ಆಗಸ್ಟ್ 19, 2014

ಹನಿ ಹನಿ ಇಬ್ಬನಿ..

1.ಕೋಪವೂ ನಿಷ್ಕ್ರೀಯ
ಅಸಹಾಯಕತೆಯ
ಮಡಿಲಲ್ಲಿ...!

2. ಒಲವ ಘಾಸಿಗಳನ್ನು
ಸೈರಿಸಿಕೊಳ್ಳಲೇಬೇಕು
ಬದುಕು ಒಲವಿಗಿಂತ
ತೀವ್ರವಾಗಿರುತ್ತದೆ..!


3. ಉಳಿಸಿಕೊಳ್ಳಬೇಕಾದರೆ
ಕಳೆದೊಮ್ಮೆ ಗೊತ್ತಿರಬೇಕು
ಅದು ಬಲವೇ ಆದರೂ
ಒಲವೇ ಆದರೂ...!
 
4.ಗೆಲುವಿನೂರಿಗೆ
ಪಯಣವಿಟ್ಟ ಮೊದಲದಿನ
ಹೀನಾಯ ಸೋಲನ್ನ ಅಪ್ಪಿದ್ದೆ
-ಒಪ್ಪಿದ್ದೆ..!


5. ನೀ ನನ್ನೊಳಗೆ
ಹನಿಯುವುದು ಬೇಡಿತ್ತು
ಒಣ ಬಂಜರಾಗಿಯೇ
ಇದ್ದುಬಿಡುತ್ತಿದ್ದೆ -ಮೊದಲಿನಂತೆ.
ಹನಿದು ದೂರವಾಗಿದ್ದಿಯಾ
ದಾಹ ಶುರುವಾಗಿದೆ!
 
6.ಎಲ್ಲೊ ಓದಿದ್ದೆ
ಸೋತವನು ಗೆಲ್ಲಬಲ್ಲ
ನೆನಪಾಯಿತು
-ನಾನು ಸೋತಿದ್ದೇ ಒಲವಲ್ಲಿ!
 
7. ಕಬ್ಬಿನ ಬಗ್ಗೆ
ಕವಿತೆ ಬರೆದ ಕವಿಯ
ಮೆಚ್ಚಿದಳು.
ಅವ ರಸಹೀರಿ ಕಳಿಸಿದ!
 
8.ಇರುಳ ಹೆಜ್ಜೆಯ 
ಭರಿಸಲು
ಬೆಳಕೇ ಬೇಕಿಲ್ಲಾ
ಅಂತರಾತ್ಮದ ಕಿಡಿಯೂ ಸಾಕು!
 
9. ಒಡಲಲ್ಲಿ ಕೆಂಡ ಕಟ್ಟಿಕೊಂಡು
ಓಡಾಡುತ್ತಿದ್ದೇನೆ
ಪಾಪಾ..!
ತುಟಿಗದು ಗೊತ್ತಿಲ್ಲಾ...
 
10. ಮನದಂಗಳದ
ಕಣ್ಣೀರಹೊಳೆ ಹೆಪ್ಪುಗಟ್ಟಿ
ಕೂತಿರಬೇಕಾದರೆ
ಬಿರಿದ ತುಟಿಯಲ್ಲಿ
ಆತ್ಮನಿಲ್ಲ.. ! 
 


ಆಗಸ್ಟ್ 6, 2014

ಹನಿ ಹನಿ ಇಬ್ಬನಿ...!

1. ನೀ ತಿಳಿನೀರ ಕೊಳವೆಂದ
ಹೃದಯದಲ್ಲಿ ಪ್ರತಿಫಲಿಸಿದ
ಅವನ ಬಿಂಬ ತೋರಿಸಿದೆ!

 
2. ಮಳೆಯಾಗಿದೆ
ಕನಸಿನಾಗಸದ ಕಪ್ಪು
ತಿಳಿಯಾಗಿದೆ.. !

3. ಮೌನದಿಂದ
ನೋವು ಸಂಭವಿಸುವುದಾರೆ
ನಾನು ಮಾತು.
ಮಾತಿನಿಂದಾದರೆ
ನಾ ಮೌನಿ..!

4. ಹಗಲ ಹಾದಿ ತುಳಿದವರಿಗೆ
ಇರುಳೆಂದರೆ ಕುರುಡು..
ಇರುಳಲ್ಲಿ ತೆವಳಿ
ಹಗಲು ದಕ್ಕಿಸಿಕೊಂಡವರಿಗೆ
ಇರುಳು - ಹಗಲೂ ಬೆಳಕೇ!


5.
ಬದುಕ ಕಾರ್ಗತ್ತಲನ್ನೂ
ಪ್ರೀತಿಸಬೇಕು
ಬೆಳಕಿನ ದಾರಿ
ಕಂಡುಕೊಳ್ಳಬೇಕಾಗಿರುವುದು
ಅಂಧಕಾರದಲ್ಲೇ..!


6.
ಬೆಳಕಿಗೆ ನಡೆದ ದಾರಿಗೆ
ಕತ್ತಲಲ್ಲಿ ಉರುಳಿದ
ಕಂಬನಿಗಳ ಸಾಕ್ಷಿ..!


7.
ನೋವನಾಲಿಸುವ ಹೃದಯ
ಮಿಡಿತ ನಿಲ್ಲಿಸಿದಾಗ
ನೋವುಂಡ ಒಡಲು
ಮಾತ ನಿಲ್ಲಿಸುತ್ತದೆ..!

8.
ಅವನೊಬ್ಬ ಅವಳ
ಹಸಿ ಹಸಿ ತಿಂದು ಬಿಟ್ಟಿದ್ದ
ನೆತ್ತರ ಕುಡಿವ ಹಸಿ ಬಯಕೆ
ಅವಳಿಗೆ ಶುರುವಾಗಿಬಿಟ್ಟಿತ್ತು.

 
9. ನೀ ನನ್ನೆಲ್ಲಾ
ನೋವುಗಳಿಗೆ ಪರಿಹಾರ
ಆಗಲೆಬೇಕೆಂದೆನಿಲ್ಲಾ
ಸಮಾಧಾನವಾಗು
-atleast..!
 
10.ಬಳಸಿಕೊಳ್ಳುವ
ಹಕ್ಕಿಲ್ಲ
ಒಲಿಸಿಕೊಳ್ಳದ ವಿನಃ.