ಜುಲೈ 6, 2015

ಹನಿ ಹನಿ ಇಬ್ಬನಿ..!

1.ನಿನ್ನ ನೆನಪಿಗೆ
ಇವನೆದೆಯಲ್ಲಿ ಅಡಗಿ
ಬಿಕ್ಕಿಬಿಕ್ಕಿ ಅತ್ತುಕೊಂಡೆ
ಮೊದಲರಾತ್ರಿ ಭಯವಿರಬೇಕು
-ಅಂದುಕೊಂಡ ಇವ!

2.ಈ ಧೋ ಮಳೆಗೆ
ಕಾಗದದ ದೋಣಿ ಉಳಿಯುವುದಿಲ್ಲ
ಕನಸು ಕಟ್ಟುವುದಾದರೇ 
ಹಡಗೇ ಕಟ್ಟಬೇಕು!

3.ಕವಿತೆಯೆಂದರೆ
ಕವಿಯ ಒಳಹರಿವು
ಹೊರಹರಿಯುವುದು!

4.ರಾತ್ರಿ ಕನಸಿಗೆ ಬರುತ್ತೇನೆಂದು
ಹೇಳಿದ್ದ ಹುಡುಗಾ..!
ನಿದ್ದೆಗೆ ಜಾರುವ ಮುನ್ನ
ಅವನನ್ನು ದಿಂಬಿನಡಿಗೆ ತಂದುಕೊಂಡು
ಕನಸ ಖಾತ್ರಿಪಡಿಸಿಕೊಂಡೆ!

5.ತಿಳಿಯಲಿಲ್ಲವಂತೆ ಅವನಿಗೆ
ಎದೆಯಲ್ಲಿ ಜೀಕಿದ ಹಾಡು
ಹೌದು!
ಮೌನಕ್ಕೆ ಬಾಯಿಲ್ಲ!

6.ಅವಳು ಸ್ನಾನದಿಂದ ಬಂದು
ಜಿನುಗುತ್ತಿದ್ದಾಳೆ..!
ಇದೀಗ
ಇವನೊಳಗೆ ಭರಪೂರ ಮಳೆ.

7.ಎದೆಕೊಳದ ಶಾಂತ ನೀರಿಗೆ
ಕಲ್ಲು ಬಿದ್ದಿದೆ
ಕಂಗಳು ತುಳುಕಿದೆ!

8.ಸ್ನಾನದ ಮನೆಯಿಂದ
ಗೆಜ್ಜೆ ಸದ್ದು ಮಾಡುತ್ತಾ
ಹೊರಗೆ ಬರುವ ಜಿಂಕೆಯ ಕಂಗಳಲಿ
ಹುಲಿಯ ನಶೆ.
ಛೇ!! ಆಷಾಡದಲ್ಲಿ ಅಧಿಕಮಾಸ!

9.ಮಳೆಗೆ ಬೊಗಸೆಯೊಡ್ಡುವುದೆಂದರೆ
ಅವನೊಲುಮೆಯಲ್ಲಿ
ಒಂದೀಡಿ ನೆನೆಯಬೇಕೆಂದಿದ್ದವಳು
ಇಷ್ಟಾದರೂ ಸಿಗಲೀ ಎಂಬಂತೆ
ಕೈಚಾಚುವುದು..!!

10.ಮಾಗಿಯಂತೆ
ನೆನಪೆಲ್ಲಾ ಕಳಚಿ
ಬೋಳಾಗಿ ನಿಂತಿದೆ ಮರ
ನಾನೂ ನಿನ್ನನ್ನು ಕಳಚಿದ್ದೇನೆ
ಮಾಗಿದ್ದೇನೆ..!