ಮಾರ್ಚ್ 24, 2014

ಹನಿ ಹನಿ ಇಬ್ಬನಿ

1. ಅವಳ
ಮೌನದ ಅಂತರಾಳ
ಹುಡುಕ ಹೊರಟವನ
ಕಣ್ಣಲ್ಲಿ ಬೆಳಗು-ಬೆರಗೂ..!

2. ಕೆನ್ನೆಗೆ ಮುತ್ತಿಡುವ
ಮುಂಗುರುಳು
ನನ್ನವನ
ಪ್ರತಿಸ್ಪರ್ಧಿ..!
 
3. ನಿನ್ನೊಲವ ಕಂಗಳು
ಆಗೀಗ್ಗೆ ದಿಟ್ಟಿಸುವಾಗ
ಹೂತು ಹಾಕಿದ ನೆನಪುಗಳೂ
ಎದ್ದು ಕೂರುತ್ತದೆ
ಪ್ರೇಮದ ಪಳೆಯುಳಿಕೆಯಂತೆ. 
 
4. ಅವನ ಬಜಾರಿ ಹುಡುಗಿಯ
ಮೌನವೂ ಎದೆ ತಾಕುತ್ತದೆ
ಅವಳ ಒಲವ ಕಂಗಳ ದಿಟ್ಟಿಸಿದಾಗ
ಮುಂಗುರಳ ಸದ್ದಿಗೆ ಕಿವಿಯಾದಾಗ.. !
 
5. ಕಂಗಳ ಓದಿ
ಅಕ್ಷರದ ದೀಪ
ಹಿಡಿಯಬಲ್ಲೆಯಾದರೆ
ಬದುಕು ಬೆಳಗುವ ಕ್ರಿಯೆ ನಿನಗೆ
ಅಸಾಧ್ಯವಲ್ಲ ಬಿಡು.. !
 
6. ಭೋರ್ಗರೆದು ಸುರಿವ
ಹುಡುಗನಿಗಿಂತ
ಒಲವ ತುಂತುರು ಹರಿಸುವ
ಸೋನೆ ಹುಡುಗ ಇಷ್ಟವೆನಗೆ.

7. ಅಮರತ್ವ ದಕ್ಕಿದರೆ
ಪ್ರೇಮದ ಉತ್ಕಟತೆ
ಕನಸಾಗಿ ಬಿಡುತ್ತಿತ್ತೇನೋ

8. ಮುಖಪುಸ್ತಕದ
ಸಂದೇಶಗಳ
ಸ್ಮೈಲಿಗಳಲ್ಲಿ
ಜೀವಂತವಿಲ್ಲದ ನಗು...!
 
9. ಅವನ ತೆರೆದ ಬಾಹುಗಳಲ್ಲಿ
ಹುದುಗಿಕೊಳ್ಳುವಾಗ
ಸುಡು ವಿರಹದ
ಘೋರ ಅಂತ್ಯ..
 
10.ವಿರಹದ ನೋವು
ಭರಿಸಲಾರದ ಅವನು
ಮತ್ತೆ ತನ್ನವಳ ಸೇರಿದ್ದು
ಕರು ತಾಯಿಯ ಮಡಿಲಿಗೆ
ಮರಳಿದಂತೆ..

 

ಮಾರ್ಚ್ 13, 2014

ಹನಿ ಹನಿ ಇಬ್ಬನಿ..

1.  ಏಕಾಂತವೆನ್ನುವುದು
ಆತ್ಮದೊಂದಿಗಿನ ಸಾಂಗತ್ಯ
ಅಲ್ಲಿ ಬೆಳಕಿದೆ
ಏಕಾಂಗಿಯೆಂದರೆ
ಇದ್ದೂ ಇಲ್ಲವಾದ ಒಂಟಿತನ
ಸವೆದ ದಾರಿಯಲ್ಲಿ
ಪಡಿ ಮೂಡದ ಹೆಜ್ಜೆಗಳು

2. ನಡು ರಾತ್ರಿಯ ಕತ್ತಲಲ್ಲಿ
ಕದಲದ ಹೆಜ್ಜೆಗಳು
ಎದೆಯೊಳಗೆ ಮಿಂಚು ಹುಳುವಿನ
ಸುಳುಹೂ ಇಲ್ಲ
ದಿಕ್ಕು ತೋಚದವಳಂತೆ ಕುಳಿತು ಬಿಟ್ಟಿದ್ದೇನೆ
ಒಳಗೆ ಕತ್ತಲೆಂದರೆ ಬರೀ ಕತ್ತಲು 


3. ಇಂಥವರೊಂದಿಗೆ ಏಗಲಾರೆ
ಎಂದವರೂ
ನೀಗಲಾರದ ಕೊರತೆಗಳಿಗೆ
ಶರಣಾಗಿದ್ದಾರೆ.
ಏಗುತ್ತಿದ್ದಾರೆ.


4. ಮಗಳಿಗೆ

ಅರ್ಬುದ ರೋಗವೆಂದು
ಕಣ್ಣೀರಿಟ್ಟವ
-ವೈದ್ಯ..!

5.  ಯುದ್ಧವಿಲ್ಲದೆ ಪಂದ್ಯ
ಗೆಲ್ಲುವುದೆಂದರೆ
ಕುಂತಿಯ ಮಕ್ಕಳಿಗೆ
ಪಾಂಡು ಅಪ್ಪನಾದಂತೆ.ಮಾರ್ಚ್ 6, 2014

ಬೆಳಕು ಹರಿವುದು ಬೇಡ.. !

ಬೆಳಕು ಹರಿವುದು ಬೇಡ.. !
ಕತ್ತಲಲ್ಲಿ ಕೂತ ಹೆಣ್ಣು
ಚಡಪಡಿಸುತ್ತಾಳೆ
ಬೆಳಕಿನ ಮುಖವಾಡದಲ್ಲಿ
ಮೈಮೇಲೆ ಹರಿದಾಡುವ
ನೂರು ಕಣ್ಣುಗಳಿಗಿಂತ
ತನ್ನ ತಾನೇ ನೋಡಿಕೊಳ್ಳಲಾಗದ
ಕಾರಿರುಳೇ ಹಿತವೆನಗೆ. 

ಬೆಳಕು ಹರಿವುದು ಬೇಡ..!
ಸೋತ ಹೆಣ್ಣು ಹುಲುಬುತ್ತಾಳೆ
ತಾಳಿ ಭಾಗ್ಯವನ್ನೇ ಗೆಲ್ಲಲಾರದೆ
ಸವತಿಯೊಂದಿಗೆ ಸೆಣಸಾಡಿ
ಸೋತು ಸವೆದ ಬದುಕಿನ ಮುಖವನ್ನು
ತೋರಲಾರದವಳಿಗೆ
ಜಗದ ಬೆಳಕು ಬೇಕಿಲ್ಲವಂತೆ 

ಬೆಳಕು ಹರಿವುದು ಬೇಡ.... !
ಒಂಟಿ ಹೆಣ್ಣು ಬೇಡುತ್ತಾಳೆ
ಕತ್ತಲೆಗೆ ಕಟ್ಟಳೆಯಿಲ್ಲಾ
ಬೆಳಕಿನ ಬಣ್ಣಗಳಿಗೆ
ಬದುಕಿನ ಕತ್ತಲ ನೀಗಿಸೋ ದರ್ದಿಲ್ಲ.
ಇರುಳೆಂದರೆ ಒಂಟಿ ಮನಕ್ಕೆ ಆತ್ಮನ
ಪರಿಚಯವಾಗುವ ಹೊತ್ತು 
ಬೆಳಕು ಹರಿವುದು ಬೇಡ!
 
ಒಂದರ್ಥದ ಬೆಳಕಿನ ಭಯದಲ್ಲಿ
ಅವಳಂಥವರ ಮನ ಚೀರುತ್ತದೆ.
-ಬೆಳಕು ಹರಿವುದು ಬೇಡ!
 

(ಯಾವುದೋ ಬೇಸರಕ್ಕೆ ಕತ್ತಲಿಗೆ ಮುಖ ಮಾಡಿ ಕುಳಿತ ಸಂದರ್ಭದಲ್ಲಿ, ಬೆಳಗಾಗದಿರಲಿ ಎಂಬ ಹುಚ್ಚು ಯೋಚನೆಯಲ್ಲಿ ಮೊಬೈಲ್ ಟೈಪಿಸಿದ ಸಾಲುಗಳು ಇವು ...ಇಷ್ಟವಾದರೂ ಆಗಿಲ್ಲವಾದರೂ ಹೇಳಿ..... )