ಏಪ್ರಿಲ್ 3, 2015

ಹನಿ ಹನಿ ಇಬ್ಬನಿ!

1. ಅವನು ಅವಳ
ತುಟಿಗಳನ್ನೇ ದಿಟ್ಟಿಸುತ್ತಿದ್ದ
-ಬಾಯರಿದವನಂತೆ
ಇವಳು ಅವನ
ಭರ್ತಿ ಜೇಬನ್ನೇ ನೋಡುತ್ತಿದ್ದಳು
-ಹಸಿದವಳಂತೆ!

2. ನೆತ್ತಿಯ ಮೇಲೆ
ಹಸಿದ ಕತ್ತಿಯು ತೂಗು
ಬಿರುಕು ಬಿಟ್ಟ
ಹೃದಯದಲ್ಲಿ
ನೆತ್ತರ ಒಸರು!

3.ನೋವುಗಳಿಗೆ
ನನ್ನ ಭರವಸೆಯ ಜ್ಯೋತಿಯನ್ನು
ನಂದಿಸುವ ಶಕ್ತಿಯಿಲ್ಲಾ
ನನ್ನ ಕಣ್ಣ ಕಾಡಿಗೆ
ಕಣ್ಣೀರಿಗೆ ಅಳಿಯುವುದಿಲ್ಲಾ!

4.ಅವನೆಂದರೆ
ಬೆಳಂದಿಗಳ ರಾತ್ರಿ
ಭರಪೂರ ಪ್ರೀತಿ ಸುರಿವ
ಚಂದಿರ!

5. ಒಂದೆರಡು ಹನಿ
ಬೆಳಕಾದರೂ ನನ್ನೊಳಗೆ
ಉಳಿಸಿಹೋಗು
ಬರಿದು ಮಾಡದಿರೆನ್ನ
ಆತ್ಮನದೊಂದು ಕಿಡಿಯೂ ಇಲ್ಲದಂತೆ!

6.ನನ್ನ ಸೋಲಿನಲ್ಲಿ
ನಿನ್ನ ಗೆಲುವುದಿರುವುದೇ ಆದರೆ
ಗೆದ್ದು ಬಿಡು ನನ್ನ
ನಿನಗೆ ನಾ ಸೋತಿದ್ದೇನೆ!

7.ಅವಳು ನಗೆ ಚೆಲ್ಲಿ
ಮುಂದೆ ಹೋಗುತ್ತಿದ್ದಳು
ಹಿಂದಿಂದೆ ಹೋಗುತ್ತಿದ್ದ ಇವ
ನಗೆಯ ಹೆಕ್ಕಿ ಜೋಳಿಗೆ ತುಂಬಿಸುತ್ತಿದ್ದ!

8.ಬಗ್ಗಿಸಿದ ತಲೆ
ನೆಲ ಕಂಡಾಗಿದೆ
ಇನ್ನೇನಿದ್ದರೂ
ಮುಗಿಲ ಕಡೆ!

9.ಸಿಹಿಯೆಂದರೆ ಅಷ್ಟಕಷ್ಟೇ ಇವನಿಗೆ
ಅಂದ ಅತ್ತೆಯ ಮಾತಿಗೆ
ಹಿಂದಿನ ರಾತ್ರಿಯಷ್ಟೇ
ಮಧುಪಾನ ಮಾಡಿದ್ದ ಗಂಡನ ನೆನಪಿಗೆ
ಇವಳ ತುಟಿಯಲ್ಲೊಂದು ಮಿಂಚು!

10.ಚಂದ್ರನ ಬೆಳಕ
ಮೀಯ ಹೊರಟವಳಿಗೆ
ಆ ಕ್ಷಣ
ತನ್ನ ಹಗಲಿಗೊದಗುವ ಸೂರ್ಯನ
ನೆನಪಾಗುವುದಿಲ್ಲಾ!