ಆಗಸ್ಟ್ 19, 2015

ಹನಿ ಹನಿ ಇಬ್ಬನಿ..!


. ಆ ಬೆಳಂದಿಗಳ ರಾತ್ರಿಗೆ
ಅವಳ ಕಂಗಳಲ್ಲಿ
ಬೀಡು ಬಿಟ್ಟಿದ್ದ ಇವನ ಕಂಗಳು
ಚಂದಿರನ ಬೆಳಕು ಮಬ್ಬು ಎಂದವು!

.ಬೂದಿ ಮುಚ್ಚಿತ್ತು
ಕೈಯಿಟ್ಟೆ
ಸುಟ್ಟುಹೋಯಿತು!

.ಬಡ ತಾಯಿಯ ಮಡಿಲಲ್ಲಿ
ಹಸುಗೂಸು
ಮತ್ತವರ ನಗು!

.ಪೂರ್ಣವಿರಾಮವಿಟ್ಟಳು
ಸನಿಹ ಬಂದವ ಹಣೆಗೊಂದು
ಮುತ್ತನಿಟ್ಟ-ಬೊಟ್ಟನಿಟ್ಟ
ಬದುಕು ಮುಂದುವರಿಯಿತು!

. ಅವ ಗೆದ್ದ ಹೆಣ್ಣು
ಪ್ರೀತಿಯ ಪ್ರತಿಷ್ಠೆ
ಬುಸುಗುಟ್ಟಿತು
ಅಂಬೆ ಧಿಗ್ಗನೆದ್ದಳು!

.ಅವಳ ಮೌನ
ಅರ್ಥವಾಗುವುದಿಲ್ಲವಂತೆ
ಇವನಿಗೆ
ಗದ್ದಲ ಶುರುವಿಟ್ಟಿದ್ದಾಳೆ!

.ಆಷಾಡಕ್ಕೆ ತವರಿಗೆ ಬಂದವಳಿಗೆ
ಮಳೆ ಯಾಕಿಷ್ಟು ಸುಡುತ್ತದೆ
ಎಂಬ ಸೋಜಿಗವಾಗಿದೆ!

.ಕೋಗಿಲೆಯೊಂದು
ಬೋಳು ಮರದ ಟೊಂಗೆಯಲ್ಲಿ
ಎದೆಬಿರಿಯೇ
ಹಾಡುತ್ತಿತ್ತು.

.ಬೇಲಿ ಬದಿ
ಬಿರಿದು ನಿಂತ ಹೂವೆಂದರೆ
ಎಲ್ಲರಿಗೂ ಆಸೆ
ಮೋಜು..!

೧೦.ಕಥೆಗಾರನ ಕಥೆಯಲ್ಲಿ
ನಾಯಕಿ ಸತ್ತಿದ್ದಳು
ಎದುರು ಮನೆಯ ಮುಂದೆ
ರಂಗೋಲಿ ಬಿಡಿಸುತ್ತಿದ್ದವಳು
ಸುಖವಾಗಿದ್ದಳು!


(ಜುಲಾಯಿ ೨೦೧೫ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಿತ)