ಮಾರ್ಚ್ 24, 2014

ಹನಿ ಹನಿ ಇಬ್ಬನಿ

1. ಅವಳ
ಮೌನದ ಅಂತರಾಳ
ಹುಡುಕ ಹೊರಟವನ
ಕಣ್ಣಲ್ಲಿ ಬೆಳಗು-ಬೆರಗೂ..!

2. ಕೆನ್ನೆಗೆ ಮುತ್ತಿಡುವ
ಮುಂಗುರುಳು
ನನ್ನವನ
ಪ್ರತಿಸ್ಪರ್ಧಿ..!
 
3. ನಿನ್ನೊಲವ ಕಂಗಳು
ಆಗೀಗ್ಗೆ ದಿಟ್ಟಿಸುವಾಗ
ಹೂತು ಹಾಕಿದ ನೆನಪುಗಳೂ
ಎದ್ದು ಕೂರುತ್ತದೆ
ಪ್ರೇಮದ ಪಳೆಯುಳಿಕೆಯಂತೆ. 
 
4. ಅವನ ಬಜಾರಿ ಹುಡುಗಿಯ
ಮೌನವೂ ಎದೆ ತಾಕುತ್ತದೆ
ಅವಳ ಒಲವ ಕಂಗಳ ದಿಟ್ಟಿಸಿದಾಗ
ಮುಂಗುರಳ ಸದ್ದಿಗೆ ಕಿವಿಯಾದಾಗ.. !
 
5. ಕಂಗಳ ಓದಿ
ಅಕ್ಷರದ ದೀಪ
ಹಿಡಿಯಬಲ್ಲೆಯಾದರೆ
ಬದುಕು ಬೆಳಗುವ ಕ್ರಿಯೆ ನಿನಗೆ
ಅಸಾಧ್ಯವಲ್ಲ ಬಿಡು.. !
 
6. ಭೋರ್ಗರೆದು ಸುರಿವ
ಹುಡುಗನಿಗಿಂತ
ಒಲವ ತುಂತುರು ಹರಿಸುವ
ಸೋನೆ ಹುಡುಗ ಇಷ್ಟವೆನಗೆ.

7. ಅಮರತ್ವ ದಕ್ಕಿದರೆ
ಪ್ರೇಮದ ಉತ್ಕಟತೆ
ಕನಸಾಗಿ ಬಿಡುತ್ತಿತ್ತೇನೋ

8. ಮುಖಪುಸ್ತಕದ
ಸಂದೇಶಗಳ
ಸ್ಮೈಲಿಗಳಲ್ಲಿ
ಜೀವಂತವಿಲ್ಲದ ನಗು...!
 
9. ಅವನ ತೆರೆದ ಬಾಹುಗಳಲ್ಲಿ
ಹುದುಗಿಕೊಳ್ಳುವಾಗ
ಸುಡು ವಿರಹದ
ಘೋರ ಅಂತ್ಯ..
 
10.ವಿರಹದ ನೋವು
ಭರಿಸಲಾರದ ಅವನು
ಮತ್ತೆ ತನ್ನವಳ ಸೇರಿದ್ದು
ಕರು ತಾಯಿಯ ಮಡಿಲಿಗೆ
ಮರಳಿದಂತೆ..

 

4 ಕಾಮೆಂಟ್‌ಗಳು:

 1. ಹನಿ ಹನಿ ಇಬ್ಬನಿ ಎನ್ನುತ್ತಾ ಬಸಿದು ಬಸಿದು ಹಾಕುವ ಭಾವ ಪೂರ್ಣ ಪದಗಳ ಮೆರವಣಿಗೆಯಲ್ಲಿ ಜೊತೆ ಜೊತೆ ಹೆಜ್ಜೆ ಹಾಕಿದಷ್ಟು ಸಂತಸ ನನ್ನದು. ಅದೇನು ಬರೀತೀಯ... ಅಬ್ಬ ಅಗಸ್ತ್ಯ ಮಹರ್ಷಿಗಳು ಒಂದೇ ಆಪೋಶನದಲ್ಲಿ ಸಪ್ತ ಶರಧಿಯನು ಕುಡಿದ ಹಾಗೆ.. ಹನಿಗಳು ಸೂಸುವ ಸಂದೇಶ, ಅದರ ಒಳ ಮಾಧುರ್ಯ.. ಸೂಪರ್ ಪಿ ಎಸ್...

  ಪ್ರತಿ ಹನಿಯು ನಶೆ ಏರಿಸುತ್ತದೆ.. ಜ್ಞಾನದ ದಾಹವನ್ನು ಹೆಚ್ಚಿಸುತ್ತದೆ.. ಬದುಕನ್ನು ಪ್ರೀತಿಸಲು ದಾರಿ ಮಾಡಿಕೊಡುತ್ತದೆ.

  ಇಷ್ಟವಾದ ಸಾಲುಗಳು

  ಕಂಗಳ ಓದಿ
  ಅಕ್ಷರದ ದೀಪ
  ಹಿಡಿಯಬಲ್ಲೆಯಾದರೆ
  ಬದುಕು ಬೆಳಗುವ ಕ್ರಿಯೆ ನಿನಗೆ
  ಅಸಾಧ್ಯವಲ್ಲ ಬಿಡು.. !

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಅಣ್ಣಯ್ಯಾ..
   ನಿಮ್ಮ ಮೆಚ್ಚುಗೆಯ ಮಹಾಪೂರದಲ್ಲಿ ಕೊಚ್ಚಿಹೋದೆ
   -ಖುಷಿಯಾಯಿತು ... :)

   ಅಳಿಸಿ
 2. ಸುಂದರ ಚುಟುಕುಗಳು!
  "ಮುಖಪುಸ್ತಕದ
  ಸಂದೇಶಗಳ
  ಸ್ಮೈಲಿಗಳಲ್ಲಿ
  ಜೀವಂತವಿಲ್ಲದ ನಗು...!" - ಬಹಳ ಇಷ್ಟವಾಯ್ತು

  ಪ್ರತ್ಯುತ್ತರಅಳಿಸಿ