ಡಿಸೆಂಬರ್ 24, 2014

ಹನಿ ಹನಿ ಇಬ್ಬನಿ...!

1.ಬೆಳಂದಿಗಳ ತಂಪು ರಾತ್ರಿ
ಹುಡುಗಿ ಬೆಚ್ಚಗಿನ ಕನಸು ಹೆಣೆಯುತ್ತಿದ್ದಳು
ಒಳಗಿನ ಕೋಣೆಯ ಹುಡುಗಾ
ಧಗಧಗ ಉರಿಯುತ್ತಿದ್ದ..!

2.ನಿನ್ನಿಂದ ನಿರಾಕರಿಸಲ್ಪಟ್ಟ ಪ್ರೇಮ
ಮತ್ತು
ನನ್ನಿಂದ ನಿರಾಕರಿಸಲ್ಪಡುವ ನೋವುಗಳದ್ದು
ಒಂದೇ ತೂಕ..!

3. ಅವ
ಬೆಟ್ಟದ ತುದಿಯಲ್ಲಿ
ನನ್ನ ನೆನೆದನಂತೆ
ನನಗಿಲ್ಲಿ ಥಂಡಿ -ಜ್ವರ -ನೆಗಡಿ -ಕೆಮ್ಮು !

4. ಬಾಂಬ್ರರ ಮನೆಹುಡುಗನಿಗೆ
ಸಸ್ಯಹಾರದ ಪಾಠ ನಡೆಯುತ್ತಿತ್ತು
ಬೇಲಿಯಾಚೆ ಕಣ್ಣು ನೆಟ್ಟಿದ್ದ ಅವ
ಹೊಲತಿಯ ಬೆತ್ತಲಾಗಿಸುತ್ತಿದ್ದ!

5. ಒಂಟಿ ಮರದ ಗೆದ್ದಲ ಕೊಂಬೆಗೆ
ಹಕ್ಕಿ ಗೂಡು ಕಟ್ಟಲಿ
ನಾ ಚಿಲಿಪಿಲಿ ಕೇಳುತ್ತೇನೆಂಬ
ಹುಚ್ಚುಚ್ಚು ಹಂಬಲ!ಡಿಸೆಂಬರ್ 6, 2014

ಹನಿ ಹನಿ ಇಬ್ಬನಿ..!

1. ಬೆಳದಿಂಗಳಿಗೆ
ಮೈಚೆಲ್ಲಿ ಮಲಗಿದ್ದ ಅವಳನ್ನು
ಅನಾಮತ್ತು ಎತ್ತಿಕೊಂಡು
ಒಳಗೆ ಹೋದ ಅವನಿಗಿದ್ದಿದ್ದು
ಚಂದ್ರನ ಮೇಲೆ ಮತ್ಸರವಾ..?

2. ಹುಡುಗಾ...!
ಭೌತಶಾಸ್ತ್ರದಲ್ಲಷ್ಟೇ
ವಿದ್ಯುತ್ ಪ್ರವಹಿಸುವುದು ಎಂದುಕೊಂಡಿದ್ದೆ.
ನೀನೊಮ್ಮೆ ಸ್ಪರ್ಶಿಸಿದ ಮೇಲಷ್ಟೇ
ಜೀವವಿಜ್ಞಾನದಲ್ಲೂ ವಿದ್ಯುತ್ ಪ್ರವಹನವಿರುವ
ಸಂಗತಿ ತಿಳಿದದ್ದು.

3. ಅನೈತಿಕ ಸಂಬಂಧವೆಂದರೆ

ಬರಗೆಟ್ಟ ಬರಗಾಲದ ದಿನಗಳಲಿ
ಮಳೆಗೆ ಹೊಂಚು ಹಾಕಿ
ಕೂತ ಇಳೆಯೊಡಲ ಬೆಂಕಿ
ಷವರಿನಡಿಯಲ್ಲಿ ನಿಂತು
ಧಗೆ ತೀರಿಸಿಕೊಳ್ಳುವುದು ಅಷ್ಟೇ!

4. ನೀ ಕೊಟ್ಟ
ಯಾವುದನ್ನೂ ನಾ ಹಿಂದಿರುಗಿಸಿಲ್ಲ
ಪ್ರೀತಿಯನ್ನೂ ..!?
ಅದಕ್ಕೆ ನನ್ನೊಡಲಿಗೆ
ನೋವು ಸುರಿದು ಹೋಗಿ ಬಿಟ್ಟೆಯಾ?

5.ಪ್ರೇಮದೊಡಲ ಸೇರೋ ತವಕಕ್ಕೆ
ಒಂದೇ ಉಸಿರಿನಲ್ಲಿ

ಧಾವಿಸಿ ಬಂದು

ಶರಧಿಯೊಳಗೆ ಲೀನವಾದ

ನದಿಗೀಗ ಅಸ್ವಿತ್ವದ ಹಂಗಿಲ್ಲ