ಜೂನ್ 20, 2015

ಆಷಾಡದ ಮಳೆ


ಕಾಲೇಜು ಮುಗಿವ ಹೊತ್ತಿಗೆ
ಕಾದಿದ್ದು ಬರುವ ಮಳೆಯೆಂದರೆ
ಒಂದೇ ಕೊಡೆಯಡಿಯಲ್ಲಿ
ಮನೆ ತಿರುವಿನವರೆಗೆ ನಿನ್ನೊಡನೆ ನಡೆದ ಸುಖ!
ಕಿಟಕಿಯಾಚೆ ಕಣ್ಣು ನೆಟ್ಟು
ಮಳೆಯನ್ನು ಒಳದೆಳೆದುಕೊಳ್ಳುವಾಗ
ನೀ ಕೊಟ್ಟ ಗೊಂಬೆಗೆ
ಮಡಿಲಲ್ಲಿ ಘೋರ ನಿದ್ದೆ!
ಗುಡುಗಿನ ಆರ್ಭಟಕ್ಕೂ ಅಂಜದೇ
ಅಮ್ಮನ ಮಗ್ಗುಲನ್ನು ಅಗಲಿ
ರೂಮು ಸೇರಿಕೊಳ್ಳುವುದೆಂದರೆ
ನನಗೆ ನಿನ್ನದೇ ಶಾಪ!

ಆಷಾಡಕ್ಕೆ ಮನೆಗೆ ಬಂದ ಅಕ್ಕ
ಫೋನಿಗೆ ಕಚ್ಚಿಕೊಂಡು
ಕಿಲಕಿಲ ನಗುವಾಗ
ತಟ್ಟುತ್ತದೆ ನನಗೂ ಆಷಾಡದ ಬಿಸಿ!

ಫೋನಿನ ತರಂಗಳಲ್ಲಿ
ಬಿಸಿಯುಸಿರುಗಳ ತಲ್ಲಣ
ನಿನ್ನ ಮರುಭೂಮಿಯ ನಗರಿಗೂ
ಆಷಾಡದುರಿಯ ಅರಿವು!

ಅಪ್ಪಯ್ಯನೆನ್ನುತ್ತಿದ್ದರು
ಚಿಕ್ಕವಳ ಮದುವೆಯೂ
ಈ ಸರ್ತಿಯೇ ಮುಗಿಸುವುದಂತೆ
ನಿನಗಿಷ್ಟರಲ್ಲೇ ಬುಲಾವ್ ಬರುತ್ತದೆ

ಬಂದು ಬಿಡಪ್ಪಾ ದೊರೆ
ಅಕ್ಕನೆನ್ನುತ್ತಿದ್ದಳು
ಈ ಮಳೆಗಾಲ ಮುಗಿಯುತ್ತಿದ್ದಂತೆ
ಘೋರ ಚಳಿಯಂತೆ ಇಲ್ಲಿ..!!