ಏಪ್ರಿಲ್ 26, 2014

ಹನಿ ಹನಿ ಇಬ್ಬನಿ..

1. ಹುಡುಗಿಯರು ಹಾಗೆಲ್ಲಾ
ಒಲಿಯುವುದಿಲ್ಲಾ..
ನೀವಾಗೇ ಸಿಕ್ಕುಬಿಡಿ ಹೂವುಗಳೇ
ಅವರೇ ದಕ್ಕಿಸಿಕೊಳ್ಳುವ ಮುನ್ನ
ಕೊನೆಪಕ್ಷ ಉಸಿರುಳಿದಿರುತ್ತದೆ
ಸೇಡು ತೀರಿಸಲೋಸುಗವಾದರೂ..!

 
2. ಅಮ್ಮಾ...!
ಪ್ರೀತಿಯ ಒಡಲು 
ಮಮತೆಯ ಕಡಲು

3. ಸೋತು ತಳ ಹಿಡಿದಾಗಿದೆ
ಇನ್ನೇನಾದರೂ ಘಟಿಸಿದರೆ
ಅದು ಗೆಲುವೇ
ಅಂದುಕೊಳ್ಳುವಾಗ
ಪಾತಾಳದ ಅರಿವಿರಲಿಲ್ಲ ನನಗೆ!
 
4. ಅಪ್ಪ ಜಾಲಿ ಮನುಷ್ಯ
-ಕುಡಿದಾಗ
ಪುಟ್ಟ ಮಣ್ಣಿನ ಮಡಕೆ ಒಡೆದು
ಕೂಡಿಸಿಟ್ಟ ಚಿಲ್ಲರೆ ಕೊಟ್ಟಳು
ಅಪ್ಪ ನಕ್ಕ.. ಮಗಳೂ ..!


5.
ಒಳಗೆ ಸುಡುವ ಬೆಂಕಿಗೆ 
ಕಣ್ಣಿನ ನೀರು ಸುರಿದು 
ಒಡಲ ಬೇಗುದಿಯ ನೀಗಿಸಲು 
ಪ್ರಯತ್ನಿಸುತ್ತದೆ.. 
ಹೌದು.. ಕಣ್ಣೀರಿಗೆ ಕರುಣೆಯಿದೆ !
 
 

ಏಪ್ರಿಲ್ 22, 2014

ಹನಿ ಹನಿ ಇಬ್ಬನಿ..

1. ಅವನು ತನ್ನ ಜೀವನ
ತೆರೆದ ಪುಸ್ತಕ ಎನ್ನುತ್ತಿದ್ದ .
ನಾನೋ ಓದು ತಿಳಿಯದ
ಅನಕ್ಷರಸ್ಥೆ ..!

2. ಸದಾ ನನ್ನನ್ಯೂನತೆಗಳಿಂದ
ಕೊರಗುವ ಬಡಿದಾಡುವ
ಅವನನ್ನು ನೆನೆವಾಗ
ದೂರವಿದ್ದು ದೇವರಾಗಿದ್ದ ದಿನಗಳ ನೆನಪು
ಕಣ್ಣಿಂದ ಜಾರುತ್ತದೆ...!
Feeling: ಕೆಲವೊಮ್ಮೆ ಹತ್ತಿರವೂ ಅಂತರ ಸೃಷ್ಟಿಸುತ್ತದೆ

3. ಒಬ್ಬರಿಂದೊಬ್ಬರು ದೂರವಿರುವುದನ್ನು 
ಅಂತರವೆನ್ನುತ್ತಿದ್ದರು
ಜೊತೆಯಿದ್ದೇವೆ  - ಉಸಿರಿಲ್ಲದ ನಾವೆಯಲ್ಲಿ 
ದೂರದ ಅರ್ಥ ಹತ್ತಿರವಾಗಿದೆ!

4. ನನಗೆ ಗಂಡು ಮಕ್ಕಳ ಸ್ನೇಹ 

ಅವನಿಗೆ ಹೆಣ್ಣು ಮಕ್ಕಳದು 
ಅದಕ್ಕೆ ನಮ್ಮಿಬ್ಬರದು 
'ಮೇಡ್ ಫಾರ್ ಈಚ್ ಅದರ್' ಜೋಡಿ 
ಅವನು ಹೆಣ್ಮನ ಬಲ್ಲ 
ನಾ ಗಂಡು ಹೃದಯ ಬಲ್ಲೆ ..!

5. ಬದುಕಿನ ಕರಾಳ ಕಪ್ಪನ್ನು 
ಅಡಗಿಸಬೇಕೆಂದರೆ 
ಮೇಕಪ್ ಅನಿವಾರ್ಯ 
ಎಂದಳಾಕೆ...!!


ಏಪ್ರಿಲ್ 9, 2014

ಹನಿ ಹನಿ ಇಬ್ಬನಿ..

1. ಸಾಲು ಸಾಲು ಸೋಲುಗಳು
ಮಡಿಲೊಳಗೆ ಬಿದ್ದಾಗ
ಬದುಕುವ ಛಲಕ್ಕೆ
ಹುಟ್ಟಿನ ಸಂಭ್ರಮ..!


2. ನೀಳಜಡೆಯ ಹುಡುಗಿಯ
ಕನವರಿಕೆಯಲ್ಲಿ
ಇದ್ದವನಿಗೆ ಸಿಕ್ಕಿದ್ದು
ಮೋಟು ಜಡೆಯ ಬೆಡಗಿ..!


3.
ಮನವಿತ್ತು
ತಿಳಿಕೊಳದಂತೆ
ಕದಡಿದ್ದಾರೆ
ಕಡಲಂತಾಗಿದೆ...!
ಹಂಬಲ: ಮತ್ತೆ ಕೊಳವಾಗಬೇಕು.. ತಿಳಿಯಾಗಬೇಕು.

4. ನಿನ್ನೆತ್ತರ ಮುಟ್ಟುವ
ಹಂಬಲಕ್ಕೆ ಬಿದ್ದು
ತುದಿಗಾಲಲ್ಲಿ ನಿಂತಿದ್ದೇನೆ ಹುಡುಗಾ!
ಏಟುಕಿಬಿಡು ಅರೆಗಳಿಗೆ
ಈ ಕರಗಳಿಗೊಮ್ಮೆ ..!
 
5. ಗಾಢ ಕತ್ತಲು ತಬ್ಬಿಕೊಂಡಿದೆ
ಉಸಿರುಗಟ್ಟಿಸುವ ಆತುರದಲ್ಲಿ.
ಜೀವ ಹೋಗುವ ಮುನ್ನ
ನಿನ್ನನ್ನೊಮ್ಮೆ ನೋಡಬೇಕು
ಹನಿ ಕಿರಣವೇ..!