುವ ಕಲೆ ಆಪ್ತರಲ್ಲಿ ಮಾತ್ರ ಇರುತ್ತದೆ ಅಂಥಹ ಆಪ್ತರ ಸಾಲಿನಲ್ಲಿ ಮೊದಲೇ ಇರುವುದು ಅಮ್ಮಅಲ್ಲವೇ..

  ಸುಂದರ ಕುಸುರಿ ಮಾಡಿದ ಪದಗಳ ಅಲಂಕಾರ.. ಆಳವಿದ್ದರು ಅಳತೆಗೆ ತಾಕುವ ಭಾವ.. ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಶ್ರೀಕಾಂತ್ ಅಣ್ಣಾ..
   ಕೆಲವೊಮ್ಮೆ ನಮ್ಮೊಳಗಿನ ನಮ್ಮನ್ನು ಎಂತಹ ಆತ್ಮೀಯರು ಎನಿಸಿಕೊಂಡವರಲ್ಲೂ ತೆರೆದುಕೊಳ್ಳಲು ಬರುವುದಿಲ್ಲ ಅಲ್ಲವೇ... ?
   ಒಡಲಾಳದ ಮಾತುಗಳು ಯಾವತ್ತೂ ಹಾಗೆಯೇ..

   -ಧನ್ಯವಾದಗಳು ಸುಂದರ ಪ್ರತಿಕ್ರಿಯೆಗೆ :)

   ಅಳಿಸಿ
 3. ನಿಜ ಅಕ್ಕಯ್ಯಾ,
  ಒಡಲಾಳದಲ್ಲೆಷ್ಟು ಒಳಗುಟ್ಟುಗಳಿವೆಯಲ್ವಾ?
  ಚಂದದ ಪದಗಳು,ಆಪ್ತದ ಭಾವ...
  ತುಂಬಾ ದಿನಗಳ ನಂತರ ಬಂದೆ ಮೌನ ರಾಗವ ಕೇಳೋಕೆ.
  ಹತ್ತಿರ ಅನ್ನಿಸ್ತು

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ತುಂಬಾ ದಿನಗಳ ನಂತರ ಬಂದರೂ ಅದೇ ಹಳೆಯ ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ್ದೀಯಾ.. ಮೆಚ್ಚಿದ್ದಿಯಾ..
   ಧನ್ಯವಾದಗಳು ಪುಟ್ಟಾ...

   ಅಳಿಸಿ